ಓದಿನೊಂದಿಗೆ ಕ್ರೀಡೆಯಲ್ಲೂ ಸಾಧನೆ: ಶಾಸಕ ಡಾ.ಮಂತರ್‌ ಗೌಡ ಕರೆ

| Published : May 22 2024, 12:47 AM IST

ಓದಿನೊಂದಿಗೆ ಕ್ರೀಡೆಯಲ್ಲೂ ಸಾಧನೆ: ಶಾಸಕ ಡಾ.ಮಂತರ್‌ ಗೌಡ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರಪೇಟೆ ತಾಲೂಕಿನ ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ವತಿಯಿಂದ ಸೋಮವಾರಪೇಟೆ ಪಟ್ಟಣದಲ್ಲಿರುವ ಹಾಕಿ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಹಾಕಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅರ್ಹತಾ ಪತ್ರ ವಿತರಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡಾಕ್ಷೇತ್ರದಲ್ಲೂ ಸಾಧನೆ ಮಾಡಿದರೆ ಸಾಧಕರಾಗಬಹುದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟಿದ್ದಾರೆ.

ತಾಲೂಕಿನ ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ವತಿಯಿಂದ ಪಟ್ಟಣದಲ್ಲಿರುವ ಹಾಕಿ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಹಾಕಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಆರ್ಹತಾ ಪತ್ರ ವಿತರಿಸಿ ಅವರು ಮಾತನಾಡಿದರು.

ಕ್ರೀಡಾಕ್ಷೇತ್ರದಲ್ಲಿ ಆಸಕ್ತಿಯಿರುವ ಮಕ್ಕಳಿಗೆ ನಾವು ಪ್ರೋತ್ಸಾಹ ನೀಡಬೇಕು. ಸಿಕ್ಕ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಡಿಸಿಕೊಳ್ಳಬೇಕು ಎಂದರು.

ಕೊಡಗಿನಲ್ಲಿ ಹಾಕಿ ಎಂಬುದು ಇಲ್ಲಿನವರ ರಕ್ತದಲ್ಲೇ ಇದೆ. ಇಲ್ಲಿನ ಮೈದಾನದಲ್ಲಿ ಆಡಿದ ಹಾಕಿ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅಂತಹ ಪ್ರತಿಭಾವಂತರು ಸೃಷ್ಟಿಯಾಗಬೇಕಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಗಳಂತಿರುವ ಪ್ರತಿಭೆಗಳನ್ನು ಹುಡುಕಿ ತರಬೇತಿ ನೀಡಬೇಕು. ಸಿಂಥೆಟಿಕ್ ಟರ್ಫ್ ಮೈದಾನ ಉಪಯೋಗವಾಗಬೇಕು. ಕ್ರೀಡಾ ಇಲಾಖೆಯವರು ಹಾಕಿಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ ಮಾತನಾಡಿ, ಸಿಂಥೆಟಿಕ್ ಟರ್ಫ್ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ಇಲಾಖೆ ನಿಭಾಯಿಸಬೇಕು. ಹೆಚ್ಚಿನ ಖರ್ಚುವೆಚ್ಚಗಳನ್ನು ಭರಿಸಬೇಕಾಗಿದೆ. ಒಂದಷ್ಟು ಅಭಿವೃದ್ಧಿ ಕೆಲಸ ಆಗಬೇಕಿದೆ. ಶಾಸಕರ ಸಹಕಾರದಿಂದ ಸರ್ಕಾರದ ಮಟ್ಟದಲ್ಲೂ ಅನುದಾನ ಸಿಗುತ್ತಿದೆ. ಈಗಾಗಲೇ ಎರಡನೇ ಹಾಕಿ ಶಿಬಿರ ನಡೆದಿದೆ. ರಿಯಾಯಿತಿ ಶುಲ್ಕದಲ್ಲಿ ಮೈದಾನ ನೀಡಲಾಗುವುದು. ಸಂಘಸಂಸ್ಥೆಗಳು ಉಚಿತವಾಗಿ ಟರ್ಫ್ ಮೈದಾನ ಕೇಳಬಾರದು ಎಂದು ಮನವಿ ಮಾಡಿದರು.

ಕುವೆಂಪು ವಿದ್ಯಾಸಂಸ್ಥೆಯ ಪ್ರಾಂಶುಪಾಲ ಮಿಲ್‍ಡ್ರೆಡ್ ಗೋನ್ಸಾಲ್ವೆಸ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಮೊಬೈಲ್‍ಗಳಿಗೆ ಮಾರು ಹೋಗಿದ್ದಾರೆ. ಆಟದ ಕಡೆ ಗಮನ ನೀಡುತ್ತಿಲ್ಲ. ಪೋಷಕರು ಕೂಡ ದೈಹಿಕ ಕಸರತ್ತಿಗೆ ಸಮಯ ಕೊಡುತ್ತಿಲ್ಲ. ಈ ಕಾರಣದಿಂದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪ್ರತಿನಿತ್ಯ ಅವಶ್ಯಕವಿರುವಷ್ಟು ದೈಹಿಕ ಕಸರತ್ತು ಮಾಡಬೇಕು. ವಿದ್ಯಾರ್ಥಿಗಳ ಆಟೋಟಗಳಲ್ಲಿ ಪಾಲ್ಗೊಳ್ಳಲೇಬೇಕು ಎಂದು ಹೇಳಿದರು.

ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಒಕ್ಕಲಿಗರ ಯುವವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ಡಾಲ್ಫೀನ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಚ್.ಎನ್.ಅಶೋಕ್, ಹಿರಿಯ ಹಾಕಿ ಆಟಗಾರರಾದ ಹಾಲಪ್ಪ, ಬಿ.ಎಂ. ಸುರೇಶ್, ಪ್ರಮುಖರಾದ ಕೆ.ಎಂ. ಜಗದೀಶ್, ನಂದಕುಮಾರ್, ಲಿಂಗರಾಜು, ಕೋಚ್‍ಗಳಾದ ಪ್ರಕಾಶ್, ವೆಂಕಟೇಶ್, ಸುರೇಶ್, ಅಂತೋಣಿ ಡಿಸೋಜ, ಇಂದಿರಾ ಇದ್ದರು.