ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಸಕಾಲದಲ್ಲಿ ನೀಡಬೇಕು. ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಕಾಪಾಡುವ ಉದ್ದೇಶದಿಂದ ಪರಿಷ್ಕರಣೆ ಪ್ರಕ್ರಿಯೆಯ ಪ್ರತಿಯೊಂದು ಹಂತದ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಳ್ಳಬೇಕು.

ಧಾರವಾಡ:

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗಾಗಲೇ ಮತದಾರರ ಮನೆ-ಮನೆಗೆ ಭೇಟಿ ನೀಡಿ, ಗಣತಿ ನಮೂನೆ ವಿತರಿಸುವ ಹಾಗೂ ಗಣಕೀಕರಣದ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲಿಯೇ ಶೇ.100 ರಷ್ಟು ಪ್ರಗತಿ ಸಾಧಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ನಮೂನೆ ತಲುಪಬೇಕು. ಯಾವುದೇ ಅರ್ಹ ವ್ಯಕ್ತಿಯು ಮತಪಟ್ಟಿಯಿಂದ ಬಿಟ್ಟು ಹೋಗದಂತೆ ಕ್ರಮವಹಿಸಬೇಕೆಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಸಕಾಲದಲ್ಲಿ ನೀಡಬೇಕು. ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಕಾಪಾಡುವ ಉದ್ದೇಶದಿಂದ ಪರಿಷ್ಕರಣೆ ಪ್ರಕ್ರಿಯೆಯ ಪ್ರತಿಯೊಂದು ಹಂತದ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಳ್ಳಬೇಕು ಎಂದರು.

ಪರಿಷ್ಕರಣೆ ಕಾರ್ಯದ ಪ್ರಗತಿ ಹಾಗೂ ಎದುರಾಗುವ ಸಮಸ್ಯೆಗಳ ಕುರಿತು ವಾರಕ್ಕೊಮ್ಮೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಬೇಕು. ಸಭೆಯಲ್ಲಿ ಪಡೆದ ಸಲಹೆ ಹಾಗೂ ಆಕ್ಷೇಪಣೆ ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು. ಈಗಾಗಲೇ ಜಿಲ್ಲೆಯ ಎಲ್ಲ ಬಿಎಲ್‌ಒ ಅವರು ಎಎಸ್‌ಡಿಡಿ ಯಾದಿ ತಯಾರಿಸಿ, ಸಂಬಂಧಿಸಿದ ಮತಗಟ್ಟೆಗಳ ಬಿಎಲ್‌ಎ ಅವರಿಗೆ ನೀಡಿ, ಸದರಿ ಯಾದಿಗಳನ್ನು ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಪರಿಶೀಲಿಸಲು ತಿಳಿಸಿದರು.

ಸ್ಥಳಾಂತರಗೊಂಡ ಮತದಾರರ ಯಾದಿಯಲ್ಲಿರುವ ಯಾವುದೇ ಮತದಾರರು ಪುನಃ ಅವರ ವಾಸಸ್ಥಳದಲ್ಲಿರುವುದು ಕಂಡುಬಂದಲ್ಲಿ, ಅಂತಹ ಮತದಾರರ ವಿವರಗಳನ್ನು ಎಎಸ್‌ಡಿಡಿ ಯಾದಿಯಿಂದ ಹಿಂಪಡೆದು ನಿಯಮಾನುಸಾರ ಮುಂದಿನ ಕ್ರಮ ಜರುಗಿಸಬೇಕು. ಸ್ಥಳಾಂತರ ಮತದಾರರ ಯಾದಿಯಲ್ಲಿರುವ ಮತದಾರರು ಯಾವುದೇ ಮಾಹಿತಿಗಾಗಿ ಸಂಬಂಧಪಟ್ಟ ಮತಗಟ್ಟೆಯ ಬಿಎಲ್‌ಒ, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಮತ್ತು ಮತದಾರರ ನೋಂದಣಾಧಿಕಾರಿಗಳಿಗೆ ಸಂಪರ್ಕಿಸಬೇಕು ಎಂದು ಹೇಳಿದರು.

ನವಲಗುಂದ, ಕುಂದಗೋಳ, ಧಾರವಾಡ, ಹುಬ್ಬಳ್ಳಿ ಧಾರವಾಡ ಪೂರ್ವ, ಕಲಘಟಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.100 ರಷ್ಟು ಗಣತಿ ನಮೂನೆ ವಿತರಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಕೇಂದ್ರ ಹಾಗೂ ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ 33,510 ಗಣತಿ ನಮೂನೆ ವಿತರಣೆ ಕಾರ್ಯ ಬಾಕಿ ಇದ್ದು, ಆದಷ್ಟು ಬೇಗನೆ ವಿತರಿಸಬೇಕು ಎಂದು ಸೂಚಿಸಿದ ಅವರು, ಜಿಲ್ಲೆಯಲ್ಲಿ ಶೇ. 57.99ರಷ್ಟು ಗಣತಿ ನಮೂನೆ ಗಣಕೀಕೃತಗೊಂಡಿದ್ದು, ಅದರಲ್ಲಿ ನವಲಗುಂದ ಕ್ಷೇತ್ರದಲ್ಲಿ ಶೇ. 86.56, ಕುಂದಗೋಳದಲ್ಲಿ ಶೇ.69.91, ಧಾರವಾಡ ಕ್ಷೇತ್ರದಲ್ಲಿ ಶೇ. 56.74, ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ ಶೇ. 49.49, ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ 42.09 ರಷ್ಟು, ಪಶ್ಚಿಮ ಕ್ಷೇತ್ರದಲ್ಲಿ ಶೇ. 44.39 ರಷ್ಟು ಹಾಗೂ ಕಲಘಟಗಿಯಲ್ಲಿ ಶೇ. 67 ರಷ್ಟು ಗಣತಿ ನಮೂನೆಗಳು ಗಣಕೀಕೃತಗೊಂಡಿವೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸಭೆಗೆ ಮಾಹಿತಿ ನೀಡಿದರು.

ಜಿಪಂ ಅಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪ್ರೊಬೆಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಅಧಿಕಾರಿಗಳಾದ ಅಜೀಜ್ ದೇಸಾಯಿ, ಪ್ರಭಾವತಿ ಪಕೀರಪುರ, ಡಾ. ರುದ್ರೇಶ ಘಾಳಿ, ಮಲ್ಲಿಕಾರ್ಜುನ ತೊದಲಬಾಗಿ ಮತ್ತಿತರರು ಇದ್ದರು.