ಸಾರಾಂಶ
ಛಲ, ಶ್ರದ್ಧೆ ಹಾಗೂ ಸತತ ಪರಿಶ್ರಮ ಹೊಂದಿದ್ದಲ್ಲಿ ಬದುಕಿನಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯವಾಗಲಿದೆ.
ಮಾನ್ವಿ: ಛಲ, ಶ್ರದ್ಧೆ ಹಾಗೂ ಸತತ ಪರಿಶ್ರಮ ಹೊಂದಿದ್ದಲ್ಲಿ ಬದುಕಿನಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ಕಲ್ಮಠ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಪಟ್ಟಣದ ಕಲ್ಮಠ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಕಲ್ಮಠದ ಲಿಂ.ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳವರ ಸ್ಮರಣಾರ್ಥ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರಕ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ವಿದ್ಯಾರ್ಥಿಗಳ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಹಂತ ಅತ್ಯಂತ ಮಹತ್ವದ ಪಾತ್ರವಹಿಸಲಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡು ಛಲ, ಶೃದ್ಧೆ ಸತತ ಪರಿಶ್ರಮದಿಂದ ಕ್ರಿಯಾಶೀಲರಾಗಿ ಅಧ್ಯಾಯನ ನಡೆಸಿ ಸಾಧನೆ ತೋರಬೇಕು ಎಂದು ಸಲಹೆ ನೀಡಿದರು.
ಕಸಾಪ ತಾಲೂಕಾಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಮಾತನಾಡಿದರು.ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಪಾಟೀಲ್, ಆಡಳಿತಾಧಿಕಾರಿ ಸಂಗಯ್ಯಸ್ವಾಮಿ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಸಿದ್ದನಗೌಡ ಪಾಟೀಲ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪ್ರಭಯ್ಯ ಸ್ವಾಮಿ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಕಮತರ ಉಪನ್ಯಾಸಕರಾದ ಗೌರಮ್ಮ, ಹನುಮಂತಗೌಡ, ದುರ್ಗಾ, ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.
10ನೇ ತರಗತಿಯ ಪರೀಕ್ಷಾ ಪೂರಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಬಿವಿಆರ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಶ್ರೇಯಾ ರವರಿಗೆ 20 ಸಾವಿರ ರೂ ಚೆಕ್, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಹಿರೇಕೊಟ್ನೆಕಲ್ ವಿದ್ಯಾರ್ಥಿನಿ ದೇವಿ ಶರಣಪ್ಪ ಇವರಿಗೆ ದ್ವಿತೀಯ ಬಹುಮಾನ 10 ಸಾವಿರ ರು. ಮತ್ತು ನೇತಾಜಿ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಈಸಾ ಶಕ್ಷಾವಲಿ ಇವರಿಗೆ ತೃತೀಯ ಬಹುಮಾನ 5 ಸಾವಿರ ರು. ಚೆಕ್ ವಿತರಿಸಿ ಸನ್ಮಾನಿಸಲಾಯಿತು.