ಮನುಷ್ಯನಾಗಿ ಹುಟ್ಟಿದ ಮೇಲೆ ಬದುಕುವ ಛಲ, ಕಾಯಕ ನಿಷ್ಠೆ ಇರಬೇಕು. ಬಡವನಾಗಿ ಜನಿಸಿದರೂ ಬಡವನಾಗೇ ಸಾಯಬಾರದು, ಹುಟ್ಟು ಸಾವಿನ ನಡುವೆ ನಾವು ಮಾಡುವ ಸಾಧನೆ ಬಹುಮುಖ್ಯವಾಗಿದ್ದು, ಉದ್ಯಮಿಯಾಗಿ ಸಾವಿರಾರು ಕೆಲಸಗಳ ಸೃಷ್ಟಿಸುವ ಮೂಲಕ ಸಮಾಜಮುಖಿಯಾಗಿ ಬೆಳೆಯಬೇಕು ಎಂದು ಮಾಜಿ ಸಚಿವ, ಉದ್ಯಮಿ ಡಾ.ಮುರುಗೇಶ ನಿರಾಣಿ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಮನುಷ್ಯನಾಗಿ ಹುಟ್ಟಿದ ಮೇಲೆ ಬದುಕುವ ಛಲ, ಕಾಯಕ ನಿಷ್ಠೆ ಇರಬೇಕು. ಬಡವನಾಗಿ ಜನಿಸಿದರೂ ಬಡವನಾಗೇ ಸಾಯಬಾರದು, ಹುಟ್ಟು ಸಾವಿನ ನಡುವೆ ನಾವು ಮಾಡುವ ಸಾಧನೆ ಬಹುಮುಖ್ಯವಾಗಿದ್ದು, ಉದ್ಯಮಿಯಾಗಿ ಸಾವಿರಾರು ಕೆಲಸಗಳ ಸೃಷ್ಟಿಸುವ ಮೂಲಕ ಸಮಾಜಮುಖಿಯಾಗಿ ಬೆಳೆಯಬೇಕು ಎಂದು ಮಾಜಿ ಸಚಿವ, ಉದ್ಯಮಿ ಡಾ.ಮುರುಗೇಶ ನಿರಾಣಿ ಹೇಳಿದರು.ಬನಹಟ್ಟಿಯ ಜನತಾ ಶಿಕ್ಷಣ ಸಂಘದ ಶ್ರೀತಮ್ಮಣ್ಣಪ್ಪ ಚಿಕ್ಕೋಡಿ ಕಲಾ, ವಾಣಿಜ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಶ್ರೀ ತಮ್ಮಣ್ಣಪ್ಪ ಚಿಕ್ಕೋಡಿ ಪುರಸ್ಕಾರ ವಿತರಣಾ ಸಮಾರಂಭಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಮಠಾಧೀಶರು, ಕೆಲವು ಶಿಕ್ಷಣ ಪ್ರೇಮಿಗಳು ಶಿಕ್ಷಣ ಸಂಸ್ಥೆಗಳ ಮೂಲಕ ಶಿಕ್ಷಣ ದಾಸೋಹ ನೀಡುತ್ತಿದ್ದಾರೆ. ಅಂತಹ ತ್ಯಾಗಿಗಳಲ್ಲಿ ತಮ್ಮಣ್ಣಪ್ಪ ಚಿಕ್ಕೋಡಿಯವರು ಸ್ಥಾಪಿಸಿದ ಸಂಸ್ಥೆ ಹೆಮ್ಮರವಾಗಿ ಬೆಳೆದು ಇಲ್ಲಿ ಕಲಿತ ವಿದ್ಯಾರ್ಥಿಗಳು ಜಗತ್ತಿನಾದ್ಯಂತ ವಿವಿಧ ಸೇವೆಯಲ್ಲಿದ್ದು, ಹಲವರು ಉದ್ಯಮ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ನಮ್ಮಲ್ಲಿ ಶೇ.೭೦ ಜನರು ಕೃಷಿಯನ್ನೇ ನಂಬಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಬೆಳೆಯುವ ಹತ್ತಿಯಲ್ಲಿ ಶೇ.5ರಷ್ಟು ಮಾತ್ರ ಸ್ಥಳೀಯವಾಗಿ ಬಳಕೆಯಲ್ಲಿದ್ದು, ಶೇ.95ರಷ್ಟು ಹತ್ತಿಯನ್ನು ರಫ್ತು ಮಾಡಲಾಗುತ್ತಿದೆ. ಯುವಕರು ನೇಕಾರಿಕೆ ಉದ್ಯಮ ಆರಂಭಿಸಿದಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ ಎಂದ ಅವರು ಜವಳಿ ಉದ್ದಿಮೆ ಸ್ಥಾಪಿಸುವಂತೆ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸಲಹೆ ನೀಡಿದ ಅವರು, ಸಕ್ಕರೆ ಉದ್ಯಮ ಆರಂಭಿಸಿದಾಗ ನಾನೂ ಬಡವನಾಗೇ ಇದ್ದೆ. ಇದೀಗ ಒಂದು ಲಕ್ಷ ಟನ್ ಸಕ್ಕರೆ ಉತ್ಪಾದನೆ ಮತ್ತು ಇಥೆನಾಲ್, ಮೊಲ್ಯಾಸಿಸ್, ವಿದ್ಯುತ್ ಉತ್ಪಾದನೆ ಮೂಲಕ ಸಾಕಷ್ಟು ಉದ್ಯೋಗಾವಕಾಶ ನಿರ್ಮಾಣ ಮಾಡಿದ್ದೇನೆ. ಗೋವಿನಜೋಳ, ಅಕ್ಕಿ ಬಳಸಿ ವೈಮಾನಿಕ ಬಳಕೆಯ ಇಥೆನಾಲ್ ಇಂಧನ ತಯಾರಿಸುವ ಗುರಿ ಶೀಘ್ರ ನನಸಾಗಲಿದೆ. ಯುವಕರು ಯಾವುದೇ ಉದ್ದಿಮೆಯಲ್ಲಿ ತೊಡಗಲಿಚ್ಛಿಸಿದರೆ, ನಾನೇ ಖುದ್ದಾಗಿ ಅವರಿಗೆ ಮಾರ್ಗದರ್ಶನ ನೀಡಲು ಸಿದ್ಧವೆಂದು ಡಾ.ನಿರಾಣಿ ಭರವಸೆ ನೀಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿವೃತ್ತ ಹಿರಿಯ ಪೋಲೀಸ್ ಅಧಿಕಾರಿ ಶಂಕರ ಬಿದರಿ, ತಾವು ಇದೂವರೆಗೆ ಸಾಕಷ್ಟು ಪ್ರಶಸ್ತಿ ಪಡೆದರೂ ಶ್ರೀ ತಮ್ಮಣ್ಣಪ್ಪ ಚಿಕ್ಕೋಡಿ ಪುರಸ್ಕಾರ ಶ್ರೇಷ್ಠವಾಗಿದೆ. ರಾಜ್ಯದೆಲ್ಲೆಡೆ ಇದೂವರೆಗೆ ಚಿಕ್ಕೋಡಿ ತಮ್ಮಣ್ಣಪ್ಪ ಮತ್ತು ಡಾ.ಫ.ಗು.ಹಳಕಟ್ಟಿಯವರಿಗೆ ಸಿಗಬೇಕಿದ್ದ ಗೌರವ ಸಿಕ್ಕಿಲ್ಲವೆಂದು ಬೇಸರಿಸಿದರು. ಕೃಷಿ, ನೇಕಾರಿಕೆ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಬಳಕೆಯಿಂದ ಉದ್ದಿಮೆ ಸ್ಥಾಪಿಸಿ ಉತ್ಪಾದನೆ ಹೆಚ್ಚಳಗೊಳಿಸುವ ಮೂಲಕ ದೇಶದ ಆರ್ಥಿಕ ಪ್ರಗತಿಗೆ ನಾವು ನೆರವಾಗಬೇಕೆಂದರು.ಮಾಜಿ ಸಚಿವೆ, ವಿಪ ಸದಸ್ಯೆ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿ, ಚಿಕ್ಕೋಡಿ ತಮ್ಮಣ್ಣಪ್ಪನವರು ಅಂದಿನ ಮರಾಠಿಮಯ ಮುಂಬಯಿ ಕರ್ನಾಟಕದ ಹಿಂದುಳಿದ ಪ್ರದೇಶ ಮಕ್ಕಳಿಗೆ ಶಿಕ್ಷಣ ನೀಡುವ ಸದುದ್ದೇಶದಿಂದ ಶತಮಾನಗಳ ಹಿಂದೆ ಸಂಸ್ಥೆ ಸ್ಥಾಪಿಸಿದರು. ಬಾಂಬೆ ಕರ್ನಾಟಕ ರಾಜ್ಯದ ವಿಧಾನಸಭೆಯಲ್ಲಿ ನೇಕಾರ ಪ್ರತಿನಿಧಿಯಾದ ಡಾ.ಫ.ಗು.ಹಳಕಟ್ಟಿ ಮೊದಲ ನಾಯಕ. ಪ್ರತಿ ವರ್ಷ ಅವರ ಹೆಸರಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಪರಂಪರೆ ಸ್ವಾಗತಾರ್ಹ ಎಂದು ಹೇಳಿದರು.ಹಿರೇಮಠದ ಶರಣಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಬ್ರಿಜ್‌ಮೋಹನ ಚಿಂಡಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶರಣಬಸವ ಶಿವಾಚಾರ್ಯರು, ಶಾಸಕ ಸಂಗಮೇಶ ನಿರಾಣಿ, ಸಂಘದ ಅಧ್ಯಕ್ಷ ಸುಭಾಸ ಭದ್ರನ್ನವರ, ಉಪಾಧುಕ್ಷ ಬಸವರಾಜ ಭದ್ರನ್ನವರ, ಕಾಯಾಧ್ಯಕ್ಷ ಬಸವಂತಪ್ಪ ಜಾಡಗೌಡ, ಪ್ರಧಾನ ಕಾರ್ಯದರ್ಶಿ ಶಂಕರ ಸೋರಗಾಂವಿ, ಭೀಮಶಿ ಮಗದುಮ್, ಮಲ್ಲಿಕಾರ್ಜುನ ಬಾಣಕಾರ, ಪಂಡಿತ ಹನಗಂಡಿ, ಡಾ.ವಿ.ಆರ್.ಕುಳ್ಳಿ, ಬಿ.ಎಂ. ಪಾಟೀಲ, ಶಂಕರ ಬಿದರಿ, ಜಿ.ಎಂ. ಕುಂಬಾರ ಇತರರು ಇದ್ದರು.
ಸಾವಿತ್ರಿ ಭಜಂತ್ರಿ ಪ್ರಾರ್ಥಿಸಿದರು. ವಿಶ್ವಜ ಕಾಡದೇವರ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಜಿ.ಆರ್. ಜುನ್ನಾಯ್ಕರ್ ಪ್ರಾಸ್ತಾವಿಕ ಮಾತುಗಳಾಡಿದರು. ಡಾ.ಮಂಜುನಾಥ ಬೆನ್ನೂರ ಪ್ರಶಸ್ತಿ ಪ್ರದಾನ ನಡೆಸಿದರು. ಮಾಧವಾನಂದ ಗುಟ್ಲಿ, ವಿಜಯಲಕ್ಷ್ಮೀ ನಿರೂಪಿಸಿದರು. ಡಾ.ಗೀತಾ ಸಜ್ಜನ ವಂದಿಸಿದರು.ಪ್ರಶಸ್ತಿ ಪರಸ್ಕೃತರು:
ಜಯವಂತ ಕಾಡದೇವರ, ಡಾ.ಸಿದ್ಧಗಿರೆಪ್ಪ ಎಸ್..ಹೂಲಿ (ಸಂಸ್ಥೆಗೆ ಸೇವೆ), ಗಣಪತರಾವ ಹಜಾರೆ (ವ್ಯಾಪಾರ), ಮುಂಬೈನ ಡಾ.ಶಮ್‌ಶುದೀನ್ ಸೈಯದಸಾಬ ನಾಯಕವಾಡಿ (ಶಿಕ್ಷಣ), ನಿವೃತ್ತ ನ್ಯಾಯಾಧೀಶ ಗಿರಿಮಲ್ಲಪ್ಪ ಎರಂ.ಕುಂಬಾರ (ಕಾನೂನು), ಧಾರವಾಡ ವಿ.ವಿ. ನಿವೃತ್ತ ಉಪಕುಲಪತಿ ಡಾ.ಬಸಗೌಡ ಎಂ.ಪಾಟೀಲ (ಕ್ರೀಡೆ), ಡಾ.ಪ್ರಿಯಂವದಾ ಹುಲಗಬಾಳಿ (ಕಲೆ, ಸಾಹಿತ್ಯ), ಸಿಂಗಾಪುರದ ಅನಿಲ ಬಾಬು ಬಿದರಿ (ತಂತ್ರಜ್ಞಾನ), ಸತ್ಯಪ್ಪ ಮಲ್ಲಪ್ಪ ಬಂಗಿ (ಕೃಷಿ).