ಅಂಗ ವೈಕಲ್ಯವನ್ನೂ ಮೆಟ್ಟಿನಿಂತು ಸಾಧನೆ ಮಾಡಿ

| Published : Dec 29 2024, 01:20 AM IST

ಸಾರಾಂಶ

ದಾವಣಗೆರೆ: ವಿಕಲಚೇತನರು ಅಂಗ ನೂನ್ಯತೆಯನ್ನೇ ಸಾಧನೆಗೆ ಅಡ್ಡಗಾಲು ಅಂದುಕೊಳ್ಳದೇ, ಅದನ್ನೇ ಸವಾಲಾಗಿ ಸ್ವೀಕರಿಸುವ ಮೂಲಕ ಸಾಧನೆ ಮಾಡಬೇಕು ಎಂದು ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ, ಹಿರಿಯ ವೈದ್ಯ ಡಾ.ಸುರೇಶ ಹನಗವಾಡಿ ಕರೆ ನೀಡಿದರು.

ದಾವಣಗೆರೆ: ವಿಕಲಚೇತನರು ಅಂಗ ನೂನ್ಯತೆಯನ್ನೇ ಸಾಧನೆಗೆ ಅಡ್ಡಗಾಲು ಅಂದುಕೊಳ್ಳದೇ, ಅದನ್ನೇ ಸವಾಲಾಗಿ ಸ್ವೀಕರಿಸುವ ಮೂಲಕ ಸಾಧನೆ ಮಾಡಬೇಕು ಎಂದು ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ, ಹಿರಿಯ ವೈದ್ಯ ಡಾ.ಸುರೇಶ ಹನಗವಾಡಿ ಕರೆ ನೀಡಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಆರ್‌ಪಿಡಿ ಟಾಸ್ಕ್ ಫೋರ್ಸ್‌ ಜಿಲ್ಲಾ ಘಟಕ, ಮಾನಸ ಸಾಧನಾ ವಿಕಲಚೇತನ ಸೇವಾ ಟ್ರಸ್ಟ್‌ನಿಂದ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳ ಸಾಧಕರಿಗೆ ವಿಶೇಷ ಸಾಧನಾ ಪುರಸ್ಕಾರ, ಆದರ್ಶ ದಂಪತಿಗಳು ಪುರಸ್ಕಾರ, ಸರ್ಕಾರಿ ಶಾಲಾ ಮಕ್ಕಳಿಗೆ ಟಿಪ್ಪಣಿ ಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಗ ನೂನ್ಯತೆಯನ್ನು ಸಾಧನೆಗೆ ಅಡ್ಡಗಾಲೆಂದುಕೊಳ್ಳದೇ, ಇದೊಂದು ಅವಕಾಶವೆಂದುಕೊಂಡು ಸಾಧನೆ ಮಾಡಬೇಕು. ಭಗವಂತ ಒಂದು ಕಿತ್ತುಕೊಂಡರೆ, ಅದಕ್ಕೆ ಮೂರು ಪಟ್ಟು ಬುದ್ಧಿವಂತಿಕೆಯನ್ನು ನೀಡಿರುತ್ತಾನೆಂಬುದನ್ನೂ ನೀವೆಲ್ಲರೂ ಮನಗಾಣಬೇಕು. ನಿಮ್ಮಲ್ಲಿ ಅಡಗಿರುವ ವಿಶೇಷ ಪ್ರತಿಭೆಯನ್ನು ಬೆಳಕಿಗೆ ತರುವತ್ತ ಗಮನ ಹರಿಸಬೇಕು ಎಂದರು.ಸಮಾಜ ಮತ್ತು ಸರ್ಕಾರಗಳು ವಿಕಲಚೇತನರಿಗೆ ಅನುಕಂಪ ತೋರಿಸುವುದಕ್ಕಿಂತಲೂ ಸಾಧನೆಗೆ ಪೂರಕ ವಾತಾವರಣ ಮಾಡಿಕೊಡಬೇಕಾಗಿದೆ. ಸರ್ಕಾರದಿಂದಾಗಲೀ, ಸಮಾಜದಿಂದ ಆಗಲಿ ವಿಶೇಷ ಚೇತನರಿಗೆ ಬೇಕಿರುವುದು ಕರುಣೆಯಲ್ಲ. ಬದಲಾಗಿ ಪ್ರೋತ್ಸಾಹಕರ ವಾತಾವರಣ. ಅಂತಹ ಪ್ರೋತ್ಸಾಹವನ್ನು ಸಮಾಜ, ಸರ್ಕಾರಗಳು ನೀಡುವ ಮೂಲಕ ಸಾಧನೆಗೆ ಉತ್ತೇಜಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಹೊಸಪೇಟೆಯ ಸಾಧ್ಯ ಟ್ರಸ್ಟ್‌ನ ಸಂಸ್ಥಾಪಕಿ ಕೆ.ಟಿ.ಆರತಿ ಮಾತನಾಡಿ, ವಿಶೇಷ ಚೇತನರಿಗಾಗಿಯೇ ಇರುವ ಶೇ.5ರ ಮೀಸಲಾತಿ ಎಲ್ಲಾ ವಲಯದಲ್ಲೂ ಕಡ್ಡಾಯವಾಗಿ ಪಾಲನೆಯಾಗಲಿ. ವಿಶೇಷ ಚೇತನರಿಗೆ ಇರುವಂತಹ ಮೀಸಲಾತಿ ಹಲವಾರು ಕಡೆ ದುರ್ಬಳಕೆಯಾಗುತ್ತಿದೆ. ಹಾಗಾಗಿ ಸರ್ಕಾರಿ ಹಾಗೂ ಖಾಸಗಿ ವಲಯ ಸೇರಿದಂತೆ ಪ್ರತಿ ಕ್ಷೇತ್ರದಲ್ಲೂ ಶೇ.5ರ ಮೀಸಲಾತಿ ಪಾಲನೆಯಾದರೆ ವಿಶೇಷ ಚೇತನರು ಸಹ ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಉಭಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು. ಜಗಳೂರಿನ ಮಹಾಂತೇಶ ಬ್ರಹ್ಮ ಮಾತನಾಡಿದರು. ಸಂಸ್ಥೆಯ ಸುರೇಶ ಭಂಡಾರಿ, ಸಬಿಯಾ ಬೇಗಂ ಮರ್ತೂರ, ಡಾ.ಪುಷ್ಪಲತಾ, ರಶ್ಮಿ ದೇಶಮುಖ್, ಬಿ.ಎಂ.ಮಲ್ಲೇಶ, ವಿಜಯಲಕ್ಷ್ಮೀ, ಪೋತಲ ಶ್ರೀನಿವಾಸ ಇತರರು ಇದ್ದರು. ಇದೇ ವೇಳೆ ರಾಜ್ಯದ 45 ಜನ ವಿಶೇಷ ಸಾಧನಾ ಪುರಸ್ಕೃತರನ್ನು ಸನ್ಮಾನಿಸಲಾಯಿತು. 5 ವಿಶೇಷ ಆದರ್ಶ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.