ಬೀದಿ ದೀಪ ನಿರ್ವಹಣೆಗೆ ಅಧಿಕ ಬಿಲ್‌ ಪಾವತಿ: ಆರೋಪ

| Published : Oct 25 2025, 01:00 AM IST

ಸಾರಾಂಶ

ಕೋಲಾರ ನಗರದ ೩೫ ವಾರ್ಡ್‌ಗಳಲ್ಲಿ ಕೇವಲ ೫೦ ರಿಂದ ೬೦ ಸೋಡಿಯಂ ಲೈಟ್‌ಗಳಿವೆ. ಇವುಗಳ ನಿರ್ವಹಣೆಗೆ ೩.೭೦ ಲಕ್ಷ ರುಪಾಯಿಗಳನ್ನು ಪಾವತಿ ಮಾಡುತ್ತಿದ್ದಾರೆ, ನಗರಸಭೆ ಅಧಿಕಾರಿಗಳನ್ನು ಲೆಕ್ಕ ಕೇಳಿದರೆ ಅಮೇಲೆ ನೋಡೋಣ ಎನ್ನುತ್ತಾರೆ, ಇತರೆ ಬಾಬತ್ತುಗಳಿಂದ ಭರತ್ ಎಂಟರ್ ಪ್ರೈಸಸ್‌ಗೆ ಕೋಟ್ಯತರ ರುಪಾಯಿಗಳ ಬಿಲ್ಲುನ್ನು ಪಾವತಿಸುತ್ತಿದ್ದಾರೆ,

ಕನ್ನಡಪ್ರಭ ವಾರ್ತೆ ಕೆಜಿಎಫ್

ಬೀದಿ ದೀಪಗಳ ನಿರ್ವಹಣೆ ಹೆಸರಿನಲ್ಲಿ ಭರತ್ ಎಂಟರ್ ಪ್ರೈಸಸ್‌ ಸಂಸ್ಥೆಗೆ ೩.೭೦ ಲಕ್ಷ ರುಪಾಯಿಗಳನ್ನು ನಗರಸಭೆ ಪಾವತಿಸುತ್ತಿದೆ. ಈ ಸಂಸ್ಥೆ ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷರಿಗೆ ಸೇರಿದ ಬೇನಾಮಿ ಸಂಸ್ಥೆಯಾಗಿದೆ ಎಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರು ಆರೋಪಿಸಿದರು.

ನಗರದ ೩೫ ವಾರ್ಡ್‌ಗಳಲ್ಲಿ ಕೇವಲ ೫೦ ರಿಂದ ೬೦ ಸೋಡಿಯಂ ಲೈಟ್‌ಗಳಿವೆ. ಇವುಗಳ ನಿರ್ವಹಣೆಗೆ ೩.೭೦ ಲಕ್ಷ ರುಪಾಯಿಗಳನ್ನು ಪಾವತಿ ಮಾಡುತ್ತಿದ್ದಾರೆ, ನಗರಸಭೆ ಅಧಿಕಾರಿಗಳನ್ನು ಲೆಕ್ಕ ಕೇಳಿದರೆ ಅಮೇಲೆ ನೋಡೋಣ ಎನ್ನುತ್ತಾರೆ, ಇತರೆ ಬಾಬತ್ತುಗಳಿಂದ ಭರತ್ ಎಂಟರ್ ಪ್ರೈಸಸ್‌ಗೆ ಕೋಟ್ಯತರ ರುಪಾಯಿಗಳ ಬಿಲ್ಲುನ್ನು ಪಾವತಿಸುತ್ತಿದ್ದಾರೆ, ಬಿಲ್ಲಿನ ಹಣದಲ್ಲಿ ಶಾಸಕರಿಗೆ ಕಮಿಷನ್ ಹಣ ಹೋಗುವುದರಿಂದ ಗಂಭೀರ ಸಮಸ್ಯೆಗಳ ಬಗ್ಗೆ ಶಾಸಕರು ಪ್ರಶ್ನೆ ಮಾಡುತ್ತಿಲ್ಲ ಎಂದು ಮಾಜಿ ಶಾಸಕ ಹಾಗೂ ನಗರಸಭೆ ಹಾಲಿ ಸದಸ್ಯ ರಾಜೇಂದ್ರನ್‌ ಟೀಕಿಸಿದರು.

ಪೂಜೆ ಹೆಸರಿನಲ್ಲಿ ಕಮಿಷನ್‌

ರಸ್ತೆ ಮಾಡುವುದಕ್ಕೆ ಪೂಜೆ, ರಸ್ತೆ ಒಡೆಯುವುದಕ್ಕೆ ಪೂಜೆ, ವರ್ಷಕ್ಕೆ ಎರಡು ಬಾರಿ ನಗರಸಭೆ ಕಚೇರಿಯ ಪೂಜೆಯ ಹೆಸರಿನಲ್ಲಿ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ, ಇದನ್ನು ಕೇಳಬೇಕಾದ ಶಾಸಕರು ತಮ್ಮ ಪಾಲಿಗೆ ಬರುವ ಕಮಿಷನ್ ತೆಗೆದುಕೊಂಡು ಸುಮ್ಮನಾಗಿದ್ದಾರೆ ಎಂದು ಆರೋಪಿಸಿದರು. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯೆ ನಥಿಯಾರಾಜೇಶ್ ಮಾತನಾಡಿ, ವರ್ಷಕ್ಕೆ ನಗರಸಭೆ ಕಚೇರಿಯಲ್ಲಿ ಎಷ್ಟು ಸಾರಿ ಪೂಜೆ ಮಾಡುತ್ತೀರಾ, ಪೂಜೆಯ ಹೆಸರಿನಲ್ಲಿ ಎರಡು ಸಾರಿ ಬಿಲ್ಲು ಆಗಿದೆ ಎಂದು ಪ್ರಸ್ತಾಪ ಮಧ್ಯೆ ಪ್ರವೇಶಿಸಿದ, ರಾಜೇಂದ್ರನ್‌, ಎಪಿಎಂಸಿ ಮಾರುಕಟ್ಟೆಗೆ ೭ ಸಲ ಪೂಜೆ ಮಾಡುತ್ತಾರೆ, ನಗರಸಭೆ ಕಚೇರಿಗೆ ಎರಡು ಸಲ ಪೂಜೆ ಮಾಡುವುದರಲ್ಲಿ ತಪ್ಪೇನಿದೆ ಎಂದು ವ್ಯಂಗ್ಯವಾಡಿದರು.

ಡಿಡಿಟಿ ಪೌಡರ್‌ನಲ್ಲಿ ಅಕ್ರಮ

ನಗರಸಭೆ ಸದಸ್ಯೆಯೊಬ್ಬರ ಪತಿ ಡಿಡಿಟಿ ಪೌಡರ್‌ನಲ್ಲಿ ಅಕ್ರಮ ವೆಸಗಿದ್ದಾರೆ. ಆದರೆ ನಗರದ ೩೫ ವಾರ್ಡ್ಗಲ್ಲಿ ಡಿಡಿಟಿ ಪೌಡರ್ ಸಿಂಪಡಿಸಿಯೇ ಇಲ್ಲ ಎಂದು ಸಭೆಯಲ್ಲಿ ಬಹುತೇಕ ಸದಸ್ಯರು ಅಕ್ಷೇಪ ವ್ಯಕ್ತಪಡಿಸಿದರು. ಆದರೆ ಆ ವ್ಯಕ್ತಿ ಯಾರೆಂದು ಉತ್ತರಿಸಲು ಅಧಿಕಾರಿಗಳು ತಡಬಡಾಯಿಸಿದರು,

ಮಹಿಳಾ ಸಮಾಜ ಕಟ್ಟಡ ನಗರಸಭೆಗೆ

ನಗರಸಭೆ ಮುಂಬಾಗದಲ್ಲಿರುವ ಮಹಿಳಾ ಸಮಾಜ ಕಟ್ಟಡವನ್ನು ನಗರಸಭೆಗೆ ವಾಪಸ್ಸು ಪಡೆಯಲು ಸಭೆಯಲ್ಲಿ ಒಮ್ಮತದ ನಿರ್ಧಾರ ವ್ಯಕ್ತವಾಯಿತು, ಸಭೆಯ ಅಧ್ಯಕ್ಷೆತೆಯನ್ನು ಇಂದಿರಾಗಾಂಧಿ ವಹಿಸಿದ್ದರು, ಸಭೆಯಲ್ಲಿ ಪೌರಾಯುಕ್ತ ಅಂಜಿನೇಯಲು, ಸ್ಥಾಯಿ ಸಮಿತಿ ಅಧ್ಯಕ್ಷರಾದ ವಳ್ಳಲ್ ಮುನಿಸ್ವಾಮಿ, ಇಇ ಗಂಗಾಧರ್, ವ್ಯವಸ್ಥಾಪಕ ಶಶಿಕುಮಾರ್, ಅಧಿಕಾರಿಗಳಾದ ಜಯರಾಮ್, ಕೃಷ್ಣಮೂರ್ತಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

.