ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಪಟ್ಟಣದ ಟೆಂಪೋ ಸ್ಟಾಂಡ್‌ನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಹಿನ್ನೆಲೆಯಲ್ಲಿ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿಗ್ಗಾಂವಿ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಪಟ್ಟಣದ ಟೆಂಪೋ ಸ್ಟಾಂಡ್‌ನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಹಿನ್ನೆಲೆಯಲ್ಲಿ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆ. ೨೦ರಂದು ರಾತ್ರಿ ಸುಮಾರು ೧೦.೩೦ರ ವೇಳೆಗೆ ಮಹಮ್ಮದ್ ಜಾಫರ್ ಅಬ್ದುಲ್ ರೆಹಿಮಾನ್ ಕದರಮಂಡಲಗಿ ಎಂಬಾತ ದೇವಸ್ಥಾನದ ಒಳಗೆ ಮಲಗಿಕೊಂಡಿದ್ದು, ಬಳಿಕ ದೇವರ ಮೂರ್ತಿಯ ಎದುರು ಮೂತ್ರ ವಿಸರ್ಜನೆ ಮಾಡಿ ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಈ ಕುರಿತು ಟೆಂಪೋ ಚಾಲಕ ಹಾಗೂ ಮಾಲಕರ ಸಂಘದ ಅಧ್ಯಕ್ಷ ಸಿದ್ದಪ್ಪ ಶಿವಪ್ಪ ಕಾಳೆ ಅವರು ನೀಡಿದ ದೂರಿನ ಮೇರೆಗೆ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆದಿದೆ.
ಠಾಣೆ ಎದುರು ಪ್ರತಿಭಟನೆ: ಘಟನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಸುಮಾರು ೩೫ರಿಂದ ೪೦ ಮಂದಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪೊಲೀಸ್ ಠಾಣೆ ಎದುರು ಕುಳಿತು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಡಿವೈಎಸ್ಪಿ ಅವರು ಪ್ರತಿಭಟನಾಕಾರರಿಗೆ ಸೂಕ್ತ ತಿಳಿವಳಿಕೆ ನೀಡುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.