ಮರಿಯಮ್ಮನಹಳ್ಳಿ: ನಾಲ್ಕು ಜನರು ಸೈ ಎನ್ನುವ ರೀತಿಯಲ್ಲಿ ಬದುಕಿ ಸಾಧನಾ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾದರೆ ಗುರುವಿಗೆ ಶಿಷ್ಯರು ನೀಡುವ ಬಹು ದೊಡ್ಡ ಗುರುದಕ್ಷಿಣೆಯಾಗಿದೆ ಎಂದು ನಿವೃತ್ತ ಶಿಕ್ಷಕ ಬಿ. ಮಂಜುನಾಥ ಹೇಳಿದರು.

ಇಲ್ಲಿನ ಲಕ್ಷ್ಮೀನಾರಾಯಣ, ಆಂಜನೇಯ ದೇವಸ್ಥಾನದ ಆವರಣದಲ್ಲಿ ಪಟ್ಟಣದ ಜಿಪಂ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಗೋವಿಂದರ ಪರುಶುರಾಮ ಅವರಿಗೆ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣನ್ಯೂಸ್‌ ವತಿಯಿಂದ ಸುವರ್ಣ ಕನ್ನಡಿಗರ- 2026 ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಮರಿಯಮ್ಮನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಹಾಗೂ ಗ್ರಾಮಸ್ಥರು ಹಾಗೂ ಅವರ ಸ್ನೇಹಿತರ ಬಳಗದಿಂದ ತವರೂರಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗೋವಿಂದರ ಪರಶುರಾಮ ರೈತ ಕುಟುಂಬದಲ್ಲಿ ಜನಿಸಿ, ಚಿಕ್ಕವಯಸ್ಸಿನಲ್ಲಿ ಆಡು ಕಾಯುತ್ತಿರುವ ಕಾಯಕದಲ್ಲಿ ತೊಡಗಿಕೊಂಡಿದ್ದರು. ಆಗ ನಾವು ಉಜ್ಜನಿ ಶಾಲೆಯನ್ನು ಮರಿಯಮ್ಮನಹಳ್ಳಿಯಲ್ಲಿ ಆರಂಭಿಸುವಾಗ ಮನೆ ಮನೆಗೆ ಹೋಗಿ ಹುಡುಗರನ್ನು ಕರೆದುಕೊಂಡು ಬಂದು ಶಾಲೆ ಆರಂಭಿಸುವಾಗ ಗೋವಿಂದರ ಪರಶುರಾಮ ಅವರ ಮನೆಗೆ ಹೋಗಿ ಅವರ ತಂದೆ-ತಾಯಿಗೆ ಮನವೊಲಿಸಿ ಆಡು ಕಾಯುವ ಕೆಲಸ ಬಿಡಿಸಿ ಶಾಲೆಗೆ ಸೇರಿಸಿಕೊಂಡು ವಿದ್ಯಾಭ್ಯಾಸ ನೀಡಲಾಯಿತು. ಉಜ್ಜನಿ ಶಾಲೆಯಲ್ಲಿ ಶಾಲೆ ಆರಂಭದ ಮೊದಲ ಬ್ಯಾಚ್‌ ಹುಡುಗರಲ್ಲಿ ಗೋವಿಂದರ ಪರಶುರಾಮ ಮತ್ತು ಅವರ ಸ್ನೇಹಿತರು, ಪದವಿವರೆಗೆ ಓದಿ ಉತ್ತಮ ವಿದ್ಯಾರ್ಥಿಗಳಾಗಿ ಈಗ ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವುದು ಹರ್ಷ ತಂದಿದೆ ಎಂದರು.

ಗೋವಿಂದರ ಪರಶುರಾಮ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ, ಬಡತನದಲ್ಲೇ ವಿದ್ಯಾಭ್ಯಾಸ ಮಾಡಿ, ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶ ಮಾಡಿ ಜಿಪಂ ಸದಸ್ಯರಾಗಿ ಮತ್ತು ಮರಿಯಮ್ಮನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಹುಜನರ ಪ್ರೀತಿಯ ನಾಯಕರಾಗಿ, ಬಹುಮುಖಿ ವ್ಯಕ್ತಿತ್ವವನ್ನು ಹೊಂದಿರುವ ಜನಮಾನಸದ ನಾಯಕನಾಗಿ ರಾಜಕೀಯ ಕ್ಷೇತ್ರದಲ್ಲಿ ಮತ್ತು ಸಮಾಜ ಸೇವೆಯಲ್ಲಿ ಉತ್ತಮ ಸಾಧನೆಯಲ್ಲಿ ತೊಡಗಿಕೊಂಡಿರುವುದರಿಂದ ಕನ್ನಡ ಮತ್ತು ಏಷ್ಯಾನೆಟ್‌ ಸುವರ್ಣನ್ಯೂಸ್ ನವರು ಸುವರ್ಣ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಂದೆ ಇನ್ನು ಶ್ರೇಷ್ಠಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದು ಅವರು ಹಾರೈಸಿದರು.

ಸ್ಥಳೀಯ ಮುಖಂಡ ಎಸ್‌.ಕೃಷ್ಣನಾಯ್ಕ ಮಾತನಾಡಿ, ಮರಿಯಮ್ಮನಹಳ್ಳಿ ಅಭಿವೃದ್ಧಿ ವಿಚಾರಕ್ಕೆ ಯಾವುದೇ ಸಂದರ್ಭದಲ್ಲಿ ಆಗಲಿ ಯಾರ ಒತ್ತಡಕ್ಕೂ ಮಣಿಯದೇ ನ್ಯಾಯಪರವಾಗಿ ಮತ್ತು ನಿಷ್ಠರವಾಗಿ ಅಭಿವೃದ್ದಿ ಪರವಾಗಿ ಹೋರಾಟಕ್ಕೆ ಸದಾ ಮುಂಚಿಣಿಯ ನಾಯಕನಾಗಿ ಗೋವಿಂದರ ಪರಶುರಾಮ ನ್ಯಾಯಪರವಾಗಿ ನಿಲ್ಲುವಂತಹ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.


ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ ಮಾತನಾಡಿ, ನಮ್ಮಂತಹ ಯುವಪೀಳಿಗೆಯ ಜನಪ್ರತಿನಿಧಿಗಳಿಗೆ ಮಾರ್ಗದರ್ಶಿಯಾಗಿ, ರಾಜಕೀಯ ಗುರುವಾಗಿ ಪಕ್ಷಾತೀತ ವ್ಯಕ್ತಿಯಾಗಿರುವ ಝೆಡ್.ಪಿ. ಪರಶುರಾಮರಣ್ಣ ನಮ್ಮೂರಿನ ಹೆಮ್ಮೆ. ಇವರು ಸದಾಕಾಲ ಜನಪರ ಕಾರ್ಯಗಳಿಗೆ ಚಿಂತಿಸುವ ವ್ಯಕ್ತಿಗಳಾಗಿದ್ದಾರೆ ಎಂದರು.

ಸ್ಥಳೀಯ ಮುಖಂಡ ಚಿದ್ರಿ ಸತೀಶ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಪ್ರಶಸ್ತಿ ಪುರಸ್ಕೃತ ಗೋವಿಂದರ ಪರುಶುರಾಮ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನ ಸಮಾಜಸೇವಾ ಮನೋಭಾವ ಸಂಘಟನೆ, ಗೆಳೆಯರ ಒಡನಾಟದಿಂದ ಬಂದಿರುವುದಾಗಿದೆ ಎಂದರು.

ವೈದ್ಯ ಡಾ.ಜಿ.ಎಂ.ಸೋಮೇಶ್ವರ, ನಿವೃತ್ತ ಆರ್‌ಟಿಓ ಎಲ್‌. ಪರಮೇಶ್ವರಪ್ಪ, ಸ್ಥಳೀಯ ಮುಖಂಡರಾದ ಡಿ. ರಾಘವೇಂದ್ರ ಶೆಟ್ಟಿ, ನಾಗೇಶ್‌ (ಚುಕ್ಕಿ), ಪಿ. ಓಬಪ್ಪ, ಎಸ್‌.ಎಂ. ವೀರೇಶ್ವರಸ್ವಾಮಿ, ಕಲ್ಲಾಳ್‌ ಪರುಶುರಾಮಪ್ಪ, ಯು. ನಂದಿಬಂಡಿ ಸೋಮಪ್ಪ, ಸಿ. ಮಂಜುನಾಥ, ಎಲ್. ಜಗನ್ನಾಥ ಸೇರಿದಂತೆ ಇತರರು ಸಭೆಯಲ್ಲಿ ಮಾತನಾಡಿದರು.

ಸ್ಥಳೀಯ ಮುಖಂಡರಾದ ಎನ್. ಸತ್ಯನಾರಯಣ, ತಳವಾರ ದೊಡ್ಡ ರಾಮಣ್ಣ, ತಳವಾರ ಹುಲುಗಪ್ಪ‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಾಂತೇಶ್‌ ನೆಲ್ಲುಕುದುರೆ ತಂಡದವರು ಪ್ರಾರ್ಥಿಸಿದರು. ಪಿ. ರಾಮಚಂದ್ರ ಸ್ವಾಗತಿಸಿದರು. ಎಸ್‌. ನವೀನ್‌ ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ. ಪರುಶುರಾಮ ನಿರೂಪಿಸಿದರು.