ಕಠಿಣ ಶ್ರಮದಿಂದ ಮಾತ್ರ ಸಾಧನೆ ಸಾಧ್ಯ

| Published : May 13 2024, 12:05 AM IST

ಸಾರಾಂಶ

ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗಾಗಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ಸಿದ್ದರಬೆಟ್ಟ ಶ್ರೀಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗಾಗಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ಸಿದ್ದರಬೆಟ್ಟ ಶ್ರೀಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಸುಭಾಷ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣವು ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ. ಕಠಿಣ ಶ್ರಮದಿಂದ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದರು.

ತಾಲೂಕಿನ ಎಲೆರಾಂಪುರದ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಶಿಕ್ಷಣವು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಿದರೂ ಗುಣಾತ್ಮಕ ಶಿಕ್ಷಣ ಅವಶ್ಯಕತೆ ಇದೆ. ಗ್ರಾಮೀಣ ವಿದ್ಯಾರ್ಥಿಗಳು ಪ್ರತಿಭಾನ್ವಿತಾರಿದ್ದರೂ ಅವಕಾಶಗಳಲ್ಲಿ ವಂಚಿತರಾಗುತ್ತಿದ್ದಾರೆ. ಅದನ್ನೆಲ್ಲಾ ಮೀರಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಶಿಕ್ಷಣದಲ್ಲಿ ಸಾಧನೆ ಮಾಡಿರುವವರು ಗ್ರಾಮೀಣ ವಿದ್ಯಾರ್ಥಿಗಳಾಗಿದ್ದಾರೆ. ಗ್ರಾಮೀಣ ಭಾಗದಲ್ಲೇ ಕಾಲೇಜು ಸ್ಥಾಪಿಸಿ ಬಡ ಮಕ್ಕಳನ್ನು ಪ್ರತಿಭಾನ್ವಿತರನ್ನಾಗಿ ಮಾಡಿ ಪ್ರತಿಭಾ ಪುರಸ್ಕಾರ ಮಾಡುತ್ತಿರುವ ಸುಭಾಷ್ ಪಿಯು ಕಾಲೇಜಿನ ಸಾಧನೆ ಪ್ರಶಂಸನೀಯವಾಗಿದೆ ಎಂದರು.ಸುಭಾಷ್ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ನಿರ್ಮಲ ಗಂಗರಾಜು ಮಾತನಾಡಿ, ಸಂಸ್ಥೆಯನ್ನು ಪರಿಶ್ರಮದಿಂದ ಕಟ್ಟಲಾಗಿದೆ. ಎಷ್ಟೇ ಕಷ್ಟಗಳಿದ್ದರೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಹಾಗೂ ಉತ್ತಮ ಫಲಿತಾಂಶ ಬರುವಂತಹ ಭೋದನೆಯನ್ನು ನಮ್ಮ ಆಧ್ಯಾಪಕರು ಮಾಡಿಕೊಂಡು ಬರುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಂಸ್ಥಾಪಕ ಗಂಗರಾಜು, ಸಾಹಿತಿ ಸಿ.ವಿ.ಶೇಷಾದ್ರಿ, ಉಪನ್ಯಾಸಕರುಗಳಾದ ದೊಡ್ಡನಾಗಪ್ಪ ಹಾಜರಿದ್ದರು.