ಸಾರಾಂಶ
ಆರ್ಥಿಕ ಸ್ವಾವಲಂಬನೆ ಸಾಧಿಸಲು ತಾಂತ್ರಿಕ ಯುಗದಲ್ಲಿ ಅವರಿಗೆ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ
ಯಲ್ಲಾಪುರ:
ನಾವು ನೆಲದ ಸತ್ವಯುತ ಶಕ್ತಿ ಉಪಯೋಗಿಸಿ ಕೃಷಿ ಕ್ಷೇತ್ರದ ಸುಸ್ಥಿರ ಅಭಿವೃದ್ಧಿ ಸಾಧಿಸಬೇಕಾಗಿದೆ. ಕೃಷಿ ಕ್ಷೇತ್ರದಲ್ಲಿಯೂ ಮಹಿಳಾ ರೈತರ ಪಾಲುದಾರಿಕೆ ಇದ್ದು, ಆರ್ಥಿಕ ಸ್ವಾವಲಂಬನೆ ಸಾಧಿಸಲು ತಾಂತ್ರಿಕ ಯುಗದಲ್ಲಿ ಅವರಿಗೆ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಯಲ್ಲಾಪುರ ಕೃಷಿ ಇಲಾಖೆಯ ಆತ್ಮಾ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಎಂ.ಜಿ. ಭಟ್ಟ ಹೇಳಿದರು.ಕೃಷಿ ಇಲಾಖೆ ಹಾಗೂ ಭಾಗ್ಯಶ್ರೀ ಸಂಜೀವಿನಿ ಒಕ್ಕೂಟಗಳು ಆಶ್ರಯದಲ್ಲಿ ತಾಲೂಕಿನ ವಜ್ರಳ್ಳಿಯಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆ ನಿಮಿತ್ತ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ರೈತ ಮಹಿಳೆಯರು ಉತ್ತಮ ಕೊಡುಗೆ ನೀಡಿದ್ದಾರೆ ಎಂದ ಗೋಪಾಲ ಭಟ್ಟ ನಡಿಗೆಮನೆ, ಸಾವಯವದಿಂದ ಈ ನೆಲದ ಸತ್ವ ಸಂರಕ್ಷಣೆ ಸಾಧ್ಯ. ನೀರಿನ ಉಳಿತಾಯದ ಬಗೆಗೂ ಗಮನಹರಿಸುವ ಕಾಲ ಸನ್ನಿಹಿತವಾಗಿದೆ ಎಂದರು. ಅನ್ನಪೂರ್ಣಾ ಭಟ್ಟ, ಸವಿತಾ ಕೋಮಾರ ತಮ್ಮ ಕೃಷಿ ಚಟುವಟಿಕೆಗಳ ಅನುಭವ ಹಂಚಿಕೊಂಡರು.ವಜ್ರಳ್ಳಿ ಗ್ರಾಪಂ ಅಧ್ಯಕ್ಷ ಭಗೀರಥ ನಾಯ್ಕ ರೈತ ದಿನಾಚರಣೆ ಉದ್ಘಾಟಿಸಿದರು. ಭಾಗ್ಯಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಕ್ರಿ ಮಹಾದೇವ ಗೌಡ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಗಂಗಾ ಕೋಮಾರ, ಜಿ.ಎನ್. ಕೋಮಾರ, ಪಶು ಪರಿವೀಕ್ಷಕ ಕೆ.ಜಿ. ಹೆಗಡೆ, ಗೋವಿಂದ ಭಟ್ಟ, ರಾಜಾರಾಮ ವೈದ್ಯ, ಶರೀಫಾ ಬಿ. ಮುಲ್ಲಾ, ಯೋಗೇಶ ಮಡಿವಾಳ, ಧನಂಜಯ ನಾಯ್ಕ ಉಪಸ್ಥಿತರಿದ್ದರು. ನಾಗವೇಣಿ ಪಟಗಾರ ಸ್ವಾಗತಿಸಿದರು. ಹೇಮಾ ಆಚಾರಿ ನಿರ್ವಹಿಸಿದರು. ಸಾವಯವ ತಾಂತ್ರಿಕ ವ್ಯವಸ್ಥಾಪಕ ರವಿ ಶಂಕರ ಪ್ರಾಸ್ತಾವಿಕ ಮಾತನಾಡಿದರು. ಪುಸ್ತಕ ಬರಹಗಾರ್ತಿ ಅಂಕಿತಾ ನಾಯ್ಕ ವಂದಿಸಿದರು. ಇದೇ ವೇಳೆ ರೈತ ಮಹಿಳೆಯರು ರಚಿಸಿದ ತರಕಾರಿ ಬೀಜಗಳ ರಂಗೋಲಿ ಪ್ರದರ್ಶನ ಗಮನ ಸೆಳೆಯಿತು.