ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ನೇಣಿಗೆ ಶರಣು

| Published : Aug 21 2025, 01:00 AM IST

ಸಾರಾಂಶ

ಚನ್ನಪಟ್ಟಣ: ಕಸ್ಟಡಿಯಲ್ಲಿದ್ದ ಕಳವು ಆರೋಪಿ ಪೊಲೀಸ್ ಠಾಣೆ ಶೌಚಾಲಯದಲ್ಲಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಇದು ಆತ್ಮಹತ್ಯೆಯಲ್ಲ ಲಾಕಪ್‌ಡೆತ್ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಚನ್ನಪಟ್ಟಣ: ಕಸ್ಟಡಿಯಲ್ಲಿದ್ದ ಕಳವು ಆರೋಪಿ ಪೊಲೀಸ್ ಠಾಣೆ ಶೌಚಾಲಯದಲ್ಲಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಇದು ಆತ್ಮಹತ್ಯೆಯಲ್ಲ ಲಾಕಪ್‌ಡೆತ್ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮದ್ದೂರು ತಾಲೂಕಿನ ಕೆಸ್ತೂರು ಬಳಿಯ ದುಂಡನಹಳ್ಳಿ ಗ್ರಾಮದ ರಮೇಶ್ (೫೯)ನೇಣಿಗೆ ಶರಣಾದವರು.

ಮೂರು ದಿನಗಳ ಹಿಂದೆ ಬೊಮ್ಮನಾಯಕನಹಳ್ಳಿಯ ದೇವಸ್ಥಾನದ ಕಳ್ಳತನ ಆರೋಪದ ಮೇಲೆ ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸರು ರಮೇಶ್, ಆತನ ಮಗ ಮಂಜು ಮತ್ತು ವೆಂಕಟೇಶ್@ ಅನಿ ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ೨ ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು. ಬುಧವಾರ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು.

ಆದರೆ, ಬುಧವಾರ ಬೆಳಿಗ್ಗೆ ಶೌಚಾಲಯಕ್ಕೆ ಹೋಗುವುದಾಗಿ ಹೇಳಿ, ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ಶೌಚಾಯಲಕ್ಕೆ ಹೋದಾತ ಎಷ್ಟು ಹೊತ್ತಾದರೂ ಬಾರದ್ದರಿಂದ ಪರಿಶೀಲಿಸಿದ ಪೊಲೀಸರಿಗೆ ಈತ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ತಕ್ಷಣ ಈತನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಇನ್ನು ರಮೇಶ್ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ ಈತನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಇದು ಆತ್ಮಹತ್ಯೆಯಲ್ಲ ಲಾಕಪ್‌ಡೆತ್ ಎಂದು ಮೃತನ ಕುಟುಂಬಸ್ಥರು ಆರೋಪಿಸಿ, ನ್ಯಾಯ ಸಿಗುವವರೆಗೆ ಮೃತದೇಹ ಪಡೆಯುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ನ್ಯಾಯಾಧೀಶರ ಸಮ್ಮುಖದಲ್ಲಿ ಮೃತನ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಯಿತು.

ಘಟನೆಯ ಹಿನ್ನೆಲೆಯಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಬಳಿ ಸಾಕಷ್ಟು ಜನ ಸೇರಿದಿದ್ದರು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿವೈಎಸ್‌ಪಿ ಕೆ.ಸಿ.ಗಿರಿ, ಪುರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷರ ರವಿಕಿರಣ್ ಇತರ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಬಾಕ್ಸ್‌...............

ರಮೇಶ್ ಆತ್ಮಹತ್ಯೆ ಪ್ರಕರಣ ಸಿಐಡಿಗೆ ವರ್ಗ: ಎಸ್‌ಪಿ

ಚನ್ನಪಟ್ಟಣ: ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಕಳವು ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಮೇಶ್‌ನನ್ನು ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಎರಡು ದಿನಗಳ ಕಾಲ ವಿಚಾರಣೆ ನಡೆಸಿ ಬುಧವಾರ ಮತ್ತೆ ಕೋರ್ಟ್‌ಗೆ ಹಾಜರು ಪಡಿಸಬೇಕಿತ್ತು. ಆದರೆ ಬುಧವಾರ ಮುಂಜಾನೆ ರಮೇಶ್ ಶೌಚಾಲಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಚನ್ನಪಟ್ಟಣ ತಾಲೂಕು ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಿಸದೇ ರಮೇಶ್ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದರು.

ಆತ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಗೊತ್ತಿಲ್ಲ. ಸದ್ಯ ಪ್ರಕರಣವನ್ನ ಸಿಐಡಿಗೆ ವಹಿಸಲಾಗಿದೆ. ಎಂ.ಕೆ.ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿ ವಿಚಾರಣೆ ಆಗುತ್ತಿದೆ ಎಂದು ತಿಳಿಸಿದರು.

ಕೋಟ್..............

ನಮ್ಮ ತಂದೆಗೆ ಚಿತ್ರಹಿಂಸೆ ನೀಡಿ ಈ ರೀತಿ ಮಾಡಲಾಗಿದೆ. ಒಡವೆ, ಸಾಮಾನು ಎಲ್ಲ ಪಡೆದುಕೊಂಡ ನಂತರವೂ ಪೊಲೀಸರು ಈ ರೀತಿ ಮಾಡಿದ್ದಾರೆ. ಮೊನ್ನೆ ರಾತ್ರಿ ಕರೆ ಮಾಡಿದ ಪೊಲೀಸರು ನಿಮ್ಮ ತಂದೆ ನಿಮಗೆ ಒಂದು ಜತೆ ಓಲೆ, ಸಿಲಿಂಡರ್ ಕಾಸು ನೀಡಿದ್ದು, ಅದನ್ನು ನೀಡುವಂತೆ ಕೇಳಿದರು. ಅವರು ಆ ರೀತಿ ಮಾಡಿರುವುದಿಲ್ಲ ಅದೆಲ್ಲ ಸುಳ್ಳು ಎಂದು ಹೇಳಿದೆ. ಅದಕ್ಕೆ ತಂದುಕೊಡದಿದ್ದರೆ, ಕಳ್ಳತನದ ಆರೋಪದಲ್ಲಿ ಮನೆಯವರನ್ನೆಲ್ಲ ಬಂಧಿಸಬೇಕಾಗುತ್ತದೆ ಎಂದು ಬೆದರಿಸಿದರು. ಮಂಗಳವಾರ ನಮ್ಮನೆಯ ಸಿಲಿಂಡರ್, ಓಲೆಯನ್ನೇ ತಂದುಕೊಟ್ಟೆ. ಬುಧವಾರ ಬೆಳಗ್ಗೆ ಕರೆ ಮಾಡಿದ ಪೊಲೀಸರು ನಿಮ್ಮ ತಂದೆ ಶೌಚಾಯಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು. ನನ್ನ ತಂದೆಗೆ ತುಂಬಾ ಟಾರ್ಚರ್ ಮಾಡಿದ್ದಕ್ಕೆ ಹೀಗೆ ಮಾಡಿಕೊಂಡಿದ್ದಾರೆ. ನಮ್ಮ ಅಣ್ಣನಿಗೂ ಟಾರ್ಚರ್ ಮಾಡಲಾಗಿದೆ.

-ಮಂಜುಳ, ಮೃತನ ಪುತ್ರಿ

ಕೋಟ್.......................

ಏಣಿ ಮಾಡಿಸಬೇಕು ಎಂದು ಹೇಳಿ ನನ್ನ ಪತಿಯನ್ನು ಕರೆದುಕೊಂಡ ಹೋದ ಪೊಲೀಸರು, ನಂತರ ಕರೆ ಮಾಡಿ ನಿಮ್ಮ ಪತಿಯನ್ನು ಕಳ್ಳತನ ಆರೋಪದಲ್ಲಿ ಬಂಧಿಸಿರುವುದಾಗಿ ತಿಳಿಸಿದರು. ಮಂಗಳವಾರ ಬಂದು ಮನೆಯಲ್ಲಿನ ಸಿಲಿಂಡರ್, ದೀಪಾಲೆ ಕಂಬಗಳನ್ನು ಕಳ್ಳತನದ್ದು ಎಂದು ತೆಗೆದುಕೊಂಡು ಹೋದರು. ಇಂದು ಬಟ್ಟೆ ತೆಗೆದುಕೊಂಡು ಬಾ ಎಂದಿದ್ದರು, ಬಟ್ಟೆ ತೆಗೆದುಕೊಂಡು ಕಾಯುತ್ತಿದ್ದರೆ, ನನ್ನ ಮಗಳು ಕರೆ ಮಾಡಿ ತಂದೆ ಮೃತಪಟ್ಟಿರುವ ವಿಚಾರ ತಿಳಿಸಿದರು. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಮಗೆ ಅನ್ಯಾಯ ಮಾಡಿದ್ದಾರೆ.

-ಮಂಗಳಗೌರಮ್ಮ, ಮೃತನ ಪತ್ನಿ

ಪೊಟೋ೨೦ಸಿಪಿಟಿ೧: ಮೃತ ರಮೇಶ್

ಪೊಟೋ೨೦ಸಿಪಿಟಿ೨: ನಗರದ ಸಾರ್ವಜನಿಕ ಆಸ್ಪತ್ರೆಯ ಬಳಿ ನೆರೆದಿದ್ದ ಮೃತನ ಕುಟುಂಬದವರು.