ವಿದ್ಯಾರ್ಥಿಗಳು ಗ್ರಾಮದ ಸ್ವಚ್ಛತೆ, ನೈರ್ಮಲ್ಯ ಕಾಪಾಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕೇವಲ ಓದುವುದಕ್ಕಷ್ಟೇ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ ಪೋಷಕರು, ನೀವು ಕಲಿತ ಶಾಲೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಕೀರ್ತಿ ತರಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಭವಿಷ್ಯದಲ್ಲಿ ಏನಾಗಬೇಕೆಂಬ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟ ಗುರಿ ಇದ್ದರೆ ಸಾಧನೆ ಮಾಡುವುದಕ್ಕೆ ಸುಲಭವಾಗಲಿದೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ತಾಲೂಕಿನ ಹೊಸಬೂದನೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಅನಂತಪದ್ಮನಾಭ ದೇವಸ್ಥಾನದ ಆವರಣದಲ್ಲಿ ಬೂದನೂರು ಗ್ರಾಪಂ ಸಹಯೋಗದಲ್ಲಿ ಏರ್ಪಡಿಸಿದ್ದ ಗ್ರಾಪಂ ವ್ಯಾಪ್ತಿಯ ‘ಮಕ್ಕಳ ಗ್ರಾಮ ಸಭೆ’ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮದ ಸ್ವಚ್ಛತೆ, ನೈರ್ಮಲ್ಯ ಕಾಪಾಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕೇವಲ ಓದುವುದಕ್ಕಷ್ಟೇ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ ಪೋಷಕರು, ನೀವು ಕಲಿತ ಶಾಲೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಕೀರ್ತಿ ತರಬೇಕು ಎಂದರು.

ತಾಪಂ ಇಒ ಲೋಕೇಶ್ ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡಲು ಪೂರಕ ವಾತಾವರಣ ಸೃಷ್ಟಿ ಮಾಡುವಂತಹದ್ದು ಶಿಕ್ಷಕರು, ಪೋಷಕರು ಮತ್ತು ಗ್ರಾಪಂಗಳ ಆದ್ಯ ಕರ್ತವ್ಯ. ನಿಮ್ಮ ಸಮಸ್ಯೆಗಳನ್ನು ಕುರಿತು ಪ್ರಶ್ನೆ ಮಾಡಲು ನಿಮಗೆ ಅವಕಾಶ ನೀಡಲಾಗಿದೆ. ಕೆಲವು ಮಕ್ಕಳು ಉತ್ತಮವಾಗಿ ಪ್ರಶ್ನೆ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡುವ ಶಕ್ತಿ ಬೆಳೆಸಿಕೊಂಡರೆ ನಮಗೆ ಬೇಕಾದ್ದನ್ನು ಸುಲಭವಾಗಿ ಪಡೆಯಬಹುದು ಎಂದರು.

ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದು, ನರೇಗಾ ಅಥವಾ ಲೋಕಸಭಾ ಸದಸ್ಯರ ಅನುದಾನದಲ್ಲಿ ಮಾಡಿಕೊಡುವಂತೆ ಸೂಚಿಸಲಾಗಿದೆ. ಇನ್ನೂ ಕೆಲ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ಆದ ನಂತರ ಬಸ್ ತಂಗುದಾಣವಿಲ್ಲ. ನಿರ್ಮಾಣ ಮಾಡುವಂತೆ ಕೇಳಿದ್ದು, ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದು ತುರ್ತಾಗಿ ಮಾಡುವಂತೆ ಹೇಳಲಾಗುವುದು ಎಂದರು.

ಹಳೇಬೂದನೂರಿನಲ್ಲಿ ಎಂಎಸ್‌ಐಎಲ್ ಬಾರ್ ಇದ್ದು, ವಿದ್ಯಾರ್ಥಿಗಳು ಮತ್ತು ಹೆಣ್ಣು ಮಕ್ಕಳು ಓಡಾಡಲು ಆಗುತ್ತಿಲ್ಲ, ಹಾಗಾಗಿ ಬಾರ್ ಅನ್ನು ಸ್ಥಳಾಂತರ ಮಾಡುವಂತೆ ವಿದ್ಯಾರ್ಥಿಗಳು ಕೇಳಿದ್ದಾರೆ. ಬಾರ್ ಅನ್ನು ಬೇರೆ ಕಡೆ ಸ್ಥಳಾಂತರ ಮಾಡಲು ಸಹ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಮಕ್ಕಳ ಗ್ರಾಮಸಭೆ ಅಂಗವಾಗಿ ಮಕ್ಕಳ ಸಂತೆ, ಆರೋಗ್ಯ ತಪಾಸಣೆ, ಮಕ್ಕಳ ಹಕ್ಕುಗಳು ಹಾಗೂ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಬೂದನೂರು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಸ್ಮಿತಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಮಾನಸ, ಉಪಾಧ್ಯಕ್ಷೆ ಜಯಲಕ್ಷ್ಮಿ, ಸದಸ್ಯರಾದ ಕೆಂಪೇಗೌಡ, ಸೌಭಾಗ್ಯಮ್ಮ, ಸುಮತಿ, ಚಿಕ್ಕಸಿದ್ದ, ಪೂರ್ಣಿಮ, ಅರುಣ, ಸಿಡಿಪಿಒ ನಾರಾಯಣ, ಪಿಡಿಒ ಸ್ವಾಮಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರ ಡಾ. ಶರತ್‌ಚಂದ್ರ, ಮುಖಂಡರಾದ ತಿದಿಗೌಡ, ಕುಮಾರ ಉಪಸ್ಥಿತರಿದ್ದರು.