ಸಾರಾಂಶ
- ವಿದ್ಯಾರ್ಥಿ ಸಂಘದ ಉದ್ಘಾಟನೆ- ಪ್ರತಿಭಾ ಪುರಸ್ಕಾರದಲ್ಲಿ ಡಾ.ಮಂಜುನಾಥ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಸ್ವಸಾಮರ್ಥ್ಯದ ಅರಿವು ಸಾಧನೆಗೆ ಪ್ರೇರಣೆಯಾಗುತ್ತದೆ. ಭಾರತದ ಯುವಶಕ್ತಿಯು ಜಾಗತಿಕ ಮಟ್ಟದ ಸಾಧನೆಗಾಗಿ ಸ್ವಸಾಮರ್ಥ್ಯದ ಅರಿವು ಮಾಡಿಕೊಳ್ಳಬೇಕಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ವ್ಯಂಗ್ಯಚಿತ್ರಕಾರ ಡಾ. ಎಚ್.ಬಿ. ಮಂಜುನಾಥ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ನಡೆದ ಅಜ್ಜಂಪುರ ಗೋವಿಂದ ಸ್ವಾಮಿ ಭಾಗ್ಯಲಕ್ಷ್ಮಮ್ಮ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಯಕತ್ವ ಗುಣ ಎಂದರೆ ಇತರರ ಮೇಲೆ ದರ್ಪ ತೋರಿಸುವುದಲ್ಲ. ಎಲ್ಲರ ಅಭಿಪ್ರಾಯಗಳಿಗೆ ಅವಕಾಶ ಕೊಟ್ಟು, ಅದರಲ್ಲಿ ಯೋಗ್ಯವಾದದ್ದನ್ನು ಉತ್ತಮ ಕಾರ್ಯಗಳಿಗೆ ಅಳವಡಿಸುವುದಾಗಿದೆ ಎಂದರು.ಉತ್ತಮ ನಾಯಕ ಎನಿಸಿಕೊಳ್ಳಬೇಕಾದಲ್ಲಿ ಉತ್ತಮರೊಂದಿಗೆ ಸ್ನೇಹ ಸಹಾ ಅವಶ್ಯ. ಪಿಯುಸಿ ಅವಧಿಯು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪರ್ವಕಾಲವಾಗಿದೆ. ದೇಶದಲ್ಲಿ ವಾರ್ಷಿಕ ಸುಮಾರು ಒಂದೂವರೆ ಕೋಟಿ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಎದುರಿಸುತ್ತಿದ್ದು, ಕರ್ನಾಟಕದಲ್ಲಿ 6,98,000 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಎದುರಿಸುತ್ತಾರೆ. ಪದವಿಯ ನಂತರ ಉದ್ಯೋಗ ಅರಸುವುದಕ್ಕಿಂತ ಉದ್ಯೋಗದಾತರಾಗುವುದು ವೈಯಕ್ತಿಕ ಭವಿಷ್ಯಕ್ಕೂ ರಾಷ್ಟ್ರದ ಭವಿಷ್ಯಕ್ಕೂ ಉತ್ತಮ ಎಂದರು.
ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ವಜ್ರ ಮಹೋತ್ಸವ ವಿದ್ಯಾಪೀಠ ಹಾಗೂ ಕಾಲೇಜಿನ ಉಪಾಧ್ಯಕ್ಷ ಆರ್.ಎಲ್. ಪ್ರಭಾಕರ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕಾಸಲ್ ಎಸ್. ಸತೀಶ್, ಆರ್.ಜಿ. ನಾಗೇಂದ್ರ ಪ್ರಸಾದ್, ಜೆ.ವಿ. ಗೋಪಾಲಕೃಷ್ಣ ಶ್ರೇಷ್ಠಿ, ಡಾ. ಬಿ.ಪಿ.ಕುಮಾರ, ಆರ್.ಸಿ. ಹಾಲಪ್ಪ ಶೆಟ್ಟಿ, ಪ್ರಾಚಾರ್ಯ ಎಸ್.ಪ್ರದೀಪ ಕುಮಾರ, ವಿದ್ಯಾರ್ಥಿ ಸಂಘದ ಎಚ್.ಮುರಳಿಧರ, ಜಿ.ನರೇಂದ್ರ ಗೌಡ, ಆರ್.ಸಮೀರ್ ಉಪಸ್ಥಿತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ, ಗೌರವಿಸಲಾಯಿತು.ಗಗನಶ್ರೀ ಪ್ರಾರ್ಥಿಸಿದರು. ಅಧ್ಯಾಪಕರಾದ ಸಂಗೀತಾ, ಉಷಾ, ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ವಂದಿಸಿದರು. ಅನಂತರದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
- - - -10ಕೆಡಿವಿಜಿ32ಃ: ದಾವಣಗೆರೆಯ ಎಜಿಬಿ ಕಾಲೇಜಿನ ವಿದ್ಯಾರ್ಥಿ ಸಂಘ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಡಾ. ಎಚ್.ಬಿ. ಮಂಜುನಾಥ ಉದ್ಘಾಟಿಸಿದರು.