ಸಾರಾಂಶ
ಗುರುವಿಲ್ಲದೇ ಸಾಧನೆ ಅಸಾಧ್ಯ ಎಂದು ನಿವೃತ್ತ ಶಿಕ್ಷಕ ಆರ್.ಜಿ. ದೇಶಪಾಂಡೆ ಹೇಳಿದರು.
ನರಗುಂದ: ಶಾಲೆಗಳಲ್ಲಿ ದೊರೆಯುವ ಶಿಕ್ಷಣ ಅಷ್ಟೇ ಗುಣಾತ್ಮಕವಾಗಿದೆ. ಅದಕ್ಕೆ ಸಾಕ್ಷಿಯಾಗಿ ಶತಮಾನ ಕಂಡ ಬಾಲಕರ ಸರ್ಕಾರಿ ಪ್ರೌಢಶಾಲೆ ನಿಲ್ಲುತ್ತದೆ. ಇಲ್ಲಿಯ ಗುರುಶಿಷ್ಯರ ಬಾಂಧವ್ಯ ವರ್ಣನಾತೀತ. ಗುರುವಿಲ್ಲದೇ ಸಾಧನೆ ಅಸಾಧ್ಯ ಎಂದು ನಿವೃತ್ತ ಶಿಕ್ಷಕ ಆರ್.ಜಿ. ದೇಶಪಾಂಡೆ ಹೇಳಿದರು. ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ 2000-01ನೇ ಸಾಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಬಳಗದಿಂದ ಹಮ್ಮಿಕೊಂಡ ಗುರುವಂದನೆ ಹಾಗೂ ಗೆಳೆಯರ ಪುನರ್ ಮಿಲನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗುರುಗಳ ಮಾರ್ಗದರ್ಶನದಿಂದಲೇ ನಾವು ಗುರುಗಳಾಗಿ ಎಂಬತ್ತರ ಗಡಿ ದಾಟಿದ್ದೇವೆ. ಈಗ ನಮ್ಮ ಕೈಯಲ್ಲಿ ಕಲಿತವರು ಗುರುಗಳಾಗಿ, ಎಂಜಿನಿಯರ್, ಡಾಕ್ಟರ್, ವಿಜ್ಞಾನಿಗಳಾಗಿ ದೇಶ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕಿಂತ ಮಿಗಿಲಾದ ಗುರು ಕಾಣಿಕೆ ಯಾವುದು ಇಲ್ಲ. ಆದ್ದರಿಂದ ಗುರುಗಳಾದವರು, ಆಗಬೇಕಾದವರು ನಿಸ್ವಾರ್ಥ ಸೇವೆ ಸಲ್ಲಿಸಿ ಹಡೆದ ಮಕ್ಕಳಿಗಿಂತ ಶಾಲಾ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಅವರ ಬದುಕಿಗೆ ದಾರಿದೀಪವಾಗಬೇಕು. ಈ ಗುರುವಂದನಾ ಕಾರ್ಯಕ್ರಮ ನೋಡಿದಾಗ ನಮ್ಮ ಜೀವನ ಶಿಕ್ಷಕರಾಗಿ ಸಾರ್ಥಕವಾಗಿದೆ ಎನಿಸಿದೆ. ಹಾಗೆ ಎಲ್ಲರೂ ತಮ್ಮ ತಮ್ಮ ವೃತ್ತಿಗಳಲ್ಲಿ ಸಾರ್ಥಕತೆ ಹೊಂದಿ ಸಮಾಜಕ್ಕೆ ಕೊಡುಗೆಯಾಗಬೇಕು ಎಂದು ಹೇಳಿದರು.ನಿವೃತ್ತ ಶಿಕ್ಷಕ ಆರ್.ಎಲ್. ವಾಸನದ ಮಾತನಾಡಿ, ಪತ್ರಿವನಮಠದ ತಪಸ್ವಿಗಳು ನಡೆದಾಡಿದ ಈ ಪ್ರೌಢಶಾಲೆಯಲ್ಲಿ ಕಲಿತು ಜೀವನ ರೂಪಿಸಿಕೊಂಡ ವಿದ್ಯಾರ್ಥಿಗಳು ಸಮಾಜದಲ್ಲಿ ವಿವಿಧ ಸಾಧನೆ ಮಾಡುತ್ತಿರುವಿರಿ. ಇದೇ ಹಾದಿ ಮುಂದುವರಿಯಲಿ ಎಂದರು.
ಗುರುವಂದನೆ ಸ್ವೀಕರಿಸಿದ ಶಿಕ್ಷಕ ಎಸ್.ಎಂ. ಬಸನಗೌಡ್ರ, ಗುರುವಂದನೆ ನಿಜಕ್ಕೂ ನಮಗೆ ಸಂತಸದ ಕ್ಷಣವಾಗಿದೆ. ಈ ರೀತಿ ಮಿಲನ ನಮಗೆ ಹೊಸ ಚೈತನ್ಯ ತಂದಿದೆ ಎಂದರು.ವಿವಿಧ ಹುದ್ದೆಗಳಲ್ಲಿರುವ ಹಳೆಯ ವಿದ್ಯಾರ್ಥಿಗಳಾದ ಪ್ರವೀಣ ಜಾಧವ, ಶ್ರೀನಿವಾಸ ಮೀಸಿ, ಚೇತನ ಬ್ಯಾಹಟ್ಟಿ, ಸಂತೋಷ ದಳವಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಪತ್ರೀವನಮಠದ ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸುಕ್ಷೇತ್ರ ವಿರಕ್ತಮಠದ ಶಿವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಎಸ್.ಬಿ. ಭಜಂತ್ರಿ, ಆರ್.ಎಲ್. ವಾಸನದ, ಎಸ್.ಎಂ. ಬಸನಗೌಡ್ರ, ಎನ್.ಬಿ. ಕುಂಟರಡ್ಡಿ, ಎಸ್.ವಿ. ಬದಾಮಿ, ಎಂ.ಎಸ್. ಯಾವಗಲ್ಲ, ಆರ್.ಎಲ್. ಮಳಗಾವಿ, ಜೆ.ಬಿ. ಕಲ್ಲನಗೌಡ್ರ, ಎಸ್.ಎ. ಖಾನ, ಎಸ್.ಬಿ. ಹರಪನಹಳ್ಳಿ ಗುರುವಂದನೆ ಸ್ವೀಕರಿಸಿ, ಭಾವುಕರಾಗಿ ಹಳೆಯ ನೆನಪು ಮೆಲಕು ಹಾಕಿದರು. ಶಿಕ್ಷಕ ಯಾದವಾಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಗದೀಶ ರಾಮದುರ್ಗ ವಂದಿಸಿದರು.