ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಜಿಲ್ಲೆಯಲ್ಲಿನ ಸರ್ಕಾರಿ ಆಸ್ತಿಗಳನ್ನು ಗುರುತಿಸಿ, ಹದ್ದುಬಸ್ತುಗೊಳಿಸಿಕೊಂಡು, ಲ್ಯಾಂಡ್ ಬೀಟ್ ದತ್ತಾಂಶದಲ್ಲಿ ಅಪ್‍ಲೋಡ್ ಮಾಡುವ ಕಾರ್ಯದಲ್ಲಿ ಕನಿಷ್ಟ ಶೇ.95 ರಷ್ಟು ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಂದಾಯ ಇಲಾಖಾ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಆಸ್ತಿಗಳನ್ನು ಗುರುತಿಸಿ, ನಿಖರಗೊಳಿಸಿ, ಹದ್ದುಬಸ್ತು ಮಾಡಿಕೊಳ್ಳುವ ಕುರಿತಂತೆ ಸರ್ಕಾರ ಲ್ಯಾಂಡ್ ಬೀಟ್ ಕಾರ್ಯಕ್ರಮ ಜಾರಿಗೊಳಿಸಿದೆ ಎಂದು ತಿಳಿಸಿದರು.
ಬರುವ ಸೆ.27 ರಂದು ಕಂದಾಯ ಸಚಿವರು ರಾಜ್ಯ ಮಟ್ಟದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಇದಕ್ಕಾಗಿ ಅಗತ್ಯ ಮಾಹಿತಿಯನ್ನು ಕ್ರೂಢೀಕರಿಸಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.ವಿಪತ್ತು ನಿರ್ವಹಣೆ, ಆಧಾರ್ ಸೀಡಿಂಗ್, ಲ್ಯಾಂಡ್ ಬೀಟ್, ಇ- ಆಫೀಸ್, ಜನತಾ ದರ್ಶನ ಸಭೆಗಳಲ್ಲಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ, ಸಕಾಲ, ಪೋಡಿ ಪ್ರಕರಣಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಕುಂದುಕೊರತೆ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಪಹಣಿ- ಆಧಾರ್ ಸೀಡಿಂಗ್ ಕಾರ್ಯದಲ್ಲಿ ಪ್ರಗತಿ ಸಾಧಿಸಬೇಕು ಎಂದು ನಿರ್ದೇಶನ ನೀಡಿದರು.ಅಪರ ಜಿಲ್ಲಾಧಿಕಾರಿ ಬಿ.ಟಿ ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತಿಕ್ ಎಂ., ಜಂಟಿಕೃಷಿ ನಿರ್ದೇಶಕ ಮಂಜುನಾಥ್ ಸೇರಿದಂತೆ ಎಲ್ಲ ತಹಸೀಲ್ದಾರರು ಉಪಸ್ಥಿತರಿದ್ದರು.