ಆ್ಯಸಿಡ್ ಎರಚಿದ್ದ ಆರೋಪಿಗಳು ಹಿರಿಯೂರು ಪೊಲೀಸರ ಬಲೆಗೆ

| Published : Jan 31 2024, 02:18 AM IST

ಆ್ಯಸಿಡ್ ಎರಚಿದ್ದ ಆರೋಪಿಗಳು ಹಿರಿಯೂರು ಪೊಲೀಸರ ಬಲೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳಲ್ಕೆರೆ ತಾಲೂಕಿನ ಜೆಸಿ ಬಡಾವಣೆಯ ಅರುಣ್ ಕುಮಾರ್ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗುವಾಗ ಹಿರಿಯೂರು ಬಳಿಅಪರಿಚಿತರು ದಿಢೀರ್‌ ದಾಳಿ ನಡೆಸಿ, ಆಸಿಡ್ ಎರಚಿ ಪರಾರಿಯಾಗಿದ್ದರು. ಈ ದುಷ್ಕರ್ಮಿಗಳನ್ನು ಹಿರಿಯೂರು ಪೊಲೀಸರು ಇದೀಗ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹಿರಿಯೂರು/ ಚಳ್ಳಕೆರೆ

ನಗರದ ವಿಎಂಪಿ ಮಹಲ್ ಬಳಿ ದಿನಾಂಕ 16-01-2024 ರ ಸಂಜೆ ಆರು ಗಂಟೆಗೆ ದುಷ್ಕರ್ಮಿಗಳು ಹೊಳಲ್ಕೆರೆ ಮೂಲದ ಅರುಣ್ ಕುಮಾರ್ ಎಂಬುವವರಿಗೆ ಆ್ಯಸಿಡ್ ಎರಚಿ ಪರಾರಿಯಾದ ಘಟನೆಯ ಬೆನ್ನತ್ತಿದ್ದ ಹಿರಿಯೂರು ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾoಗ ವಶಕ್ಕೆ ನೀಡಿದ್ದಾರೆ.

ಹೊಳಲ್ಕೆರೆ ತಾಲೂಕಿನ ಜೆಸಿ ಬಡಾವಣೆಯ ಅರುಣ್ ಕುಮಾರ್ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗುವಾಗ ಹಿರಿಯೂರು ಬಳಿಯ ವಿಎಂಪಿ ಮಹಲ್ ಬಳಿ ವಿಶ್ರಾಂತಿಗೆಂದು ಬಸ್ ನಿಲ್ಲಿಸಿ, ಅರುಣ್ ಕುಮಾರ್ ವಾಶ್ ರೂಮ್ ಗೆ ಹೋಗಿ ಹೊರಬರುವಾಗ ಅಪರಿಚಿತರಿಬ್ಬರು ದಿಢೀರ್‌ ದಾಳಿ ನಡೆಸಿ, ಆಸಿಡ್ ಎರಚಿ ಪರಾರಿಯಾಗಿದ್ದರು. ಆನಂತರ ಸ್ಥಳೀಯರು ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಲಾಗಿತ್ತು. ಪ್ರಕರಣದ ಬೆನ್ನತ್ತಿದ ನಗರ ಪೊಲೀಸರು ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ನಗರ ಠಾಣೆ ವೃತ್ತ ನೀರಿಕ್ಷಕ ರಾಘವೇಂದ್ರ ಕಾಂಡಿಕೆ ಮತ್ತು ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ.

ಬೆಂಗಳೂರಿನ ಪ್ರಜ್ವಲ್ (25) ತಂದೆ ಸುರೇಶ್, ಕೊರಟಗೆರೆ ತಾಲೂಕಿನ ನಿತಿನ್ ಕುಮಾರ್ (28) ತಂದೆ ಹನುಮಂತರಾಯಪ್ಪ ಹಾಗೂ ಹಿರಿಯೂರು ತಾಲೂಕಿನ ಹರ್ತಿಕೋಟೆಯ ಗಿರೀಶ್ (27) ತಂದೆ ರಾಮಚಂದ್ರಪ್ಪ ಎನ್ನುವವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಇನ್ನು, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾoಗ ಬಂಧನದಲ್ಲಿಟ್ಟು ತನಿಖೆ ಮುಂದುವರೆಸಲಾಗಿದೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ಡಿವೈಎಸ್ ಪಿ.ಚೈತ್ರಾ, ವೃತ್ತ ನೀರಿಕ್ಷಕ ರಾಘವೇಂದ್ರ ಕಾಂಡಿಕೆ, ಪಿಎಸ್ ಐಗಳಾದ ಮಂಜುನಾಥ್, ಲಕ್ಷ್ಮೀನಾರಾಯಣ ಸಿಬ್ಬಂದಿಗಳಾದ ದೇವೇಂದ್ರಪ್ಪ, ಮಾರುತಿ ಪ್ರಸಾದ್, ಸಿದ್ದಲಿಂಗೇಶ್ವರ, ನಾಗಣ್ಣ, ಸುದರ್ಶನ್ ಗೌಡ, ಸುರೇಶ್ ರನ್ನು ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.

ಅಪ್ರಾಪ್ತೆ ಜೊತೆ ವಿವಾಹ: ಪೋಕ್ಸೋ ಪ್ರಕರಣ ದಾಖಲು

ಚಳ್ಳಕೆರೆ: ತಾಲ್ಲೂಕಿನ ರಂಗವ್ವನಹಳ್ಳಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದಲ್ಲದೆ, ಆಕೆ ಗರ್ಭವತಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿಯ ಕಾನೂನು ಬಾಹಿರವಾಗಿ ಮದುವೆಯಾಗಿ ಮಗುವಿಗೆ ಜನ್ಮನೀಡಲು ಕಾರಣನಾದ ಅದೇ ಊರಿನ ಟಿ.ಗಂಗಪ್ಪ (೨೮) ಎಂಬುವವನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.ಈ ಬಗ್ಗೆ ಅಪ್ರಾಪ್ತ ಬಾಲಕಿಯ ತಾಯಿ ತಿಪ್ಪಮ್ಮ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗಳು ೧೭ ವರ್ಷದವಳಾಗಿದ್ದು, ಅದೇ ಗ್ರಾಮದ ಟಿ.ಗಂಗಪ್ಪ ಎಂಬಾತನೊಂದಿಗೆ ಕಳೆದ ಕೆಲವು ತಿಂಗಳುಗಳಿಂದ ಇಬ್ಬರೂ ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳಲು ಮುಂದಾದಾಗ ನಾವು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಳೆದ ಮೇ. ೨೦೨೩ರಂದು ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಗಂಗಮ್ಮ ನನ್ನ ಮಗಳನ್ನು ಬಾಲ್ಯವಿವಾಹ ಮಾಡಿಕೊಂಡು ಅವನ ಮನೆಯಲ್ಲಿ ಸಂಸಾರ ಮಾಡುತ್ತಿದ್ದು, ಜ.೨೧ರಂದು ನನ್ನ ಮಗಳು ಗಂಡು ಮಗುವಿಗೆ ಜನ್ಮ ನೀಡಿದ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಪಿಎಸ್‌ಐ ಜೆ.ಶಿವರಾಜ್ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.