ಪ್ರತಿಭೆ ಪ್ರದರ್ಶಿಸುವ ಮೂಲಕ ಸಾಧನೆ ಮಾಡಿ: ಶಾಸಕ ದರ್ಶನ್ ಧ್ರುವನಾರಾಯಣ

| Published : Nov 11 2024, 11:52 PM IST

ಪ್ರತಿಭೆ ಪ್ರದರ್ಶಿಸುವ ಮೂಲಕ ಸಾಧನೆ ಮಾಡಿ: ಶಾಸಕ ದರ್ಶನ್ ಧ್ರುವನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಬರೀ ಪಠ್ಯ ವಿಷಯಗಳು ಮಾತ್ರ ಸಾಲದು ಸಾಂಸ್ಕೃತಿಕ ಚಟುವಟಿಕೆಗಳು ಸಹ ಅಗತ್ಯ. ಆದ್ದರಿಂದ ವಿದ್ಯಾರ್ಥಿಗಳು ನಿಮ್ಮ ಆಸಕ್ತಿದಾಯಕವಾದ ರಂಗ ಕಲೆ, ಚಿತ್ರಕಲೆ, ನೃತ್ಯ, ನಾಟಕ, ಜಾನಪದ ಕಲೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ನಂಜನಗೂಡು

ಪ್ರತಿಭೆ ಎಲ್ಲರಲ್ಲೂ ಅಂತರ್ಗತವಾಗಿರುತ್ತದೆ, ಗ್ರಾಮೀಣ ಪ್ರದೇಶದ ಮಕ್ಕಳು ಕೀಳರಿಮೆ ಬಿಟ್ಟು ನಿಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುವ ಮೂಲಕ ಸಾಧನೆ ಮಾಡಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ಪಟ್ಟಣದ ಕಾರ್ಮೆಲ್ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಬರೀ ಪಠ್ಯ ವಿಷಯಗಳು ಮಾತ್ರ ಸಾಲದು ಸಾಂಸ್ಕೃತಿಕ ಚಟುವಟಿಕೆಗಳು ಸಹ ಅಗತ್ಯ. ಆದ್ದರಿಂದ ವಿದ್ಯಾರ್ಥಿಗಳು ನಿಮ್ಮ ಆಸಕ್ತಿದಾಯಕವಾದ ರಂಗ ಕಲೆ, ಚಿತ್ರಕಲೆ, ನೃತ್ಯ, ನಾಟಕ, ಜಾನಪದ ಕಲೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ಜೊತೆಗೆ ಶಿಕ್ಷಣ ಇಲಾಖೆ ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದೆ ಈ ವೇದಿಕೆಯನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಪ್ರತಿಭೆ ಪ್ರದರ್ಶಿಶಿಸಿ ಎಂದು ಕಿವಿಮಾತು ಹೇಳಿದರು.

ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿ ಕೊಡಬೇಕು ಹಾಗೂ ಆಧುನಿಕ ಭರಾಟೆಯ ನಡುವೆ ಜಾನಪದ ಸಂಸ್ಕೃತಿ ನಶಿಸುತ್ತಿದೆ, ಆದ್ದರಿಂದ ಶಿಕ್ಷಕರು ನಮ್ಮ ದೇಶಿಯ ಕಲೆಗೆ ಒತ್ತು ನೀಡಿ ದೇಶಿಯ ಕಲೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಂಘಟಕರ ಆಕ್ರೋಶ

ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಇಂಗ್ಲಿಷ್‌ ಶಾಲೆಯಲ್ಲಿ ಆಯೋಜನೆ ಮಾಡಿರುವ ಶಿಕ್ಷಣ ಇಲಾಖೆ ಅಧಿಕಾರಿಗಳ ಕ್ರಮದ ವಿರುದ್ಧ ಕನ್ನಡ ಸಂಘಟಕರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳು ಅಳಿವಿನ ಅಂಚಿಗೆ ಸಾಗುವ ಹೊತ್ತಿನಲ್ಲಿ. ಸರ್ಕಾರಿ ಶಾಲೆಗಳನ್ನು ಉಳಿಸಬೇಕಾದ ಅಧಿಕಾರಿಗಳು ಕನ್ನಡ ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಆಯೋಜಿಸುವ ಬದಲಾಗಿ ದುಬಾರಿ ಶುಲ್ಕ ಪಾವತಿಸಿ ಖಾಸಗಿ ಶಾಲೆಯಲ್ಲಿ ಆಯೋಜನೆ ಮಾಡಿರುವ ಕ್ರಮವನ್ನು ಖಂಡಿಸಿ, ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಆಯೋಜಿಸಬೇಕೆಂಬ ಸರ್ಕಾರ ನಿಯಮವಿದ್ದರೂ ಸಹ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಖಾಸಗಿ ಶಿಕ್ಷಣ ಸಂಸ್ಥೆಗಳ ಮೊರೆ ಹೋಗುವ ಮೂಲಕ ಸರ್ಕಾರಿ ಶಾಲೆಗಳ ಅಳಿವಿಗೆ ಪಣತೊಟ್ಟಿ ನಿಂತಿದ್ದಾರೆ. ಅಲ್ಲದೆ ಸರ್ಕಾರಿ ಕನ್ನಡ ಶಾಲೆಯ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಕೀಳರಿಮೆ ಬಿಟ್ಟು ತಮ್ಮ ಪ್ರತಿಭೆ ಪ್ರದರ್ಶನ ಮಾಡಲು ಹೇಗೆ ಸಾಧ್ಯವಾಗುತ್ತದೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮ ರತ್ನಾಕರ, ಸತೀಶ್ ದಳವಾಯಿ, ರಂಗನಾಥ್, ರಮೇಶ್ ಇದ್ದರು.

‘ಪ್ರತಿಭಾ ಕಾರಂಜಿ ಸ್ಪರ್ಧೆಗೆ ಸುಮಾರು 13 ಕೊಠಡಿಗಳ ಅವಶ್ಯಕತೆ ಇದೆ. ಅಲ್ಲದೆ ತಾಲೂಕಿನ ಮಧ್ಯಭಾಗದಲ್ಲಿ ಈ ಶಾಲೆ ಇರುವುದರಿಂದ ಸಕಲ ಸೌಲಭ್ಯದ ಜೊತೆಗೆ ತಾಲೂಕಿನ ಎಲ್ಲ ಶಾಲೆಯ ವಿದ್ಯಾರ್ಥಿಗಳು ಬಂದು ಹೋಗಲು ಅನುಕೂಲವಾಗುತ್ತದೆ ಎಂಬ ಹಿತದೃಷ್ಟಿಯಿಂದ ಕಾರ್ಮೆಲ್ ಶಾಲೆಯಲ್ಲಿ ಆಯೋಜನೆ ಮಾಡಲಾಗಿದೆ. ಅಲ್ಲದೆ ಕಳೆದ ಎರಡು ಮೂರು ವರ್ಷಗಳ ಹಿಂದೆಯೂ ಸಹ ಕಾರ್ಮೆಲ್ ಶಾಲೆಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆದ್ದರಿಂದ ಈ ವರ್ಷವೂ ಅದೇ ಶಾಲೆಯಲ್ಲಿ ಆಯೋಜನೆ ಮಾಡಲಾಗಿದೆ.’

- ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ನಂಜನಗೂಡು.