ಕರ್ತವ್ಯದಲ್ಲಿದ್ದ ವೈದ್ಯರಿಗೆ ಹಲ್ಲೆ ಯತ್ನ ಆರೋಪ: ಪ್ರತಿಭಟನೆ

| Published : Apr 27 2025, 01:52 AM IST

ಕರ್ತವ್ಯದಲ್ಲಿದ್ದ ವೈದ್ಯರಿಗೆ ಹಲ್ಲೆ ಯತ್ನ ಆರೋಪ: ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಪಿಯ ಬಂಧನಕ್ಕೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ, ಡಾಕ್ಟರ್ಸ್‌ ಫಾರಂ, ಆಯುಷ್ ಸಂಸ್ಥೆ ಹಾಗೂ ಇಂಡಿಯನ್ ಡೆಂಟಲ್ ಅಸೋಸಿಯೇಶನ್ ನೇತೃತ್ವದಲ್ಲಿ, ಬಿಜೆಪಿ ಮತ್ತು ವಿವಿಧ ಹಿಂದೂಪರ ಸಂಘಟನೆಗಳ ಸಹಕಾರದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿ ಆರೋಪಿಯ ಬಂಧನಕ್ಕೆ ಗಡುವು ನೀಡಿದ ಘಟನೆ ಶನಿವಾರ ಪುತ್ತೂರು ನಗರದಲ್ಲಿ ನಡೆದಿದೆ.

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ । ಆರೋಪಿ ಬಂಧನಕ್ಕೆ ಆಗ್ರಹಿಸಿ ರಸ್ತೆ ತಡೆ

ಕನ್ನಡಪ್ರಭ ವಾರ್ತೆ ಪುತ್ತೂರು

ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯೊಂದಿಗೆ ಅನುಚಿತವಾಗಿ ವರ್ತಿಸಿ, ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಸುಳ್ಯ ಪದವಿನ ಜೋಹರಾ ಮತ್ತು ಅವರ ಮಗನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ನಡುವೆ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ, ಡಾಕ್ಟರ್ಸ್‌ ಫಾರಂ, ಆಯುಷ್ ಸಂಸ್ಥೆ ಹಾಗೂ ಇಂಡಿಯನ್ ಡೆಂಟಲ್ ಅಸೋಸಿಯೇಶನ್ ನೇತೃತ್ವದಲ್ಲಿ, ಬಿಜೆಪಿ ಮತ್ತು ವಿವಿಧ ಹಿಂದೂಪರ ಸಂಘಟನೆಗಳ ಸಹಕಾರದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿ ಆರೋಪಿಯ ಬಂಧನಕ್ಕೆ ಗಡುವು ನೀಡಿದ ಘಟನೆ ಶನಿವಾರ ಪುತ್ತೂರು ನಗರದಲ್ಲಿ ನಡೆದಿದೆ.ಘಟನೆ ಹಿನ್ನೆಲೆ

ಪುತ್ತೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಪುತ್ತೂರು ತಾಲೂಕಿನ ವೀರಮಂಗಲ ಎಂಬಲ್ಲಿನ ನಿವಾಸಿ ಅಝೀಮ್ ಕೈಮರ್ ಎಂಬವರ ಪತ್ನಿ ಝರೀನಾ ಎಂಬವರು ಹೆರಿಗೆಯಾದ ಬಳಿಕ ಪ್ರಸವದ ನಂತರದ ವಾರ್ಡ್‌ನಲ್ಲಿದ್ದರು. ಜೋಹರಾ ಮತ್ತು ಅವರ ಪುತ್ರ ಸಮದ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಝರೀನಾ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದರು ಎನ್ನಲಾಗಿದೆ. ಶುಕ್ರವಾರ ಮಧ್ಯಾಹ್ನ ಡಾ. ಆಶಾಜ್ಯೋತಿ ಅವರು ಆಸ್ಪತ್ರೆಯಲ್ಲಿನ ಒಳ ರೋಗಿಗಳ ತಪಾಸಣೆಗೆ ನಡೆಸುತ್ತಿದ್ದಾಗ ತಾಯಿ ಮತ್ತು ಮಗ ಇಬ್ಬರೂ ಬಾಣಂತಿಯ ಬೆಡ್‌ನಲ್ಲಿ ಕುಳಿತಿದ್ದರು. ಆಗ ಡಾ. ಆಶಾಜ್ಯೋತಿ, ಇದು ರೋಗಿಗಳನ್ನು ಭೇಟಿ ಮಾಡುವ ಸಮಯವಲ್ಲ ಎಂದು ತಿಳಿಸಿದ್ದು, ಈ ವೇಳೆ ಜೋಹರಾ ಅವರು ಏರು ಧ್ವನಿಯಲ್ಲಿ ವೈದ್ಯರೊಂದಿಗೆ ವಾಗ್ವಾದಕ್ಕಿಳಿದು ಎದುರುತ್ತರ ನೀಡಿದರೆ, ಅವರ ಮಗ ಏಕಾಏಕಿ ವೈದ್ಯರೊಂದಿಗೆ ಅನುಚಿತವಾಗಿ ವರ್ತಿಸಿ, ಏಕವಚನದಲ್ಲಿ ನಿಂದಿಸುತ್ತಾ ಹಲ್ಲೆ ಮಾಡಲು ಮುಂದಾಗಿ, ಕೈಯಿಂದ ದೂಡಿದ್ದಾರೆ.ನಂತರ ವಾರ್ಡ್‌ನಿಂದ ಹೊರಗೆ ಬಂದ ತಾಯಿ, ಮಗ, ‘ರೋಗಿಗಳನ್ನು ನೋಡಲು ಬರುವ ಸಮಯವನ್ನು ಆಂಗ್ಲ ಭಾಷೆಯಲ್ಲಿ ಬರೆದು ಹಾಕಬೇಕಿತ್ತು. ನಮಗೆ ಕನ್ನಡ ಓದಲು ಬರುವುದಿಲ್ಲ. ನೀವೆಲ್ಲ ಓದಿದವರಿಗೆ ತಿಳಿಯುವುದಿಲ್ಲವೇ?’ ಎಂದು ಜೋರಾಗಿ ಕೂಗಾಡಿದ್ದಲ್ಲದೆ, ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿ, ಕರ್ತವ್ಯ ನಿರತರಾಗಿದ್ದ ವೈದ್ಯರ ಫೋಟೋವನ್ನು ತೆಗೆದಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ದೂರಿನಲ್ಲಿ ಆರೋಪಿಸಿದ್ದರು. ಅದರಂತೆ ದೂರು ದಾಖಲಿಸಿಕೊಂಡು ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಆರೋಪಿಯನ್ನು ಶುಕ್ರವಾರ ಸಂಜೆ ಠಾಣೆಗೆ ಕರೆಸಿಕೊಂಡು ಮುಚ್ಚಳಿಕೆ ಬರೆಸಿ ಹಿಂದಕ್ಕೆ ಕಳುಹಿಸಿದ್ದರು ಎಂದು ಆರೋಪಿಸಲಾಗಿತ್ತು.ಆರೋಪಿಯನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಬಿಟ್ಟು ಕಳುಹಿಸಿರುವುದನ್ನು ಖಂಡಿಸಿ ಶನಿವಾರ ಪುತ್ತೂರಿನ ಐಎಂಎ ಸಹಿತ ವಿವಿಧ ವೈದ್ಯರ ಸಂಘದ ನೇತೃತ್ವದಲ್ಲಿ, ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು, ಖಾಸಗಿ ಕ್ಲಿನಿಕ್ ವೈದ್ಯರು ಸೇರಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಜಮಾಯಿಸಿ ಆರೋಪಿವನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಠಾಣಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ಘೋಷಣೆ ಕೂಗಿದರು. ಪೊಲೀಸರು ಮನವೊಲಿಸಿದರೂ ಜಗ್ಗದ ಪ್ರತಿಭಟನಾಕಾರರು ಸುಮಾರು ಅರ್ಧ ಗಂಟೆ ರಸ್ತೆ ತಡೆ ನಡೆಸಿದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ, ಪೊಲೀಸರು ಮತ್ತು ಪ್ರತಿಭಟನಾಕಾರೊಂದಿಗೆ ಮಾತುಕತೆ ನಡೆಸಿದರು. ಪ್ರಕರಣದಲ್ಲಿ ಪೊಲೀಸರು ತಪ್ಪು ಎಸಗಿದ್ದಲ್ಲಿ ಅವರ ವಿರುದ್ದವೂ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಯಿತು.

ರಾಜಕೀಯ ಮಾಡುವುದು ಸರಿಯಲ್ಲ: ಶಾಸಕ ಅಶೋಕ್ ರೈ

ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರಿನ ಸರ್ಕಾರಿ ಆಸ್ಪತ್ರೆ ಉಳಿದ ಸರ್ಕಾರಿ ಆಸ್ಪತ್ರೆಗೆ ಹೋಲಿಸಿದರೆ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತದೆ. ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ವೈದ್ಯರ ಮೇಲೆ ನಡೆದ ಹಲ್ಲೆ ಯತ್ನ ಘಟನೆ ತಪ್ಪು. ತಪ್ಪು ಮಾಡಿದ್ದರೆ ಕಾನೂನು ಕ್ರಮಗಳನ್ನು ಕೈಗೊಳ್ಳುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತದೆ. ಇದರಲ್ಲಿ ರಾಜಕೀಯ ಮಾಡುವುದು ಅಗತ್ಯವಿಲ್ಲ. ಈಗಾಗಲೇ ಈ ಬಗ್ಗೆ ಎಸ್ಪಿ ಮತ್ತು ಡಿವೈಎಸ್ಪಿ ಅವರಿಗೆ ಮಾತನಾಡಿದ್ದೇನೆ. ವೈದ್ಯರು ರಾಜಕೀಯ ಮಾಡಲು ದಯವಿಟ್ಟು ಹೋಗಬೇಡಿ. ನಾವು ರಾಜಕೀಯ ಮಾಡಿ ಮನೆಗೆ ಹೋಗುತ್ತೇವೆ. ಆದರೆ ವೈದ್ಯರು ಆಸ್ಪತ್ರೆಗೆ ಹೋಗಿ ಕೆಲಸ ಮಾಡಬೇಕಾಗುತ್ತದೆ. ಅಲ್ಲಿ ಸಾರ್ವಜನಿಕರಿಗೆ ನ್ಯಾಯ ಸಿಗಬೇಕಾಗುತ್ತದೆ ಎಂದು ತಿಳಿ ಹೇಳಿದರು.ಆರೋಪಿಯನ್ನು ಬಂಧಿಸದಿದ್ದಲ್ಲಿ ಪುತ್ತೂರು ಬಂದ್:ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಮೇಲೆ ನಡೆದಿರುವ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದರ ವಿರುದ್ಧ ರಸ್ತೆ ರೋಖೋ ನಡೆದಿದೆ. ಆರೋಪಿಯನ್ನು ಬಂಧಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಕೇಸು ದಾಖಲಿಸದಿದ್ದಲ್ಲಿ ಮತ್ತೆ ಪ್ರತಿಭಟನೆ ಮುಂದುವರಿಯಲಿದೆ. ಸೋಮವಾರ ಪುತ್ತೂರು ಬಂದ್ ಮಾಡಿ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಿಂದ ಆಗಿರುವ ಎಲ್ಲ ತೊಂದರೆಗಳಿಗೆ ಇಲಾಖೆಯೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ.ವೈದ್ಯಕೀಯ ಸೇವೆ ಬಂದ್:ಐಎಂಎನ ಸೂಚನೆಯಂತೆ ಶನಿವಾರ ಪುತ್ತೂರಿನಲ್ಲಿ ಖಾಸಗಿ ಮತ್ತು ಸರ್ಕಾರಿ ವೈದ್ಯರು ಯಾವುದೇ ಸೇವೆ ನೀಡದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶನಿವಾರ ಪುತ್ತೂರಿನಲ್ಲಿ ಆರೋಗ್ಯ ಸೇವೆ ಬಂದ್ ಆಗಿತ್ತು. ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ವೈದ್ಯರು ಚಿಕಿತ್ಸೆ ವ್ಯವಸ್ಥೆ ಮಾಡಿದ್ದರು. ಆದರೆ ಹೊರರೋಗಿಗಳಿಗೆ ಯಾವುದೇ ಚಿಕಿತ್ಸೆ ನೀಡಿರಲಿಲ್ಲ.