ಹೋರಿಗಳ ಕತ್ತು ಕೊಯ್ದಿದ್ದ ಆರೋಪಿಗಳ ಬಂಧನ

| Published : Aug 18 2025, 12:00 AM IST

ಸಾರಾಂಶ

ದಾಬಸ್‍ಪೇಟೆ: ಇತ್ತೀಚೆಗಷ್ಟೇ ಅರಳಸಂದ್ರ ಗ್ರಾಮದಲ್ಲಿ ನಾಟಿ ಹೋರಿಗಳ ಕತ್ತು ಕೊಯ್ದು ನಡುರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದ ಆರೋಪಿಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ದಾಬಸ್‍ಪೇಟೆ: ಇತ್ತೀಚೆಗಷ್ಟೇ ಅರಳಸಂದ್ರ ಗ್ರಾಮದಲ್ಲಿ ನಾಟಿ ಹೋರಿಗಳ ಕತ್ತು ಕೊಯ್ದು ನಡುರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದ ಆರೋಪಿಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಎಂಎಸ್ ಪಾಳ್ಯದ ನಿವಾಸಿ ಇಮ್ರಾನ್(30), ಬೆಂಗಳೂರಿನ ಮಹಮ್ಮದ್‌ಸಾಬ್ ಪಾಳ್ಯದ ನಿವಾಸಿ ಸಯ್ಯದ್ ನವಾಜ್ (35), ಬೆಂಗಳೂರಿನ ಎಂಎಸ್ ಪಾಳ್ಯದ ಶ್ರೀನಿಧಿ ಬಡಾವಣೆ ನಿವಾಸಿ ವೆಂಕಟೇಶ್ ಅಲಿಯಾಸ್ ಮಹಮ್ಮದ್ ಶುಯಾಬ್(20) ಬಂಧಿತರು.

ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಇನ್ಸ್‌ಪೆಕ್ಟರ್ ನರೇಂದ್ರಬಾಬು ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದಾಗ ಟೆಂಪೋ ಮಾಹಿತಿ ಸಿಕ್ಕಿದ್ದು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ:

ಕಳೆದ ಆ.11ರಂದು ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದ ಕುಮುದ್ವತಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ನಡುರಸ್ತೆಯಲ್ಲಿ ದುಷ್ಕರ್ಮಿಗಳು ಎರಡು ಹಳ್ಳಿಕಾರ್ ತಳಿಯ ನಾಟಿ ಹೋರಿಗಳ ಕತ್ತು ಕೊಯ್ದು ಎಸೆದು ಹೋಗಿದ್ದರು. ನಾಟಿ ಹೋರಿಗಳ ಮೈಯೆಲ್ಲಾ ಗಾಯಗಳ ಗುರುತು ಕಂಡು ಬಂದಿದ್ದವು. ಮೂವರು ಆರೋಪಿಗಳು ಆ.10ರಂದು ಮಧ್ಯರಾತ್ರಿ ಟೆಂಪೋ ಮೂಲಕ ಸುಮಾರು ಗೋವುಗಳನ್ನು ಬೆಂಗಳೂರಿನಿಂದ ಕೇರಳಕ್ಕೆ ಸಾಗಿಸುವಾಗ ಒಂದು ನಾಟಿ ಹೋರಿ ಟೆಂಪೋದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿತ್ತು. ಮತ್ತೊಂದು ಹೋರಿಯೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಇದನ್ನು ಕಂಡ ಆರೋಪಿಗಳು ಕಸಾಯಿಖಾನೆಗಳಿಗೆ ಸಾಗಿಸುವಾಗ ಎರಡು ಹಸುಗಳು ತಿನ್ನಲು ಮಾಂಸಕ್ಕೆ ಯೋಗ್ಯವಲ್ಲ ಎಂದು ತಿಳಿದು, ಇದರಿಂದ ಕುಪಿತಗೊಂಡ ಆರೋಪಿಗಳು ಸಾವನ್ನಪ್ಪಿದ್ದ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಹೋರಿಗಳ ಕತ್ತುಕೂಯ್ದು ನಡುರಸ್ತೆಯಲ್ಲೇ ಎಸೆದು ಪರಾರಿಯಾಗಿದ್ದರು.

ವಿಧಾನಪರಿಷತ್‌ನಲ್ಲಿ ಶಾಸಕ ಸಿ.ಟಿ.ರವಿ ಚರ್ಚೆ:

ಈ ಕೃತ್ಯದ ಬಗ್ಗೆ ಕನ್ನಡಪ್ರಭ ಪತ್ರಿಕೆಯ ಮುಖಪುಟದಲ್ಲಿ ಆ.12ರಂದು ಸುದ್ದಿ ಪ್ರಕಟವಾಗಿತ್ತು. ಈ ಕನ್ನಡಪ್ರಭ ಪತ್ರಿಕೆಯ ವರದಿ ಪ್ರಸ್ತಾಪಿಸಿ ಸರ್ಕಾರ ಕೂಡಲೇ ಗೋ ಹತ್ಯೆ, ಕೆಚ್ಚಲು ಕತ್ತರಿಸುವಂತಹ ಅಮಾನುಷ ಕೃತ್ಯಗಳ ಎಸೆಗುವವರನ್ನು ಪತ್ತೆ ಹಚ್ಚಿ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ಘಟನೆ ನಡೆದ ಒಂದು ವಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ ನೆಲಮಂಗಲ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ನರೇಂದ್ರ ಬಾಬು ಹಾಗೂ ಕ್ರೈಂ ಸಿಬ್ಬಂದಿ ಕಾರ್ಯಾಚರಣೆಯನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ, ಎಎಸ್ಪಿ ವೆಂಕಟೇಶ್ ಪ್ರಸನ್ನ, ಡಿವೈಎಸ್ ಪಿ ಜಗದೀಶ್ ಶ್ಲಾಘಿಸಿದ್ದಾರೆ.

ಪೋಟೋ 10 : ಬಂಧಿತ ಆರೋಪಿ ಇಮ್ರಾನ್

ಪೋಟೋ 11 : ಬಂಧಿತ ಆರೋಪಿ ಸಯ್ಯದ್ ನವಾಜ್

ಪೋಟೋ 12 : ಬಂಧಿತ ಆರೋಪಿ ವೆಂಕಟೇಶ್ ಅಲಿಯಾಸ್ ಮಹಮ್ಮದ್ ಶುಯಾಬ್