ಸಾರಾಂಶ
ಬಂಗಾರಪೇಟೆ: ಬೆಂಗಳೂರಿನ ವಸತಿ ಗೃಹವೊಂದರಲ್ಲಿ ನಾಲ್ವರು ಮಕ್ಕಳನ್ನು ಕೂಡಿ ಹಾಕಿ ಹಣ ನೀಡುವಂತೆ ಪೋಷಕರಿಗೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿ ಮಕ್ಕಳನ್ನು ರಕ್ಷಿಸಿದ್ದಾರೆ. ರಾಯಚೂರು ಮೂಲದ ಜ್ಯೋತಿಷಿ ವಿಷ್ಣುರಾವ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಪಟ್ಟಣದ ದೇಶಿಹಳ್ಳಿ ನಿವಾಸಿಗಳಾದ ಲಿಖಿತ್, ಶರತ್, ಮುಬಾರಕ್ ಮತ್ತು ಹೇಮಂತ್ ಕುಮಾರ್ ರನ್ನು ಪೊಲೀಸರು ರಕ್ಷಿಸಿದ್ದಾರೆ. ನಾಲ್ವರು ಮಕ್ಕಳು ಡಿ.22ರಂದು ಮನೆಯವರಿಗೆ ಮಾಹಿತಿ ನೀಡದೇ ತಮ್ಮ ಮನೆಗಳಲ್ಲಿ 30 ಸಾವಿರ ಹಣವನ್ನು ತೆಗೆದುಕೊಂಡು ಬೆಂಗಳೂರಿಗೆ ತೆರಳಿ ತ್ರಿವೇಣಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಲು ಹೋಗಿದ್ದರು. ಆಗ ಈ ನಾಲ್ವರು ಮಕ್ಕಳನ್ನು ಗಮನಿಸಿ ಜ್ಯೋತಿಷಿ ವಿಷ್ಣುರಾವ್ ಮಕ್ಕಳಿಗೆ ನೆರವು ನೀಡುವುದಾಗಿ ಹೇಳಿ ನಾಲ್ವರನ್ನು ಉಪ್ಪಾರ ಪೊಲೀಸ್ ಠಾಣಾ ವ್ಯಾಪ್ತಿಯ ವೀನಸ್ ಎಂಬ ವಸತಿಗೃಹವೊಂದಕ್ಕೆ ಕರೆದೊಯ್ದನು. ನಂತರ ಅವರಲ್ಲಿದ್ದ 30 ಸಾವಿರ ರು.ಗಳನ್ನು ಕಸಿದುಕೊಂಡು ರೂಂನಲ್ಲಿ ಕೂಡಿ ಹಾಕಿ ಲಿಖಿತ್ ಎಂಬ ಬಾಲಕನ ತಾಯಿ ಸುಮಂಗಲಿಗೆ ಆರೋಪಿ ಕರೆ ಮಾಡಿ, ನಿಮ್ಮ ಮಗ ಹಾಗೂ ಆತನ ಮೂವರು ಗೆಳೆಯರು ನನ್ನ ಬಳಿಯಿದ್ದಾರೆ. ನಾಲ್ವರೂ ಸುರಕ್ಷಿತವಾಗಿ ಮನೆಗೆ ಬರಬೇಕಾದರೆ ನಾನು ಕೇಳಿದಷ್ಟು ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಸುಮಂಗಲಿ ಪೊಲೀಸರಿಗೆ ದೂರು ನೀಡಿ ಮಕ್ಕಳನ್ನು ರಕ್ಷಿಸುವಂತೆ ಕೋರಿದ್ದರು. ದೂರು ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಇನ್ಸ್‌ಪೆಕ್ಟರ್ ದಯಾನಂದ್ ನೇತೃತ್ವದಲ್ಲಿ ಪೊಲೀಸರು ವಸತಿಗೃಹದಲ್ಲಿ ದಾಳಿ ನಡೆಸಿ ನಾಲ್ವರು ಮಕ್ಕಳನ್ನು ರಕ್ಷಿಸಿ ಆರೋಪಿ ವಿಷ್ಣುರಾವ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.