ಪರಿಶ್ರಮದಿಂದ ಸಾಧನೆ ಸಾಧ್ಯ: ಹರ್ಷವರ್ಧನ್

| Published : Jul 30 2025, 12:48 AM IST

ಸಾರಾಂಶ

ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿನ ಲಾಭ ಪಡೆದು ಪರಿಶ್ರಮದಿಂದ ನಿರಂತರ ಓದಿದರೆ ಅತ್ಯುತ್ತಮ ನಾಯಕರಾಗಬಹುದಲ್ಲದೇ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು.

ಪ್ರಥಮ ಪಿ ಯುಸಿ ವಿದ್ಯಾರ್ಥಿಗಳ ಸ್ವಾಗತ ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕೊಟ್ಟೂರು

ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿನ ಲಾಭ ಪಡೆದು ಪರಿಶ್ರಮದಿಂದ ನಿರಂತರ ಓದಿದರೆ ಅತ್ಯುತ್ತಮ ನಾಯಕರಾಗಬಹುದಲ್ಲದೇ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಉಜ್ಜನಿಯ ಜ್ಞಾನ ಗುರು ವಿದ್ಯಾಪೀಠದ ಕಾರ್ಯದರ್ಶಿ ಎಂಎಂಜೆ ಹರ್ಷವರ್ಧನ್ ಹೇಳಿದರು.

ಪಟ್ಟಣದ ಗೋರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ಪ್ರಥಮ ಪಿ ಯುಸಿ ವಿದ್ಯಾರ್ಥಿಗಳ ಸ್ವಾಗತ ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಗುರಿ ಇರಿಸಿಕೊಂಡು ವಿದ್ಯಾರ್ಥಿಗಳು ತಮ್ಮ ತರಗತಿಯಲ್ಲಿ ಗಮನ ಹರಿಸಿದರೆ ಮಹತ್ವದ ಸಾಧನೆ ತೋರಬಹುದು. ಇದರ ಬದಲು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಬಾರದು. ಹೆಚ್ಚು ವಿದ್ಯೆ ಕಲಿತಷ್ಟು ಪರಿಪಕ್ವ ಆಗಬಹುದು ಎಂದರು.

ನಿವೃತ್ತ ಪ್ರಾಧ್ಯಾಪಕಿ ಕುಸುಮ ಸಜ್ಜನ್ ಮಾತನಾಡಿ, ಯಾವ ಗುರಿ ಇರಿಸಿಕೊಂಡರೆ ಸಾಧನೆ ತೋರಬಹುದು ಎಂಬುದನ್ನು ವಿದ್ಯಾರ್ಥಿಗಳು ಮೊದಲು ಅರಿಯಬೇಕು ಎಂದರು.

ಮೈದೂರು ಗೀತಾ, ದಿವಂಗತ ಮೈದೂರು ನಾಗಜ್ಜ ಮತ್ತು ಮೈದೂರು ಕೊಟ್ರೇಶ್ ಅವರ ಹೆಸರಿನ ದತ್ತಿ ಬಹುಮಾನ ನಗದು 65 ಸಾವಿರ ರೂ.ಗಳನ್ನು 13 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಪ್ರಾಚಾರ್ಯ ಡಾ. ಜಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಮಂಜಣ್ಣ, ಪ್ರಾಚಾರ್ಯ ಬಿ.ಪಿ. ತಿಪ್ಪೇಸ್ವಾಮಿ, ಬಿ. ಮರಿಸ್ವಾಮಿ, ಉಮಾಶಂಕರ, ರುದ್ರಪ್ಪ, ವಿ. ಕೊಟ್ರೇಶ್, ಪಾರ್ವತಿ ಗೊಣಳ ಕೊಟ್ರೇಶ್, ಉಪನ್ಯಾಸಕರಾದ ರೇಣುಕ ಸ್ವಾಮಿ, ಶಿವಕುಮಾರ್, ಜಿ. ಶಿವರಾಜ್ , ಎಂ. ಜಯಣ್ಣ, ಎಚ್.ಎಂ. ನಾಗಯ್ಯ, ಜಿ. ಕರಿಬಸಪ್ಪ, ನಾಗರಾಜ ಮಗ್ಗದ, ಬಸವರಾಜ ಮತ್ತಿತರರು ಇದ್ದರು.

ಉಪನ್ಯಾಸಕ ಸಕ್ರಪ್ಪ ರೆಡ್ಡರ್ ಸ್ವಾಗತಿಸಿದರು. ಜಗದೀಶ್ ಚಂದ್ರಬೋಷ್ ಪ್ರಾಸ್ತಾವಿಕ ಮಾತನಾಡಿದರು. ಸಿದ್ದಲಿಂಗನಗೌಡ ವಂದಿಸಿದರು. ಅಂಜಿನಪ್ಪ ನಿರೂಪಿಸಿದರು.