ಸಾಮಾನ್ಯವಾಗಿ ಎಲ್ಲ ರೈತರು ಎಕರೆಗೆ ಸರಾಸರಿ 40 ಟನ್ ಕಬ್ಬು ಬೆಳೆಯುತ್ತಾರೆ. ಆದರೆ ತಾಲೂಕಿನ ಗೊಳಸಂಗಿ ಗ್ರಾಮದ ರೈತನೋರ್ವ ಎಕರೆಗೆ 107 ಟನ್ ಕಬ್ಬು ಬೆಳೆಯುವ ಮೂಲಕ ಜಿಲ್ಲೆಯಲ್ಲೇ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಬಸವರಾಜ ನಂದಿಹಾಳ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಸಾಮಾನ್ಯವಾಗಿ ಎಲ್ಲ ರೈತರು ಎಕರೆಗೆ ಸರಾಸರಿ 40 ಟನ್ ಕಬ್ಬು ಬೆಳೆಯುತ್ತಾರೆ. ಆದರೆ ತಾಲೂಕಿನ ಗೊಳಸಂಗಿ ಗ್ರಾಮದ ರೈತನೋರ್ವ ಎಕರೆಗೆ 107 ಟನ್ ಕಬ್ಬು ಬೆಳೆಯುವ ಮೂಲಕ ಜಿಲ್ಲೆಯಲ್ಲೇ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಬಸವನಬಾಗೇವಾಡಿ ಮತಕ್ಷೇತ್ರದ ಗೊಳಸಂಗಿ ಗ್ರಾಮದ ರೈತ ನಾರಾಯಣ ಸಾಳುಂಕೆ, ಸುಮಾರು 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ 2020ರಲ್ಲಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿ ನಂತರವು ಖಾಲಿ ಕೂಡದೆ ತಮಗೆ ಪಿತ್ರಾರ್ಜಿತವಾಗಿ ಬಂದಿರುವ 7 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಫಸಲು ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಆರಂಭದಲ್ಲಿ ಈರುಳ್ಳಿ, ಮೆಕ್ಕೆಜೋಳ, ಬಾಳೆಹಣ್ಣಿನ ಬೆಳೆಯುತ್ತಿದ್ದ ಸಾಳುಂಕೆ, ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಗದ ಕಾರಣದಿಂದ ವಿವಿಧೆಡೆ ಕಬ್ಬು ಬೆಳೆಯುವ ಪದ್ಧತಿ ಕುರಿತು ಅಧ್ಯಯನ ಮಾಡಿ 2022ರಲ್ಲಿ ಕಬ್ಬು ಬೆಳೆಯಲು ಆರಂಭಿಸಿದ್ದು, ಇದೀಗ ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಇಳುವರಿ ಪಡೆದು ಉತ್ತಮ ಆದಾಯ ಕಂಡುಕೊಂಡಿದ್ದಾರೆ.ಸಾಳುಂಕೆ ಕಬ್ಬು ಬೆಳೆಯಲು ಅನುಸರಿಸಿರುವ ಪದ್ಧತಿ:
ಆರು ಇಂಚು ಭೂಮಿ ಆಳದಲ್ಲಿಯೇ ಡ್ರಿಪ್ ಅಳವಡಿಸಿ, ಡ್ರಿಪ್ ಮೂಲಕವೇ ಬೆಳೆಗೆಳಿಗೆ ನೀರು, ಗೊಬ್ಬರ ಔಷಧಿ ನೀಡಬೇಕು. 7 ಅಡಿ ಅಂತರದಲ್ಲಿ ಸಾಲಿನಿಂದ ಸಾಲು, ಒಂದು ಅಡಿ ಅಂತರದಲ್ಲಿ ಕಬ್ಬಿನ ಸಸಿ ನಾಟಿ ಮಾಡಿ ಎಕರೆಗೆ 100 ರಿಂದ 120 ಟನ್ ಇಳುವರಿ ಪಡೆಯಬಹುದು. ಸಾಮಾನ್ಯವಾಗಿ ಕಬ್ಬು 18 ರಿಂದ 20 ಗಣಿಕೆ ಇರುತ್ತವೆ. ಆದರೆ ನಾನು ಬೆಳೆದ ಎಚ್ಎನ್‌ಕೆ 13374 ತಳಿಯ ಕಬ್ಬಿನ ಗಣಿಕೆಯು 28 ರಿಂದ 35 ರವರೆಗೂ ಇರುವುದು ವಿಶೇಷವಾಗಿದೆ. ಸದ್ಯ ಮೂರನೇ ಬೆಳೆ ಕಬ್ಬು ಕಳೆದೆರಡು ವರ್ಷಕ್ಕಿಂತ ಹೆಚ್ಚಿನ ಫಸಲು ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ನಾರಾಯಣ.ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಎಕರೆಗೆ 107 ಟನ್ ಕಬ್ಬು ಬೆಳೆದ ಕೀರ್ತಿಗೆ ಸಾಳುಂಕೆ ಭಾಜನರಾಗಿದ್ದಾರೆ. ಇವರ ಪ್ರೇರಣೆಯಿಂದ ಇದೀಗ ಜಿಲ್ಲೆಯ ಇಂಡಿ ತಾಲೂಕಿನಲ್ಲಿ 50 ಎಕರೆಯಲ್ಲಿ ಇಂತಹ ಬೆಳೆ ಬೆಳೆಯಲಾಗುತ್ತಿದೆ. ಗೊಳಸಂಗಿ ಗ್ರಾಮದ ಸುತ್ತಮುತ್ತಲೂ ಕೆಲ ರೈತರು ಸುಮಾರು 70 ಎಕರೆಯಲ್ಲಿ ಇಂತಹ ತಳಿ ಬೆಳೆಯಲು ಮುಂದಾಗಿದ್ದಾರೆ. ಇವರ ಸಾಧನೆ ಕಂಡು ಮಹಾರಾಷ್ಟ್ರ, ಪಂಜಾಬ ಸೇರಿದಂತೆ ವಿವಿಧ ರಾಜ್ಯಗಳಿಂದ ಹಾಗೂ ವಿವಿಧ ಜಿಲ್ಲೆಯಿಂದ ರೈತರು, ವಿಜ್ಞಾನಿಗಳು ಆಗಮಿಸಿ ಇವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ರೈತ ನಾರಾಯಣ ಸಾಧನೆ ಕಂಡು ರಾಜ್ಯದ ಸಕ್ಕರೆ, ಜವಳಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿ ಈಚೆಗೆ ನಡೆದ ಕರುಡು ಸಮಿತಿ ರಚನೆ ಸಭೆಯಲ್ಲಿ ಸನ್ಮಾನಿಸಿ ಗೌರವಿಸಿದ್ದಾರೆ.ರೈತ ಬಾಂಧವರು ನಾರಾಯಣ ಸಾಳುಂಕೆ ಬೆಳೆದ ಮಾದರಿಯಂತೆ ತಾವೂ ಕೃಷಿಯಲ್ಲಿ ತೊಡಗಿಕೊಂಡರೆ ಉತ್ತಮ ಫಸಲು ಪಡೆಯುವ ಜೊತೆಗೆ ಉತ್ತಮ ಆದಾಯ ಪಡೆಯಬಹುದು. ರೈತರು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಖುಷಿ ಕಾಣಬೇಕು. ಕೃಷಿ ಅಧಿಕಾರಿಗಳು ಕಡಿಮೆ ವೆಚ್ಚದಿಂದ ಉತ್ತಮ ಫಸಲು, ಆದಾಯ ಪಡೆಯುವ ಕೃಷಿ ಪದ್ಧತಿಗಳನ್ನು ರೈತರಿಗೆ ಮಾಹಿತಿ ನೀಡುವ ಮೂಲಕ ಅವರಿಗೆ ಉತ್ತೇಜನ ನೀಡುವಂತಾಗಬೇಕು ಎಂದು ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.ಧಾರವಾಡ ವಿಶ್ವವಿದ್ಯಾಲಯದಿಂದ ಕಂಡು ಹಿಡಿದಿರುವ ಎಚ್ಎನ್‌ಕೆ 13374 ತಳಿಯ ಕಬ್ಬು ಇದಾಗಿದೆ. ಮೊದಲ ವರ್ಷದಲ್ಲಿ 107 ಟನ್ ಎರಡನೇ ವರ್ಷದಲ್ಲಿ 112 ಟನ್ ಇಳುವರಿ ಬಂದಿದೆ. ಈ ಬಾರಿ 120ಕ್ಕೂ ಅಧಿಕ ಟನ್ ಬರುವ ನಿರೀಕ್ಷೆ ಇದೆ. ಪ್ರತಿ ದಿನ ಮೂರರಿಂದ ಐದು ಗಂಟೆ ನೀರು ಹರಿಸುತ್ತೇನೆ. ರೈತರು ಅಧುನಿಕ ತಂತ್ರಜ್ಞಾನ ಬಳಕೆ ಮಾಡಬೇಕು. ಕೃಷಿ ಮಾಡುವ ಮೊದಲು ಕೃಷಿ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಬೇಕು ಅಂದಾಗ ಮಾತ್ರ ನಿರೀಕ್ಷೆ ಮಟ್ಟದಲ್ಲಿ ಬೆಳೆ ಬೆಳೆಯಲು ಸಾಧ್ಯ ಎಂದು ಕಬ್ಬು ಬೆಳೆಗಾರ ನಾರಾಯಣ ಸಾಳುಂಕೆ ಹೇಳಿದರು.
ಗೊಳಸಂಗಿಯ ರೈತ ನಾರಾಯಣ ಅವರು, ತಳಿ ಆಯ್ಕೆ, ರಸಗೊಬ್ಬರ ನಿರ್ವಹಣೆ, ತಂತ್ರಜ್ಞಾನ ಬಳಕೆ, ಇನ್ ಲ್ಯಾಡ್ ಡ್ರಿಫ್, ಸಮಗ್ರ ಕೀಟ ನಿರ್ವಹಣೆ, ಕಬ್ಬು ಹಚ್ಚುವುದು ಸೇರಿದಂತೆ ವಿಶಿಷ್ಟ ವ್ಯವಸಾಯ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಇದರಿಂದ ಉತ್ತಮ ಫಸಲು ಪಡೆದು ಹೆಚ್ಚಿನ ಆದಾಯ ಪಡೆದುಕೊಂಡಿದ್ದಾರೆ. ಎಲ್ಲ ರೈತ ಬಾಂಧವರು ವಿಶಿಷ್ಟ ವ್ಯವಸಾಯ ಪದ್ಧತಿ ಅಳವಡಿಸಿಕೊಂಡರೆ ಅವರೆಲ್ಲರ ಬದುಕು ಹಸನಾಗುವುದರಲ್ಲಿ ಸಂದೇಹವಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಚ್.ಯರಝರಿ ತಿಳಿಸಿದರು.