ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ತೆರಿಗೆ ಸಂಗ್ರಹಣೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು ಎಂದು ಜಿಪಂ ಸಿಇಒ ರಿಷಿ ಆನಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲೆಯ ಬಬಲೇಶ್ವರ, ಚಡಚಣ ಹಾಗೂ ಸಿಂದಗಿ ತಾಲ್ಲೂಕಿನಲ್ಲಿ ಉತ್ತಮ ಕರ ವಸೂಲಾತಿ ಮಾಡಿ ಪ್ರಗತಿ ಸಾಧಿಸಲಾಗಿದೆ. ಬಸವನಬಾಗೇವಾಡಿ, ನಿಡಗುಂದಿ ಹಾಗೂ ಕೊಲ್ಹಾರ ತಾಲೂಕಿನ ಗ್ರಾಮ ಪಂಚಾಯತಿಗಳ ತೆರಿಗೆ ಸಂಗ್ರಹ ತೀವ್ರ ಕುಂಠಿತವಾಗಿದೆ. ಆದ್ದರಿಂದ 2 ದಿನಗಳಲ್ಲಿ ವಿಶೇಷ ಕರ ವಸೂಲಾತಿ ಅಭಿಯಾನ ಆಯೋಜಿಸಿ ಶೇ.60 ರಷ್ಟು ಪ್ರಗತಿ ಮಾಡಬೇಕು. ಈ ತಿಂಗಳಲ್ಲಿ ಕರ ವಸೂಲಾತಿ ಶೇ.100 ರಷ್ಟು ಸಾಧಿಸಲು ಸೂಚಿಸಿದರು.ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಗ್ರಂಥಾಲಯ ಮೇಲ್ವಿಚಾರಕರಗಳಿಗೆ ಬಾಕಿ ವೇತನ ಪಾವತಿಸದಿದ್ದರೆ ಅವರ ಕುಟುಂಬಗಳು ಹೇಗೆ ನಡೆಸಬೇಕೆಂದು ಪ್ರಶ್ನಿಸಿದ ಅವರು, ಸಿಬ್ಬಂದಿಗಳಿಗೆ ವೇತನ ಸಮಯಕ್ಕೆ ಸರಿಯಾಗಿ ಕೊಡಬೇಕು. ಸಂಕ್ರಾಂತಿ ದಿನದೊಳಗೆ ಬಾಕಿ ವೇತನ ಪಾವತಿ ಮಾಡಲು ಸಂಬಂಧಿಸಿದ ಪಿಡಿಒಗಳಿಗೆ ನಿರ್ದೇಶನ ನೀಡಿದರು.ವಸತಿ ಯೋಜನೆ:2024-25ನೇ ಸಾಲಿನ ಪ್ರಧಾನ ಮಂತ್ರಿ ಅವಾಸ ಯೋಜನೆಯ ಗುರಿಯನ್ನು ಶೇ.90 ರಷ್ಟು ಅನುಮೋದನೆ ಪಡೆದುಕೊಳ್ಳಬೇಕು. ಬಸವ ವಸತಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಅನುಮೋದನೆಗೆ ಬಾಕಿ ಇರುವ ಗುರಿಯನ್ನು ಅನುಮೋದನೆ ಪಡೆದುಕೊಳ್ಳಬೇಕು. ಜ.9ರಿಂದ 13 ರವರೆಗೆ ವಿಶೇಷ ಅಭಿಯಾನ ಆಯೋಜಿಸಿ ವಿವಿಧ ಹಂತದಲ್ಲಿರುವ ಮನೆಗಳನ್ನು ಪೂರ್ಣಗೊಳಿಸಿ ಮಾಸಿಕ ಅನುಷ್ಠಾನ ಗುರಿ ( MPIC) ಶೇ.60 ರಷ್ಟು ಪ್ರಗತಿ ಸಾಧಿಸಬೇಕೆಂದರು.ಸ್ವಚ್ಛ ಭಾರತ್ ಮಿಷನ್: ಬಸವನ ಬಾಗೇವಾಡಿ, ನಿಡಗುಂದಿ,ಕೊಲ್ಹಾರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಶೌಚಾಲಯ ನಿರ್ಮಿಸಿಕೊಳ್ಳುವ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರವನ್ನು ನೀಡಿ ಕೆಲಸ ಪ್ರಾರಂಭಿಸಬೇಕು. ಈಗಾಗಲೇ ನಿರ್ಮಿಸಿಕೊಂಡು ಫಲಾನುಭವಿಗಳಿಗೆ ತಮ್ಮಗೆ ನೀಡಿದ ಅನುದಾನದಲ್ಲಿ ಅನುದಾನವನ್ನು ಪಾವತಿಸಬೇಕು. ಬಾಕಿ ಉಳಿದ ಎಲ್ಲಾ ಹಂತವಾರು ಜಿಯೋ ಟ್ಯಾಗ್ ಗಳನ್ನು ನಿರ್ದಿಷ್ಟ ಅವಧಿಯಲ್ಲಿ ಮುಕ್ತಾಯಗೊಳಿಸಿ ಗುರಿ ಸಾಧಿಸಬೇಕೆಂದರು. ಅಲ್ಲದೇ, ಸಕಾಲದಲ್ಲಿ ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕಿನಲ್ಲಿ ಅವಧಿ ಮೀರಿದ ಸಕಲ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ವಿಳಂಬ ಮಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.ನರೇಗಾ ಯೋಜನೆ:
ನರೇಗಾ ಯೋಜನೆಯ ಪ್ರಗತಿ ಪರಿಶೀಲಿಸಿದ ಅವರು, ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಯವರು ಸ್ಥಳೀಯವಾಗಿ ಉದ್ಯೋಗ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿ ಕುಟುಂಬಕ್ಕೆ 100 ಮಾನವ ದಿನಗಳ ಕೆಲಸ ನೀಡಬೇಕು. ಮಹಿಳಾ ಭಾಗವಹಿಸುವಿಕೆ ಪ್ರಮಾಣ ಕಡಿಮೆ ಇರುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಐಇಸಿ ಚಟುವಟಿಕೆ, ರೋಜಗಾರ್ ದಿವಸ್ ಹಾಗೂ ಮನೆ ಮನೆಗೆ ಭೇಟಿ ನೀಡಿ ಮಹಿಳೆಯರಿಗೆ ಯೋಜನೆ ಬಗ್ಗೆ ಮಾಹಿತಿ ನೀಡಬೇಕು. ಕೂಲಿಕಾರರಲ್ಲಿ ಮಹಿಳೆಯರ ಪ್ರಮಾಣ ಶೇ.60 ರಷ್ಟು ಆಗಬೇಕು. ಮಹಿಳಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿಗಳಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯನ್ನು ಶೇ.70 ರಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.15ನೇ ಹಣಕಾಸು: ಈ ಯೋಜನೆ ಇದೇ ಮಾರ್ಚ್ ತಿಂಗಳಲ್ಲಿ ಕೊನೆಗೊಳ್ಳವುದರಿಂದ ಅನುದಾನವನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ಡಾ.ವಿಜಯ ಕುಮಾರ್ ಅಜೂರ, ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ನಿಡಗುಂದಿ ತಾಪಂ ಇಒ ವೆಂಕಟೇಶ ವಂದಾಲ, ಬಸವನ ಬಾಗೇವಾಡಿ ತಾಪಂ ಇಒ ಪ್ರಕಾಶ ದೇಸಾಯಿ, ಕೊಲ್ಹಾರ ತಾಪಂ ಇಒ ಸುರೇಶ ಮದ್ದಿನ ಇದ್ದರು.ಸಭೆಯಲ್ಲಿ ಬಸವನಬಾಗೇವಾಡಿ, ನಿಡಗುಂದಿ ಹಾಗೂ ಕೊಲ್ಹಾರ ತಾಪಂ ಸಹಾಯಕ ನಿರ್ದೇಶಕರು, ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಹಾಗೂ ಮೂರು ತಾಲೂಕಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು ಹಾಗೂ ಸಹಾಯಕರು, ಟಿಎನ್‌ಒ , ತಾಪಂ ಎಲ್ಲ ಯೋಜನೆಯ ವಿಷಯ ನಿರ್ವಾಹಕರು, ಐಈಸಿ ಸಂಯೋಜಕರು, ಇತರರು ಇದ್ದರು.ಕೋಟ್
ಇ- ಹಾಜರಾತಿ ಹಾಕದೆ ನಿರ್ಲಕ್ಷಿಸಿದರೆ ಆ ದಿನದ ವೇತನ ಕಡಿತಗೊಳ್ಳತ್ತದೆ. ಇ- ಹಾಜರಾತಿ ಪರಿಗಣಿಸಿ ವೇತನ ಮಾಡಲು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕಸಹಾಯಕರು ಹಾಗೂ ಗ್ರಾಪಂ ಸಿಬ್ಬಂದಿ ಪ್ರತಿದಿನ ಇ-ಹಾಜರಾತಿ ಕಡ್ಡಾಯವಾಗಿ ಹಾಕಬೇಕು. ಪಂಚತಂತ್ರ 2.0 ತಂತ್ರಾಂಶದಲ್ಲಿ ಹೊರಗೆ ಉಳಿದ ಎಲ್ಲಾ ಆಸ್ತಿಗಳ ವಿವರಗಳನ್ನು ಕಡ್ಡಾಯವಾಗಿ 2 ದಿನಗಳಲ್ಲಿ ನಮೂದಿಸಬೇಕು.ರಿಷಿ ಆನಂದ್, ಸಿಇಒ