ಸಾರಾಂಶ
ನಗರದಲ್ಲಿ ಇತ್ತೀಚೆಗೆ ಅಭಿವೃದ್ಧಿ ನೆಪದಲ್ಲಿ ನೂರಾರು ಮರಗಳ ಮಾರಣ ಹೋಮ ನಡೆಯುತ್ತಿದೆ. ಮತ್ತೆ ಅದೇ ಜಾಗದಲ್ಲಿ ಸಸಿಗಳನ್ನು ನೆಡುತ್ತಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ಸಾರ್ವಜನಿಕರು, ಪರಿಸರವಾದಿಗಳ ಸಭೆ ನಡೆಸದೆ ಮರಗಳನ್ನು ಕಡಿಯಲು ಅನುಮತಿ ನೀಡುತ್ತಿರುವ ಎಸಿಎಫ್ ರವೀಂದ್ರ ಅವರನ್ನು ವರ್ಗಾವಣೆಗೆ ಆಗ್ರಹಿಸಿ ಪರಿಸರ ಸಂರಕ್ಷಣಾ ಸಮಿತಿಯವರು ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನದ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.ಅರಣ್ಯ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸಿಎಫ್ ರವೀಂದ್ರ ಅವರು ನೂರಾರು ವರ್ಷಗಳ ಸಾವಿರಾರು ಮರಗಳ ಹನನಕ್ಕೆ ಅನುಮತಿ ನೀಡಿ ಪರಿಸರವನ್ನು ಹಾಳು ಮಾಡಿದ್ದಾರೆ. 50 ಮರಗಳಿಗೆ ಸಂಬಂಧಿಸಿದ್ದರೆ ಸಾರ್ವಜನಿಕ ಸಭೆ ಕರೆಯಬೇಕು. ಸಭೆಯಲ್ಲಿ ಮರ ಕಡಿಯಲು ತೀರ್ಮಾನವಾಗಬೇಕು. ಇದೆಲ್ಲ ತೊಂದರೆ ಯಾಕೆ ಎಂದು ಎಲ್ಲಾ ಪ್ರದೇಶದಲ್ಲಿ 40 ಮರಗಳ ಹನನ ಮಾಡಿಸುತ್ತ ಬಂದಿದ್ದಾರೆ ಎಂದು ಅವರು ಆರೋಪಿಸಿದರು.
ನಗರದಲ್ಲಿ ಇತ್ತೀಚೆಗೆ ಅಭಿವೃದ್ಧಿ ನೆಪದಲ್ಲಿ ನೂರಾರು ಮರಗಳ ಮಾರಣ ಹೋಮ ನಡೆಯುತ್ತಿದೆ. ಮತ್ತೆ ಅದೇ ಜಾಗದಲ್ಲಿ ಸಸಿಗಳನ್ನು ನೆಡುತ್ತಿಲ್ಲ. ಈ ಕುರಿತು ವಿಚಾರಿಸಿದರೆ ನಮ್ಮ ಬಳಿ ಹಣವಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಪರಿಸರವನ್ನು ಹೆಚ್ಚಾಗಿ ಹಾಳು ಮಾಡುತ್ತಿದ್ದಾರೆ ಎಂದು ಅವರು ದೂರಿದರು.ಈಗಿನ ತಾಪಮಾನದ ಏರಿಳಿತ ಇದನೆಲ್ಲ ಪರಿಗಣಿಸಿ ಪರಿಸರ ಉಳಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯ ಮಾಡಬೇಕು. ಯಾವುದೇ ಸಭೆ ನಡೆಸದೆ ಮರಗಳ ಹನನಕ್ಕೆ ಅನುಮತಿ ನೀಡುತ್ತಿರುವ ಎಸಿಎಫ್ ರವೀಂದ್ರ ಅವರನ್ನು ಈ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸಮಿತಿಯ ಅಧ್ಯಕ್ಷೆ ಭಾನು ಮೋಹನ್, ಹೋರಾಟಗಾರರಾದ ಭಾಮಿ ಶೆಣೈ, ಅರವಿಂದ್ ಶರ್ಮ ಮೊದಲಾದವರು ಇದ್ದರು.