ಕನ್ನಡಪ್ರಭ ವಾರ್ತೆ ಹೊನ್ನಾವರ

ಸಾಧನೆಯ ಹಿಂದೆ ಅನೇಕ ರೀತಿಯ ಶ್ರಮ ಇರುತ್ತದೆ, ನೋವು ಇರುತ್ತದೆ. ಸಾಧನೆಗೆ ಛಲವಿರಬೇಕು. ಎಲ್ಲರೂ ಒಗ್ಗಟ್ಟಾಗಿ ನೂತನ ಸಭಾಭವನವನ್ನು ನಿರ್ಮಿಸಲು ಸಂಕಲ್ಪ ಮಾಡಿದ್ದೀರಿ ಅದು ಯಶಸ್ವಿಯಾಗಲಿ ಎಂದು ಕನ್ಯಾಡಿಯ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವದಿಸಿದರು.ತಾಲೂಕಿನ ಗೇರುಸೊಪ್ಪಾ ಉಪ್ಪಿನಗೊಳಿಯ ಶ್ರೀಗುತ್ತಿಕನ್ನಿಕಾ ಪರಮೇಶ್ವರಿ ದೇವಾಲಯದ ನೂತನ ಸಭಾಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಆತ್ಮವನ್ನು ಅಳಿಯಬೇಕು. ಭಗವಂತನ ತಿಳಿಯಬೇಕು. ಬ್ರಹ್ಮ ಮತ್ತು ಆತ್ಮ ಎಲ್ಲಾ ಒಂದೇ ಎಂಬ ಭಾವನೆ ಬರಬೇಕು. ಪ್ರಾಪಂಚಿಕ ವ್ಯವಸ್ಥೆಯಲ್ಲಿ ಜಾತಿಯ ಕಟ್ಟುಪಾಡು ತಪ್ಪಲ್ಲ ಇದರಲ್ಲಿ ದುರುದ್ದೇಶ ಇರಬಾರದು. ಕನಸುಗಳಿಗೆ ಚೈತನ್ಯ ತುಂಬುವುದು ಜಗತ್ತಿನ‌ ಮಹಾನ್ ಶಕ್ತಿ. ಅವನಿಗೆ ಶರಣಾಗಬೇಕು. ಕರ್ತವ್ಯ ನಿಷ್ಠೆಯಿಂದ ಭಗವಂತನ ಕೃಪೆ ಆಗುವುದು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಶ್ರೀಗುತ್ತಿಕನ್ನಿಕಾ ಪರಮೇಶ್ವರಿ ನೂತನ ಸಭಾಭವನ ನಿರ್ಮಾಣಕ್ಕೆ ಸರಕಾರದಿಂದ ಈಗಾಗಲೇ ₹50 ಲಕ್ಷ ಮಂಜೂರಿ ಮಾಡಿಸಿಕೊಟ್ಟಿದ್ದು ಇನ್ನೂ ಒಂದು ಕೋಟಿ ಮಂಜೂರಾತಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು. ಅಷ್ಟೇ ಅಲ್ಲ ಬರೀ ಶಿಕ್ಷಣವೊಂದೇ ಸಾಕಾಗುವುದಿಲ್ಲ. ಸಂಸ್ಕಾರ, ಗುರುಹಿರಿಯರ ಬಗ್ಗೆ ಶ್ರದ್ಧೆ ಇರಬೇಕು. ಆಗ ಯೋಗ್ಯತೆ ಬರುತ್ತದೆ. ದೇವಸ್ಥಾನದ ನೂತನ ಸಭಾಭವನವನ್ನು ಗ್ರಾಮೀಣ ಭಾಗದ ಬಡವರಿಗೆ, ಜನಸಾಮಾನ್ಯರಿಗೆ ಭಕ್ತರಿಗೆ ಅನುಕೂಲ ಆಗುವಂತೆ ನಿರ್ಮಿಸಿ ಎಂದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಗೇರುಸೊಪ್ಪ ಸೀಮಾ ಶ್ರೀ ಮುಖ್ಯಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕ ಸೂರಾಲು ಚಂದ್ರಶೇಖರ ಭಟ್ ಮಾತನಾಡಿ, ಗೇರುಸೊಪ್ಪ ಭಾಗದಲ್ಲಿ ನಾಲ್ಕು ದೇವಸ್ಥಾನಗಳಲ್ಲಿ ರಥೋತ್ಸವ ನಡೆಯುತ್ತದೆ. ಈ ಭಾಗದಲ್ಲಿ ಧಾರ್ಮಿಕ ಕಾರ್ಯಕ್ಕೆ ಪಕ್ಷ ಬೇಧ ಮರೆತು ಎಲ್ಲರೂ ಸೇರಿ ಸಹಕಾರ ನೀಡುತ್ತಾರೆ ಇದು ಹೆಮ್ಮೆಯ ಸಂಗತಿ ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶ್ರೀಗಳ ಆಶೀರ್ವಾದ ಪಡೆದು ಗುತ್ತಿಕನ್ನಿಕಾ ಪರಮೇಶ್ವರಿ ಶಕ್ತಿ ದೇವತೆ ಸ್ಥಳದಲ್ಲಿ ಭವ್ಯ ಸಭಾಭವನ ಮಾಡಲಾಗಿದೆ. ವೈಯಕ್ತಿಕವಾಗಿ ಸಹಕಾರ ನೀಡಲಾಗುವುದು. ಸರ್ಕಾರದಿಂಲೂ ಹೆಚ್ಚಿನ ಅನುದಾನ ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದರು.

ಮಾಜಿ ಸಚಿವ ಶಿವಾನಂದ ನಾಯ್ಕ, ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ ನಾಯ್ಕ ಸೋನಿ, ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ ಮಾತನಾಡಿದರು.ಶ್ರೀಗುತ್ತಿಕನ್ನಿಕಾ ಪರಮೇಶ್ವರಿ ನಗರದೇವಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗೋವಿಂದ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಶ್ರೀರಾಮ ಕ್ಷೇತ್ರದ ಟ್ರಸ್ಟಿ ಎಚ್.ಆರ್. ನಾಯ್ಕ, ಸ್ಥಳದಾನಿ ಕೃಷ್ಣ ಭೈರ ನಾಯ್ಕ ಉಪಸ್ಥಿತರಿದ್ದರು.ಶ್ರೀಗುತ್ತಿಕನ್ನಿಕಾ ಪರಮೇಶ್ವರಿ ನಗರದೇವಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಮಂಜುನಾಥ ನಾಯ್ಕ ಸ್ವಾಗತಿಸಿದರು. ಮಂಜುನಾಥ ನಾಯ್ಕ ಬೋಳ್ಕಾರ ಪ್ರಾಸ್ತಾವಿಕ ಮಾತನಾಡಿದರು. ಮಾದೇವ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಶರಣಪ್ಪ ವಂದಿಸಿದರು.