ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಎಟಿಎಂ ಕೇಂದ್ರಗಳಲ್ಲಿ ಸಹಾಯ ಮಾಡುವ ನೆಪದಲ್ಲಿ ಸಾರ್ವಜನಿಕರ ಎಟಿಎಂ ಕಾರ್ಡ್‌ಗಳನ್ನು ಬದಲಾಯಿಸಿ ಹಣ ಲಪಟಾಯಿಸುತ್ತಿದ್ದ ಆರೋಪಿಯನ್ನು ನವನಗರ ಪೊಲೀಸರು ಬಂಧಿಸಿದ್ದಾರೆ.ಘಟನೆಯ ಹಿನ್ನೆಲೆ:
ಇತ್ತೀಚಿನ ದಿನಗಳಲ್ಲಿ ಬಾಗಲಕೋಟೆಯ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಟಿಎಂ ವಂಚನೆ ಪ್ರಕರಣಗಳು ವರದಿಯಾಗುತ್ತಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.ಬಂಧಿತ ಆರೋಪಿಯನ್ನು ಜಮಖಂಡಿಯ ಮಹಾಲಿಂಗೇಶ್ವರ ಕಾಲೋನಿ ನಿವಾಸಿ ಸುಜೀತ್ ಮಹಾದೇವ ಭಜಂತ್ರಿ (23) ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.
ವಿದ್ಯಾಗಿರಿಯ ಬಿ.ವಿ.ವಿ ಸಂಘದ ಕಾಲೇಜ್ ಸರ್ಕಲ್ ಹತ್ತಿರವಿರುವ ಎಸ್ಬಿಐ ಎಟಿಎಂನಲ್ಲಿ ಹಣ ತೆಗೆದುಕೊಡುವುದಾಗಿ ನಂಬಿಸಿ, ದೂರುದಾರರ ಎಟಿಎಂ ಕಾರ್ಡ್ ಬದಲಾಯಿಸಿದ್ದನು. ಹಂತ ಹಂತವಾಗಿ ದೂರುದಾರರ ಖಾತೆಯಿಂದ ಒಟ್ಟು ₹85 ಸಾವಿರ ವಂಚನೆಯಿಂದ ಡ್ರಾ ಮಾಡಿದ್ದ. ಬಂಧಿತನಿಂದ ಪೊಲೀಸರು ₹60 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ಗಜಾನನ ಸುತಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಪಿಐ ಸಂಜೀವ ಕಾಂಬಳೆ, ಪಿಎಸ್ಐಗಳಾದ ಜೆ.ಜೆ. ಬಿರಾದಾರ ಹಾಗೂ ಪಿ.ಬಿ. ಪೂಜಾರಿ ಮತ್ತು ಸಿಬ್ಬಂದಿ ಶ್ರೀಶೈಲ ನಡಗೇರಿ, ಎಂ.ಎಂ. ಬೆಳ್ಳುಬ್ಬಿ, ಮಂಜುನಾಥ ಸಂಗೊಂದಿ ಸೇರಿ ಹಲವರು ಪಾಲ್ಗೊಂಡಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿ ಅಭಿನಂದಿಸಿದ್ದಾರೆ.
