ಸ್ವಯಂ ಪ್ರೇರಣೆ,ಕಠಿಣ ಪರಿಶ್ರಮ, ನಿರಂತರ ಪ್ರಯತ್ನದಿಂದ ಗುರಿ ತಲುಪಬೇಕು ಆ ನಿಟ್ಟಿನಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಸ್ವಯಂ ಪ್ರೇರಣೆ,ಕಠಿಣ ಪರಿಶ್ರಮ, ನಿರಂತರ ಪ್ರಯತ್ನದಿಂದ ಗುರಿ ತಲುಪಬೇಕು ಆ ನಿಟ್ಟಿನಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಸಲಹೆ ನೀಡಿದರು.

ಸ್ಥಳೀಯ ಜಿಲ್ಲಾ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಜಿಲ್ಲಾಡಳಿತ. ಜಿಪಂ ಹಾಗೂ ಮಹಾನಗರ ಪಾಲಿಕೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ಪಧಾತ್ಮಕ ಪರೀಕ್ಷೆಗಳ ಉಚಿತ ಪೂರ್ವಸಿದ್ಧತಾ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಶುಕ್ರವಾರ ಮಾತನಾಡಿದ ಅವರು

ಈ ತರಬೇತಿ ಕಾರ್ಯಕ್ರಮದಲ್ಲಿ ನೀವು ಏನು ಓದಬೇಕು, ಹೇಗೆ ಓದಬೇಕು ಎಂಬುದನ್ನು ನಾವು ತಿಳಿಸಿಕೊಡಬಹುದು. ಆದರೆ ನಿಜವಾಗಿ ಓದಿ, ಪರಿಶ್ರಮಪಟ್ಟು ಪರೀಕ್ಷೆಗೆ ಸಿದ್ಧರಾಗಬೇಕಾದವರು ನೀವೇ. ನಾವೆಲ್ಲರೂ ನಿಮಗೆ ಪ್ರೇರಣಾದಾಯಕ ಭಾಷಣ ಗಳನ್ನು ಮಾಡಬಹುದು. ಆದರೆ ನಿಮ್ಮಲ್ಲಿ ಸ್ವಯಂ ಪ್ರೇರಣೆ ಇರಬೇಕು. ಕಠಿಣ ಪರಿಶ್ರಮ ಇರಬೇಕು. ಮತ್ತೆ ಮತ್ತೆ ಪ್ರಯತ್ನಿಸುವ ಮನೋಭಾವ ಇರಬೇಕು. ನಿಮ್ಮೊಳಗೆ ಸಾಧಿಸಬೇಕೆಂಬ ಛಲ ಮತ್ತು ಆತ್ಮವಿಶ್ವಾಸ ಇಲ್ಲದಿದ್ದರೆ, ಹೊರಗಿನವರು ಎಷ್ಟೇ ಪ್ರೇರಣೆ ನೀಡಿದರೂ ಅದು ಒಂದೆರಡು ದಿನಗಳಿಗೆ ಮಾತ್ರ ಸೀಮಿತವಾಗುತ್ತದೆ ಎಂದು ಹೇಳಿದರು. ನಿಮ್ಮನ್ನು ನೀವೇ ಪ್ರೇರೇಪಿಸಿಕೊಂಡು ನಿರಂತರವಾಗಿ ಪ್ರಯತ್ನಿಸಿದಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂದರು.

ಜಿಲ್ಲೆಯ ಯುವಕ ಯುವತಿಯರು ಕೇವಲ ನಮ್ಮ ಜಿಲ್ಲೆಯೊಳಗೆ ಮಾತ್ರ ಸ್ಪರ್ಧಿಸುವುದಲ್ಲ, ಬೇರೆ ಜಿಲ್ಲೆಗಳ ಅಭ್ಯರ್ಥಿಗಳ ಜೊತೆಯಲ್ಲಿಯೂ ಉತ್ತಮವಾಗಿ ಸ್ಪರ್ಧಿಸಿ ಯಶಸ್ಸು ಸಾಧಿಸಬೇಕು,ಜಿಲ್ಲೆಯ ಯುವಕರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಗಳನ್ನು ಪಡೆದುಕೊಂಡು, ಉದ್ಯಮಗಳನ್ನು ಸ್ಥಾಪಿಸಿ, ಇತರರಿಗೂ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಬೇಕು. ಪ್ರತಿ ಯೊಬ್ಬರೂ ತಮ್ಮದೇ ಆದ ಕೊಡುಗೆಯನ್ನು ನೀಡಿದಾಗ ಮಾತ್ರ ಜಿಲ್ಲೆ ವೇಗವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಪಾಲಿಕೆ ಆಯುಕ್ತ ಜುಬಿನ್ ಮೋಹಾಪಾತ್ರ ಮಾತನಾಡಿ, ನಿಜವಾದ ಕನಸು ನಿಮಗೆ ನಿದ್ರಿಸಲು ಬಿಡುವುದಿಲ್ಲ. ತಾವು ಈ ತರಬೇತಿಯ ಸದುಪಯೋಗ ಪಡೆದುಕೊಂಡು ಛಲದಿಂದ ಓದಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಹಲವಾರು ಹುದ್ದೆಯನ್ನು ಅಲಂಕರಿಸಿ, ದೇಶದ ರಕ್ಷಕರಾಗುವ ಶಕ್ತಿ ಸಾಮರ್ಥ್ಯ ತಮ್ಮಲ್ಲಿ ಇದೆ. ಪ್ರತಿಯೊಬ್ಬರ ಯಶಸ್ವಿಯ ಹಾದಿ ವಿಭಿನ್ನವಾಗಿರುತ್ತದೆ. ಈ ಭಾಗ ಹಿಂದುಳಿದರುವ ಕಾರಣ ತಾವೆಲ್ಲರೂ ಶ್ರಮಪಟ್ಟು ಮುಂದೆ ಬರಬೇಕು. ಸರಕಾರಿ ನೌಕರಿಯಲ್ಲಿ ಸ್ಪರ್ಧೆ ಬಹಳ ಇರುತ್ತದೆ ತಾವು ಸಮರ್ಪಣಾ ಭಾವದಿಂದ ಅಧ್ಯಯನ ಮಾಡಬೇಕೆಂದು ಹೇಳಿದರು.

ಸಹಾಯಕ ಆಯುಕ್ತರಾದ ಡಾ. ಹಂಪಣ್ಣ ಸಜ್ಜನ. ತಹಸೀಲ್ದಾರ್‌ ಸುರೇಶ ವರ್ಮಾ ಮಾತನಾಡಿದರು.

ಈ ಸಂದರ್ಭದಲ್ಲಿ ಮುಖ್ಯ ಗ್ರಂಥಾಲಯ ಅಧಿಕಾರಿ ಸಿದ್ಧಾರ್ಥ ಭಾವಿಕಟ್ಟಿ. ಉಚಿತ ಸ್ಪರ್ಧಾತ್ಮಕ ಪರೀಕ್ಷಾ ವಿಷಯ ತಜ್ಞ ನಂಜಾ ನಾಯಕ್. ನಗರ ಕೇಂದ್ರ ಗ್ರಂಥಾಲಯ ಅಧಿಕಾರಿ ನಿರ್ಮಲಾ. ವಿಶೇಷ ಕಾರ್ಯಕ್ರಮ ಅಧಿಕಾರಿ ಮೋಹ್ಮದ್ ಯುಸುಫ್ ಸೇರಿ ಉದ್ಯೋಗಾಕಾಂಕ್ಷಿಗಳು. ವಿದ್ಯಾರ್ಥಿಗಳು ಹಾಗೂ ಇತರೆ ವಿವಿಧ ಇಲಾಖೆಯ ಅಧಿಕಾರಿ,ಸಿಬ್ಬಂದಿ ವರ್ಗದವರು ಇದ್ದರು.