ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಡ್ಡಾಯ ಶಿಕ್ಷಣ ಕಾಯ್ದೆ ಅನ್ವಯ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕಿದ್ದರೂ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪದ ಹಿನ್ನೆಲೆಯಲ್ಲಿ ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಶಾಸಕ ಎಚ್.ಟಿ.ಮಂಜು ಪೋಷಕರೊಂದಿಗೆ ಶನಿವಾರ ಚರ್ಚೆ ನಡೆಸಿದರು.ಅಕ್ರಮವಾಗಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆಲ ಪೋಷಕರು ಬಿಇಒಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಬಹುತೇಕ ಪೋಷಕರು ಶಾಲೆಯಲ್ಲಿ ಮಕ್ಕಳಿಗೆ ಕಾನ್ವೆಂಟ್ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಶಾಲೆ ಬೆಳವಣಿಗೆಯಿಂದ ಕೆಲ ಖಾಸಗಿ ಶಾಲೆಗಳು ಆತಂಕಕ್ಕೆ ಒಳಗಾಗಿ ಈ ರೀತಿ ಆರೋಪ ಮಾಡುತ್ತಿವೆ ಎಂದರು.
ಬಹುತೇಕ ಪೋಷಕರು ನಾವು ಶುಲ್ಕ ನೀಡಲು ತಯಾರಿದ್ದೇವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿ ಹೆಚ್ಚುವರಿ ತರಗತಿ ಆರಂಭಿಸಿ ನಾವು ಕೊಡುವ ಹಣದಿಂದ ಶಿಕ್ಷಕರಿಗೆ ಗೌರವಧನ ನೀಡಿ ಎಂದು ಒತ್ತಾಯಿಸಿದರು.ರಾಜ್ಯಕ್ಕೆ ಮಾದರಿಯಾಗಿರುವ ಕೆಪಿಎಸ್ ಶಾಲೆ ಬಗ್ಗೆ ಕೆಲವರು ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿದ್ದಾರೆ. ಇದರ ಹಿಂದೆ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಶಾಲೆಯನ್ನು ನಡೆಸಲು ಅಗತ್ಯ ಶಿಕ್ಷಕರು ಸೇರಿ ಕೆಲ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿಲ್ಲ. ಆದ್ದರಿಂದ ನಮ್ಮ ಅನುಮತಿ ಮೇರೆಗೆ ಶಾಲಾಭಿವೃದ್ಧಿ ಸಮಿತಿ ಒಂದಷ್ಟು ಹಣವನ್ನು ನಮ್ಮಿಂದ ಪಡೆಯುತ್ತಿದೆ ಎಂದು ಪೋಷಕರು ಸಭೆಗೆ ತಿಳಿಸಿದರು.
ಮಕ್ಕಳಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ದೂರಲಾಗಿದೆ. ಆದರೆ, ಶಾಲಾಭಿವೃದ್ಧಿ ಸಮಿತಿ ನಿರ್ಣಯದಂತೆ ಹೆಚ್ಚುವರಿ ವಿಭಾಗ ತೆರೆಯಲಾಗಿದೆ. ಕೆಲಸ ಮಾಡುವ ಶಿಕ್ಷಕರು ಮತ್ತು ಸಿಬ್ಬಂದಿಗೆ ಗೌರವಧನ ನೀಡಲು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಸಂಗ್ರಹಿತ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಿ ಎಲ್ಲ ವ್ಯವಹಾರ ಪಾರದರ್ಶಕವಾಗಿದೆ. ಯಾವುದೇ ರೀತಿಯ ಹಣ ದುರುಪಯೋಗವಾಗಿಲ್ಲ ಎಂದು ಶಾಲೆ ಪ್ರಭಾರ ಪ್ರಾಂಶುಪಾಲ ಪುಲಿಗೆರಯ್ಯ ತಿಳಿಸಿದರು.ಶಾಲೆಯಲ್ಲಿ ಪೂರ್ವ ಪ್ರಾಥಮಿಕದಿಂದ ದ್ವಿತೀಯ ಪಿಯುಸಿವರೆಗೆ 2432 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳಿಂದ ಸಂಗ್ರಹಿಸಿದ ಹಣದಿಂದ ಆಂಗ್ಲ ಮಾಧ್ಯಮದ ಹೆಚ್ಚುವರಿ ತರಗತಿಗಳಿಗೆ ನೇಮಿಸಿದ ಆರು ಮಂದಿ ಗೌರವ ಶಿಕ್ಷಕರು, ಇಬ್ಬರು ಕಂಪ್ಯೂಟರ್ ಶಿಕ್ಷಕರು, ಶಾಲಾ ಕಾವಲುಗಾರ ಮತ್ತು ಮೂವರು ಶುಚಿತ್ವ ಕೆಲಸಗಾರರಿಗೆ ಸಂಬಳ ನೀಡಲಾಗುತ್ತದೆ ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಸಿ.ಬಿ.ಚೇತನ್ ಕುಮಾರ್ ಮಾಹಿತಿ ನೀಡಿದರು.
ಆಸರೆ ಸೇವಾ ಟ್ರಸ್ಟಿನ ಎಚ್.ಬಿ.ಮಂಜುನಾಥ್ ಮಾತನಾಡಿ, ದೇಣಿಗೆ ರೂಪದಲ್ಲಿ ದಾನಿಗಳಿಂದ ಈ ಹಿಂದೆ ಹಣ ಸಂಗ್ರಹಿಸಿ ಗೌರವಧನ ನೀಡಲಾಗುತ್ತಿತ್ತು. ಆದರೆ, ಈಗ ಅದನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ, ಸಂಸ್ಥೆ ಎಲ್ಲ ಹಣಕಾಸಿನ ವ್ಯವಹಾರವನ್ನು ಚೆಕ್ ಮೂಲಕ ನಡೆಸಲಾಗಿದೆ. ಸರ್ಕಾರ ನೀಡಿರುವ ಸೌಲಭ್ಯದಲ್ಲಿ ಹೆಚ್ಚುವರಿ ವಿಭಾಗ ತೆರೆಯಲು, ಹೆಚ್ಚಿನ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಶುಲ್ಕ ಸಂಗ್ರಹಿಸಲಾಗಿದೆ. ನನ್ನ ಹೆಸರಿನಲ್ಲಿಯೇ ಜಂಟಿ ಖಾತೆ ಇದೆ. ಪೋಷಕರು ಮತ್ತು ಮಕ್ಕಳ ಹಣಕ್ಕೆ ಒಬ್ಬ ಜವಾಬ್ದಾರಿಯುತ ಶಾಸಕನಾಗಿ ನಾನು ಖಾತ್ರಿ ಒದಗಿಸುತ್ತೇನೆ. ಸಲ್ಲದ ಆರೋಪ ಮಾಡುವುದು ಶಾಲೆ ಬೆಳವಣಿಗೆ ದೃಷ್ಟಿಯಿಂದ ಸರಿಯಲ್ಲ ಎಂದು ಹೇಳಿದರು.