ರೋವರ್ ಉಪಕರಣದಿಂದ ನಿಖರ ಭೂ-ಮಾಪನ

| Published : Jul 21 2025, 12:00 AM IST

ಸಾರಾಂಶ

ಅತ್ಯಾಧುನಿಕ ಡಿಜಿಟಲ್ ಜಿಪಿಎಸ್ ತಂತ್ರಜ್ಞಾನವನ್ನೊಳಗೊಂಡ ರೋವರ್ ಉಪಕರಣದ ನೆರವಿನಿಂದ ಭೂ-ಮಾಪನ ಕಾರ್ಯವನ್ನು ನಿಖರವಾಗಿ ಕೈಗೊಳ್ಳಲು ಸಾಧ್ಯವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು ಅತ್ಯಾಧುನಿಕ ಡಿಜಿಟಲ್ ಜಿಪಿಎಸ್ ತಂತ್ರಜ್ಞಾನವನ್ನೊಳಗೊಂಡ ರೋವರ್ ಉಪಕರಣದ ನೆರವಿನಿಂದ ಭೂ-ಮಾಪನ ಕಾರ್ಯವನ್ನು ನಿಖರವಾಗಿ ಕೈಗೊಳ್ಳಲು ಸಾಧ್ಯವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ತಾಲೂಕಿನ ಬೆಳ್ಳಾವಿ ಹೋಬಳಿ ಬುಗುಡನಹಳ್ಳಿ ಗ್ರಾಮ ಪಂಚಾಯತಿ ಬಳ್ಳಾಪುರ ಗ್ರಾಮದಲ್ಲಿ ಕಂದಾಯ ಇಲಾಖೆ ಹಾಗೂ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಭೂ ಮಂಜೂರಾತಿ ಪೋಡಿ ಪ್ರಕರಣಗಳ ಮತ್ತು ಹೊಸ ಕಂದಾಯ ಉಪಗ್ರಾಮಗಳ ಸೃಜನೆ ಸಂಬಂಧ ತ್ವರಿತ ಅಳತೆಗೆ ಬಳಸುವ ಅತ್ಯಾಧುನಿಕ ರೋವರ್ ಉಪಕರಣಗಳ ವಿದ್ಯುಕ್ತ ಚಾಲನೆ ಮತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಳೆಯ ಸರಪಳಿ ಮಾಪನ ವಿಧಾನವು ಬಹಳ ಸಮಯ ತೆಗೆದುಕೊಳ್ಳುತ್ತದೆಯಲ್ಲದೆ ದೋಷಕ್ಕೆ ಒಳಪಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಭೂಮಿಯ ನಿಖರವಾದ ಅಳೆಯುವಿಕೆಗೆ ಜಿಪಿಎಸ್ ರೋವರ್‌ಗಳ ಬಳಕೆ ಅತ್ಯಂತ ಅವಶ್ಯಕವಾಗಿದೆ. ರೋವರ್‌ಗಳ ಮೂಲಕ ಸೆಂ.ಮೀ. ಮಟ್ಟದ ನಿಖರತೆ ಸಾಧಿಸಬಹುದು. ಈ ವಿಧಾನ ಸರಪಳಿ ಮಾಪನಕ್ಕಿಂತ ಹೆಚ್ಚು ನಿಖರವಾಗಿರುತ್ತದೆ. ರೋವರ್ ಬಳಕೆಯಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಳತೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದರಲ್ಲದೆ, ಜಿಪಿಎಸ್ ರೋವರ್‌ಗಳು ಭೂ ಅಳತೆಯಲ್ಲಿ ಕ್ರಾಂತಿ ಕಾರಕ ಬದಲಾವಣೆಯನ್ನು ತಂದಿದ್ದು, ಇದರ ಕಾರ್ಯಕ್ಷಮತೆ, ನಿಖರತೆ ಸಮಯವನ್ನು ಉಳಿತಾಯ ಮಾಡಲು ನೆರವಾಗುತ್ತದೆ ಎಂದು ಹೇಳಿದರು. ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಈವರೆವಿಗೂ 1598 ಸರ್ಕಾರಿ ಸರ್ವೇ ನಂಬರ್‌ಗಳಲ್ಲಿ ಈಗಾಗಲೇ ನಮೂನೆ 1-5ನ್ನು ಗಣಕೀಕರಣಗೊಳಿಸಲಾಗಿದೆ ಎಂದು ತಿಳಿಸಿದರಲ್ಲದೆ, ಡಿಸೆಂಬರ್ ಮಾಹೆಯೊಳಗಾಗಿ 10,000ಕ್ಕೂ ಹೆಚ್ಚು ಭೂ ಮಂಜೂರಿದಾರರ ಪೋಡಿ ದುರಸ್ತಿ ಕಾರ್ಯ ಕೈಗೊಳ್ಳಲು ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಹೊಸ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಯೋಜನೆಯಡಿ ಗುರುತಿಸಲಾದ ಹೊಸ ಕಂದಾಯ ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್, ಚರಂಡಿ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ಜೊತೆಗೆ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ಇ-ಖಾತಾ ಮಾಡಿಕೊಡಲಾಗುವುದು ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ, ಪ್ರಾಚೀನ ಕಾಲದ ಭೂಮಾಪನ ಪದ್ಧತಿ ಹಾಗೂ ಆಧುನಿಕ ಭೂಮಾಪನ ಪದ್ಧತಿಯ ಬಗ್ಗೆ ಹಂತ ಹಂತವಾಗಿ ವಿವರಣೆ ನೀಡಿದ ಅವರು, ರೋವರ್ ಉಪಕರಣದಿಂದ ವಿಸ್ತಾರವಾದ ಪ್ರದೇಶಗಳನ್ನೂ ಸಹ ಅಳತೆ ಮಾಡಬಹುದಾಗಿದೆ. ಅರಣ್ಯ ಸೀಮೆ, ಬೆಟ್ಟ ಪ್ರದೇಶ, ಅಸಮ ಪ್ರದೇಶಗಳಲ್ಲಿ ಸರಪಳಿ ಪ್ರಯೋಗಿಸಲು ಕಷ್ಟವಾಗುತ್ತದೆ. ಆದರೆ ರೋವರ್‌ಗಳಿಂದ ಯಾವುದೇ ಜಾಗದಲ್ಲಿಯೂ ಕಾರ್ಯನಿರ್ವಹಿಸಬಹುದಾಗಿದೆ. ಜಿಪಿಎಸ್ ರೋವರ್ ಬಳಸುವುದರಿಂದ ಭೂಮಾಪನ ಡೇಟಾ ನೇರವಾಗಿ ಸಾಫ್ಟ್‌ ವೇರಗಳಿಗೆ ಅಪ್‌ಲೋಡ್ ಆಗುವುದರಿಂದ ಭವಿಷ್ಯದಲ್ಲಿ ದಾಖಲೆಗಳ ಪರಿಶೀಲನೆ ಸುಲಭವಾಗಲಿದೆ. ಅಲ್ಲದೆ, ನಿಖರ ಅಳತೆ ದೊರೆಯುವುದರಿಂದ ವಿವಾದಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬುಗುಡನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುಜಾತ, ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ನಿರಂಜನ್, ತಹಸೀಲ್ದಾರರಾದ ಆರತಿ, ಶಿರಿನ್‌ತಾಜ್, ಕೆ.ಪುರಂದರ್, ರಾಜೇಶ್ವರಿ, ತಾಪ ಇಒ ಹರ್ಷ ಕುಮಾರ್, ಅರಣ್ಯ ಇಲಾಖೆ ಅಧಿಕಾರಿಗಳು ಇತರರಿದ್ದರು. ಈ ಸಂದರ್ಭದಲ್ಲಿ ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರಿಗೆ ಟ್ಯಾಬ್ ಸಹಿತ ರೋವರ್ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು. ನಂತರ ಬಳ್ಳಾಪುರ ಗ್ರಾಮದ ಸರ್ವೇ ನಂಬರ್ 96 ಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ರೋವರ್ ಉಪಕರಣದ ಬಳಕೆ ವಿಧಾನ ಕುರಿತು ಪ್ರಾಯೋಗಿಕವಾಗಿ ರೈತರಿಗೆ ಮಾಹಿತಿ ನೀಡಿದರು.