ಬಸವಕಲ್ಯಾಣ ಎಟಿಎಂ ದೋಚಿದ್ದ ಆರೋಪಿ ದೆಹಲಿಯಲ್ಲಿ ಬಂಧನ

| Published : Dec 15 2023, 01:31 AM IST

ಸಾರಾಂಶ

ಬಸವಕಲ್ಯಾಣದಲ್ಲಿ ಎರಡು ತಿಂಗಳ ಹಿಂದಷ್ಟೇ ನಡೆದಿದ್ದ ಎಟಿಎಂ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚಲಾಗಿದ್ದು, ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು, ವಾಹನಗಳು ಕಂಡುಬಂದಲ್ಲಿ ಕೂಡಲೇ ಸಮೀಪದ ಪೊಲೀಸ್‌ ಠಾಣೆಗೆ ಅಥವಾ ಪೊಲೀಸ್‌ ಕಂಟ್ರೋಲ್‌ ರೂಂ. ಸಂಖ್ಯೆ 9480803400 ಅಥವಾ 08482226704ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ತಿಳಿಸಿದ್ದಾರೆ

ಬೀದರ್‌: ಬಸವಕಲ್ಯಾಣದಲ್ಲಿ ಎರಡು ತಿಂಗಳ ಹಿಂದಷ್ಟೇ ನಡೆದಿದ್ದ ಎಟಿಎಂ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚಲಾಗಿದ್ದು, ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು, ವಾಹನಗಳು ಕಂಡುಬಂದಲ್ಲಿ ಕೂಡಲೇ ಸಮೀಪದ ಪೊಲೀಸ್‌ ಠಾಣೆಗೆ ಅಥವಾ ಪೊಲೀಸ್‌ ಕಂಟ್ರೋಲ್‌ ರೂಂ. ಸಂಖ್ಯೆ 9480803400 ಅಥವಾ 08482226704ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಇದೇ ಅಕ್ಟೋಬರ್‌ 12ರಂದು ನಸುಕಿನ ಜಾವ ಬಸವಕಲ್ಯಾಣದ ವರ್ಷಾ ಫಂಕ್ಷನ್‌ ಹಾಲ್‌ ಪಕ್ಕದಲ್ಲಿರುವ ಕರ್ನಾಟಕ ಬ್ಯಾಂಕ್‌ ಎಟಿಎಂ ಯಂತ್ರವನ್ನು ಗ್ಯಾಸ್‌ ಕಟರ್‌ನಿಂದ ಕತ್ತರಿಸಿ 6,66,100ರು.ಗಳನ್ನು ಕಳ್ಳತನ ಮಾಡಿದ್ದನ್ನು ಆರೋಪಿತ, ದೆಹಲಿ ಪೊಲೀಸರಿಗೆ ವಿಚಾರಣೆ ಸಂದರ್ಭ ಬಾಯಿಬಿಟ್ಟಿದ್ದು ಆತನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಗಾಜಿಯಾಬಾದ್‌ನ ನದೀಮ್‌ ನಜೀರ್‌ ಅಲಿ ದೆಹಲಿ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಆರೋಪಿಯಾಗಿದ್ದು, ನ್ಯಾಯಾಲಯದಿಂದ ಬಾಡಿ ವಾರಂಟ್‌ ಪಡೆದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುವದಲ್ಲದೆ ಇನ್ನೂ ಮೂರು ಜನ ಆರೋಪಿತರ ಪತ್ತೆ ಕಾರ್ಯ ಮುಂದುವರೆದಿರುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಎಲ್ಲ ಬ್ಯಾಂಕ್‌ಗಳ ಅಧಿಕಾರಿಗಳು ತಮ್ಮ ಬ್ಯಾಂಕುಗಳ ಅಥವಾ ಎಟಿಎಂಗಳ ಭದ್ರತೆ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್‌ ವರಿಷ್ಧಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ತಿಳಿಸಿದ್ದಾರೆ.