ಸಾರಾಂಶ
ನೈತಿಕ ಪೊಲೀಸ್‌ಗಿರಿ ಮೆರೆದಿದ್ದ ಪುಂಡರಿಂದ ನಡೆಯಿತೇ ಅತ್ಯಾಚಾರ?
ಇದೇ ಪುಂಡರಿಂದ ಮತ್ತೋರ್ವ ಮುಸ್ಲಿಂ ಯುವತಿಗೂ ಲೈಂಗಿಕ ಕಿರುಕುಳಕನ್ನಡಪ್ರಭ ವಾರ್ತೆ ಹಾವೇರಿ
ಹಾನಗಲ್ಲಿನ ವಸತಿ ಗೃಹವೊಂದರಲ್ಲಿ ತಂಗಿದ್ದ ಅನ್ಯ ಕೋಮಿನ ಪುರುಷ ಮತ್ತು ಮಹಿಳೆ ಮೇಲೆ ದೌರ್ಜನ್ಯ ಎಸಗಿ ನೈತಿಕ ಪೊಲೀಸ್‌ಗಿರಿ ಮೆರೆದಿದ್ದ ಯುವಕರ ಗುಂಪು ಬಳಿಕ ಆ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ನಲ್ಲಿರುವ ಲಾಡ್ಜ್‌ನಲ್ಲಿ ತಂಗಿದ್ದ ಶಿರಸಿ ಮೂಲದ ವ್ಯಕ್ತಿ ಹಾಗೂ ಮುಸ್ಲಿಂ ಮಹಿಳೆ ಮೇಲೆ ದಾಳಿ ನಡೆಸಿದ್ದ ೭ ಜನ ಯುವಕರ ಗುಂಪು ಬಳಿಕ ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಹಲ್ಲೆ ಮಾಡಿದ್ದ ವಿಡಿಯೋ ಬುಧವಾರ ಬೆಳಕಿಗೆ ಬಂದಿತ್ತು. ಈ ಪ್ರಕರಣವೀಗ ತಿರುವು ಪಡೆದಿದ್ದು, ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಮಹಿಳೆ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಆಕೆಯ ಪತಿಯೂ ಸಹ ನನ್ನ ಪತ್ನಿಯನ್ನು ಕಿಡ್ನಾಪ್ ಮಾಡಿದ್ದ ಯುವಕರ ಗುಂಪು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದಿದ್ದಾರೆ.
ಲಾಡ್ಜ್‌ಗೆ ನುಗ್ಗಿ ದಾಂಧಲೆ ನಡೆಸಿದ್ದ ಪುಂಡರ ಪ್ರಕರಣ ಬೇಧಿಸುತ್ತಿರುವ ಪೊಲೀಸರು ಲಾಡ್ಜ್ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲಿಸಿದ್ದು, ಸಂತ್ರಸ್ತೆಯನ್ನು ಲಾಡ್ಜ್‌ನಿಂದ ಎಳೆತಂದು ಬಳಿಕ ಆಕೆ ಹಾಗೂ ಆ ವ್ಯಕ್ತಿಯನ್ನು ಬೈಕ್ ಮೇಲೆ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಆದರೆ, ಆ ವ್ಯಕ್ತಿ ಇನ್ನೂ ಪತ್ತೆ ಆಗಿಲ್ಲ. ಪ್ರಕರಣದ ಕುರಿತು ಯುವತಿಯಿಂದ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ಗುರುವಾರ ಹಾನಗಲ್ಲ ನ್ಯಾಯಾಲಕ್ಕೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.ಗ್ಯಾಂಗ್ ರೇಪ್, ದೂರು ದಾಖಲು:
ಮಹಿಳೆಯ ಮೇಲೆ ದೌರ್ಜನ್ಯ ನಡೆಸಿ ನಿರ್ಜನ ಪ್ರದೇಶಕ್ಕೆ ಕರೆದ್ಯೊಯ್ದು ಗ್ಯಾಂಗ್ ರೇಪ್ ಮಾಡಿರುವ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಸಂತ್ರಸ್ತ ಮಹಿಳೆ ನ್ಯಾಯಾಧೀಶರ ಎದುರು ನೀಡಿರುವ ಹೇಳಿಕೆ ಆಧರಿಸಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಏಳು ಜನ ಆರೋಪಿಗಳ ಪೈಕಿ ಮೂವರನ್ನು ಅರೆಸ್ಟ್ ಮಾಡಿದ್ದೇವೆ. ಒಬ್ಬರು ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಗೆ ಸೂಕ್ತ ರಕ್ಷಣೆ ನೀಡುತ್ತೇವೆ ಎಂದು ಎಸ್ಪಿ ಅಂಶುಕುಮಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಯುವತಿಗೆ ಕಿರುಕುಳ:ಹಾನಗಲ್ಲನಲ್ಲಿ ನೈತಿಕ ಪೊಲೀಸ್‌ಗಿರಿ ಮೆರೆದಿದ್ದ ಯುವಕರ ಗುಂಪು ಕೆಲ ದಿನಗಳ ಹಿಂದೆ ಮತ್ತೊಬ್ಬ ಮುಸ್ಲಿಂ ಯುವತಿಯನ್ನು ಕಾರಿನಲ್ಲಿ ಕರೆದೊಯ್ದು ಕಿರುಕುಳ ನೀಡಿರುವ ಎರಡು ವಿಡಿಯೋಗಳು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಯುವತಿಯನ್ನು ಕಾರಿನಲ್ಲಿ ಕೂಡ್ರಿಸಿಕೊಂಡು ಕಪಾಳಕ್ಕೆ ಹೊಡೆದು ಕಿರುಕುಳ ನೀಡಿದ್ದಾರೆ. ಕೈ ಮುಗೀತಿನಿ ಭಯ್ಯಾ, ನನ್ನ ತಪ್ಪಿಲ್ಲ ಎಂದು ಕೈ ಮುಗಿದರೂ ಕೇಳದ ಪುಂಡರು ಆ ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ನಿಮ್ಮ ತಾಯಿ ನಂಬರ್ ಕೊಡು, ಅವನ ಬಳಿ ಯಾಕೆ ಕುಳಿತಿದ್ದೆ?, ಅವನು ಒತ್ತಾಯ ಮಾಡಿ ಕರೆದುಕೊಂಡು ಹೋಗಿದ್ನಾ..? ಎಂದು ಅವರು ಯುವತಿಗೆ ಪ್ರಶ್ನಿಸಿದ್ದಾರೆ. ಅವನೇನು ಜಬರದಸ್ತಿ ಮಾಡಿಲ್ಲ, ನಾನು ಅವನು ಕುಳಿತು ಮಾತಾಡ್ತಾ ಇದ್ವಿ ಅಷ್ಟೇ ಎಂದು ಯುವತಿ ಹೇಳಿದರೂ ಹಲ್ಲೆ ನಡೆಸಿರುವ ದೃಶ್ಯ ವಿಡಿಯೋದಲ್ಲಿದೆ.ಹಾನಗಲ್ಲ ಘಟನೆಗೆ ಸಂಬಂಧಿಸಿ ಈಗಾಗಲೇ ಮೂವರನ್ನು ಬಂಧಿಸಿ ನ್ಯಾಯಾಯಲಕ್ಕೆ ಹಾಜರುಪಡಿಸಲಾಗಿದೆ. ತಲೆಮರೆಸಿಕೊಂಡವರ ಬಂಧನಕ್ಕೆ ತಂಡ ರಚಿಸಲಾಗಿದೆ. ಯುವತಿ ಗ್ಯಾಂಗ್‌ರೇಪ್ ಆಗಿರುವ ಬಗ್ಗೆ ನಮ್ಮ ಬಳಿ ಆರೋಪ ಮಾಡಿಲ್ಲ, ಮೆಡಿಕಲ್ ಟೆಸ್ಟ್ ಸಹ ಮಾಡಿಸಲಾಗಿದೆ. ನ್ಯಾಯಾಧೀಶರ ಎದುರು ಏನು ಹೇಳುತ್ತಾರೋ ಅದರ ಮೇಲೆ ತನಿಖೆ ಮಾಡುತ್ತೇವೆ. ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಯಾರಾದರೂ ಕಾನೂನು ಕೈಗೆತ್ತಿಕೊಂಡು ಯಾವುದೋ ಯುವಕ, ಯುವತಿ ಮೇಲೆ ಹಲ್ಲೆ ಮಾಡಿದರೆ ಅಂತವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಹಿಳೆಗೆ ಸೂಕ್ತ ರಕ್ಷಣೆ ನೀಡುತ್ತೇವೆ ಎಂದು ಎಸ್ಪಿ ಅಂಶುಕುಮಾರ ತಿಳಿಸಿದ್ದಾರೆ.
ಹಾನಗಲ್ಲನ ವಸತಿಗೃಹದಲ್ಲಿದ್ದ ಜೋಡಿಯ ಮೇಲೆ ದುಷ್ಕರ್ಮಿಗಳು ನೈತಿಕ ಪೊಲೀಸ್‌ಗಿರಿ ನಡೆಸಿರುವುದು ಖಂಡನೀಯ. ಯುವತಿಯ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ತೆರಳಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಈ ರೀತಿ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿ ಪುಂಡರು ರಾಜಾರೋಷವಾಗಿ ನೈತಿಕ ಪೊಲೀಸ್‌ಗಿರಿ ಮಾಡಲು ಬಿಟ್ಟಿರುವುದನ್ನು ನೋಡಿದರೆ ರಾಜ್ಯದಲ್ಲಿ ಸರ್ಕಾರ ಜೀವಂತ ಇದೆಯೋ ಇಲ್ಲವೋ ಎನ್ನುವಂತಾಗಿದೆ. ನೈತಿಕ ಪೊಲೀಸ್‌ಗಿರಿ ಬಗ್ಗೆ ಪುಂಖಾನುಪುಂಕವಾಗಿ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಇಂತಹ ಹೀನ ಕೃತ್ಯ ನಡೆದರೂ ಮೌನ ವಹಿಸಿದುವುದೇಕೆ. ದೌರ್ಜನ್ಯ ಮಾಡಿರುವ ಕಿರಾತಕರು ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೆ ದಿವ್ಯ ಮೌನ ವಹಿಸಿದ್ದಾರಾ..?, ಈ ಬಗ್ಗೆ ತಮ್ಮ ನಿಲುವು ಪ್ರಕಟಿಸಬೇಕು ಎಂದುಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.