ಕನ್ನಡಪ್ರಭ ವಾರ್ತೆ ಮಣಿಪಾಲ ಕೇರಳದಿಂದ ಮುಂಬೈಗೆ ತೆರಳುತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಲ್ಯಾಣಿ ಬಾಲಕೃಷ್ಣನ್ ಎಂಬವವರ ಲಕ್ಷಾಂತರ ರು. ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಎರಡೇ ಗಂಟೆಗಳಲ್ಲಿ ಬಂಧಿಸಿದ ಘಟನೆ ಬುಧವಾರ ನಡೆದಿದೆ. ಕಲ್ಯಾಣಿ, ಬುಧವಾರ ತ್ರಿಶ್ಶೂರ್‌ನಿಂದ ಪ್ರಯಾಣಿಸುತ್ತಿದ್ದು, ರಾತ್ರಿ 10.10 ಗಂಟೆಗೆ ರೈಲು ಮಂಗಳೂರು, ತೋಕೂರು ರೈಲ್ವೇ ನಿಲ್ದಾಣದ ಹತ್ತಿರ ನಿಧಾನಗತಿಯಲ್ಲಿ ಚಲಿಸುತ್ತಿರುವಾಗ ಕಳ್ಳರು ಅವರ ಕೈಯಲ್ಲಿದ್ದ ಬ್ಯಾಗನ್ನು ಬಲವಂತವಾಗಿ ಸೆಳೆದುಕೊಂಡು ಪರಾರಿಯಾಗಿದ್ದರು. ಬ್ಯಾಗಿನಲ್ಲಿ 127 ಗ್ರಾಂ ತೂಕದ ಚಿನ್ನಾಭರಣಗಳು, ಮೊಬೈಲ್, ಹ್ಯಾಂಡ್ ಬ್ಯಾಗ್, ಎಸ್‌ಬಿಐ ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಕನ್ನಡಕ ಇತ್ಯಾದಿ 6,70,000 ರು.ಗಳ ಸೊತ್ತುಗಳಿದ್ದು, ಅವರು ತಕ್ಷಣ ರೈಲಿನ ಟಿಟಿಇ ಅಧಿಕಾರಿಗಳಿಗೆ ದೂರು ನೀಡಿದ್ದರು. ಟಿಟಿಇ ಚಂದ್ರಕಾಂತ ಶೇಟ್ ಅವರು ಉಡುಪಿ ರೈಲ್ವೇ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಶ್ರೀಕಾಂತ್ ಎಂಬವವರಿಗೆ ಈ ಕಳ್ಳತನದ ಮಾಹಿತಿ ನೀಡಿದ್ದರು. ಶ್ರೀಕಾಂತ್ ಅವರು 11.55 ಗಂಟೆಗೆ ಉಡುಪಿ ರೈಲ್ವೇ ಪ್ಲ್ಯಾಟ್ ಪಾರಂನಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಸನ್ನಿ ಮಲ್ಹೋತ್ರಾ ಎಂಬಾತನನ್ನು ವಶಕ್ಕೆ ಪಡೆದು ರೈಲ್ವೆ ಪೊಲೀಸ್ ಎಎಎಸ್ಐ ಸುಧೀರ್ ಶೆಟ್ಟಿ ಮುಂದೆ ಹಾಜರುಪಡಿಸಿದರು. ಆತನಿಂದ ಕಲ್ಯಾಣಿ ಅವರ 93.17 ಗ್ರಾಂ ಚಿನ್ನಾಭರಣ, 3,700 ರು. ಮತ್ತು ಎಟಿಎಂ ಕಾರ್ಡು ಸೇರಿ 4,67,620 ರು. ಮೌಲ್ಯದ ಸೊತ್ತುಗಳು ಪತ್ತೆಯಾಗಿವೆ. ಉಳಿದ ಚಿನ್ನಾಭರಣಗಳು ಆತನ ಜೊತೆ ಇದ್ದು ಇನ್ನೊಬ್ಬ ಆರೋಪಿಯ ಬಳಿ ಇದ್ದಿರಬೇಕು ಎಂದು ಸಂಶಯಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.