ಸಾರಾಂಶ
ಹೊನ್ನಾವರ: ಉತ್ತಮ ಸಂಸ್ಕಾರದಿಂದ ಸಮಾಜದಲ್ಲಿ ಮುನ್ನಡೆದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ನುಡಿದರು.
ತಾಲೂಕಿನ ಅರೇಅಂಗಡಿಯ ಎಸ್ಎಸ್‌ಕೆಪಿ ಪಿಯು ಕಾಲೇಜಿನ ಸಭಾಭವನದಲ್ಲಿ ಆಲೋಚನಾ ವೇದಿಕೆ ಆಯೋಜಿಸಿದ್ದ ಸುಮನಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಎಲೆಮರೆಯ ಕಾಯಿಯಂತಹ ಅನೇಕ ಸಾಧಕರು ಇದ್ದಾರೆ. ಅಂತಹ ಸಾಧಕರ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ಸಂಘಟನೆಯ ಕಾರ್ಯ ಪ್ರಶಂಸನಾರ್ಹವಾಗಿದೆ. ಡಾ. ಶ್ರೀಪಾದ ಶೆಟ್ಟಿ ತಮ್ಮ ಕುಟುಂಬದವರ ನೆನಪಿನಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಆರ್ಥಿಕವಾಗಿ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.ಕರ್ಕಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಮುಖ್ಯಧ್ಯಾಪಕ ಎಲ್.ಎಂ. ಹೆಗಡೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ದೇಶ ವಿಶ್ವಗುರು ಕನಸು ಕಾಣುತ್ತಿದ್ದು, ಇಂದು ಅದಕ್ಕೆ ಪ್ರೇರಣೆಯಾಗುವ ರೀತಿ ಕಾರ್ಯ ಜರುಗುತ್ತಿದೆ ಎಂದರು.
ವಿವಿಧ ಕ್ಷೇತ್ರದ ಸಾಧಕರಾದ ನೀಲಕಂಠ ನಾಯಕ, ಗಣಪಯ್ಯ ಶೆಟ್ಟಿ, ಶ್ರೀಪಾದ ಭಟ್ಟ, ದೇವು ಮರಾಠಿ, ನಾಗೇಂದ್ರ ಮೊಗೇರ ಅವರನ್ನು ಸನ್ಮಾನಿಸಲಾಯಿತು.ಕರ್ನಾಟಕ ಸಂಸ್ಕೃತ್ ಪರಿಷತ್ ರಾಜ್ಯಾಧ್ಯಕ್ಷ ಮಂಜುನಾಥ ಗಾಂವಕರ್ ಬರ್ಗಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ನಿವೃತ್ತ ಶಿಕ್ಷಕ ಎಸ್.ಜೆ. ಕೈರನ್, ಆಲೋಚನಾ ವೇದಿಕೆಯ ಅಧ್ಯಕ್ಷ ಡಾ. ಶ್ರೀಪಾದ ಶೆಟ್ಟಿ ಮಾತನಾಡಿದರು. ಸಂಚಾಲಕರಾದ ಜಿ.ಆರ್. ನಾಯ್ಕ ಸ್ವಾಗತಿಸಿ, ಕೇಶವ ಶೆಟ್ಟಿ ವಂದಿಸಿದರು. ನಾಗರಾಜ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಮಯೂರ ಹೆಗಡೆ ಚಂಡೆ ವಾದನ, ಕಾರ್ತಿಕೇಯ ಮೃಂದಗ ವಾದನ ಎಲ್ಲರ ಗಮನ ಸೆಳೆಯಿತು.