ಸಾಧನೆ ಪ್ರಶಸ್ತಿಗಳಿಗಷ್ಟೇ ಸೀಮಿತವಾಗಬಾರದು

| Published : Aug 24 2025, 02:00 AM IST

ಸಾಧನೆ ಪ್ರಶಸ್ತಿಗಳಿಗಷ್ಟೇ ಸೀಮಿತವಾಗಬಾರದು
Share this Article
  • FB
  • TW
  • Linkdin
  • Email

ಸಾರಾಂಶ

ಸಾಧನೆ ಎಂಬುದು ಕೇವಲ ಪ್ರಶಸ್ತಿಗಳಿಗಷ್ಟೇ ಸೀಮಿತವಾಗಬಾರದು. ಅದರಾಚೆಗಿನ ಬದುಕಿಗೂ ಸ್ಪೂರ್ತಿಯಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಾರ್ಯದರ್ಶಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಸಾಧನೆ ಎಂಬುದು ಕೇವಲ ಪ್ರಶಸ್ತಿಗಳಿಗಷ್ಟೇ ಸೀಮಿತವಾಗಬಾರದು. ಅದರಾಚೆಗಿನ ಬದುಕಿಗೂ ಸ್ಪೂರ್ತಿಯಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಾರ್ಯದರ್ಶಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.ನಗರದ ಕನ್ನಡ ಭವನದಲ್ಲಿ ಶಾರ್ವರಿ ಟ್ರಸ್ಟ್ ತುಮಕೂರು ಇವರ ಮೊದಲನೇ ವಾರ್ಷಿಕೋತ್ಸವ ಹಾಗೂ 2024 ನೇ ಸಾಲಿನ ಬೃದಂಗ ನಾದಂ ಗಿನ್ನಿಸ್ ವರ್ಡ್ ರೆಕಾರ್ಡ್ ನಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಹಾಗೂ ದೂರ ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಪಡೆದ ಮಕ್ಕಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕಲೆಗಳು ಮನುಷ್ಯನನ್ನು ಸದಾ ಚಲನಶೀಲವಾಗಿ ಇಡುತ್ತೇವೆ. ಹಾಗಾಗಿ ಮದುವೆ, ಸರಕಾರಿ ಕೆಲಸ, ಮಕ್ಕಳ ಪಾಲನೆ, ಪೋಷಣೆ ಹೆಸರಿನಲ್ಲಿ ಕಲಿತ ಕಲೆಯನ್ನು ಅರ್ಧಕ್ಕೆ ನಿಲ್ಲಿಸದೆ ಅದನ್ನು ಜೀವಿತದ ಕೊನೆಯವರೆಗೂ ಮುಂದುವರೆಸಿಕೊಂಡು ಹೋಗುವಂತೆ ಸಲಹೆ ನೀಡಿದರು. ಇಂದಿನ ಯುವಜನತೆ ಹಾಗೂ ಪೋಷಕರು ಹೆಚ್ಚು ಅಂಕ ಪಡೆಯುವುದೇ ಸಾಧನೆ ಎಂದು ಕೊಂಡಿದ್ದಾರೆ. ಇದರಿಂದ ಮಕ್ಕಳ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಹದಿ ಹರೆಯದ ಮಕ್ಕಳಲ್ಲಿ ಆತ್ಮಹತ್ಯೆಗೆ ಕಾರಣಗಳೇನು ಎಂಬುದನ್ನು ಅರಿಯಲು ಸಂಶೋಧನೆ ಕೈಗೊಂಡಾಗ ತಿಳಿದು ಬಂದ ಆಂಶ ಆತಂಕಕಾರಿಯಾಗಿದೆ ಎಂದರು.ಹೆಚ್ಚು ಅಂಕ ಪಡೆದು ತಮ್ಮ ಪೋಷಕರನ್ನು ತೃಪ್ತಿ ಪಡಿಸಬೇಕೆಂಬ ಧಾವಂತದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗುವ ಮಕ್ಕಳು, ಒಂದು ಹಂತದಲ್ಲಿ ಅದನ್ನು ಸಾಧಿಸಲಾಗದೆ ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದಾರೆ. ಅಲ್ಲದೆ ಚಿಕ್ಕ ವಯಸ್ಸಿನ ಮಕ್ಕಳನ್ನು ಅವರ ಭವಿಷ್ಯದ ಹೆಸರಿನಲ್ಲಿ ವಸತಿ ಶಾಲೆ, ಹಾಸ್ಟಲ್‌ಗಳಲ್ಲಿ ಒಂಟಿಯಾಗಿ ಬಿಡುವುದರಿಂದ ಖಿನ್ನತೆಗೆ ಒಳಗಾಗಿ ಸಾವಿನ ಮನೆ ತುಳಿಯುತ್ತಿದ್ದಾರೆ ಎಂದರು. ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಒಂದು ಸರಕಾರ ಮಾಡುವ ಕೆಲಸವನ್ನು ಎನ್.ಜಿ.ಒಗಳು ಮಾಡುತ್ತಿವೆ. ಜನರಿಗೆ ಮಾಹಿತಿ, ಜಾಗೃತಿಯಂತಹ ಮಹತ್ವದ ಕಾರ್ಯಗಳಲ್ಲಿ ಸರಕಾರೇತರ ಸಂಸ್ಥೆಗಳು ತೊಡಗಿವೆ. ಶಾರ್ವರಿ ಟ್ರಸ್ಟ್ ಸಾಧನೆ ಮಾಡಿದ ಮಕ್ಕಳನ್ನು ಅಭಿನಂದಿಸುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾರ್ವರಿ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಮೀನಾ ಪ್ರದೀಪ್, ಸಮಾಜಕ್ಕೆತಮ್ಮ ಕೈಲಾದ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ಶಾರ್ವರಿ ಟ್ರಸ್ಟ್ ಆರಂಭಿಸಿ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮಕ್ಕಳು ಸಾಧನೆಯ ಮೂಲಕ ಮಾತನಾಡಿದ್ದಾರೆ. ನಮ್ಮ ಮಾಧ್ಯಮಗಳು ಸಾಧಕರಿಗಿಂತ ಭಾದಕರನ್ನು ಮುಖಪುಟಗಳಲ್ಲಿ ಪ್ರಕಟಿಸುತ್ತಿವೆ. ಭಾರತೀಯ ಸಂಗೀತ, ನೃತ್ಯಕ್ಕೆ ವಿಶ್ವದೆಲ್ಲಡೆ ಮನ್ನಣೆಯಿದೆ. ನಾನು ಬನಾರಸ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದಾಗ, ವಿದೇಶಗಳ ಅನೇಕ ಜನರು ಭಾರತಕ್ಕೆ ಸಂಗೀತ, ನೃತ್ಯ ಅಭ್ಯಾಸಕ್ಕೆ ಬರುತಿದ್ದನ್ನು ಕಂಡಿದ್ದೇನೆ. ಇಂದಿಗೂ ಆ ಪರಂಪರೆ ಮುಂದುವರೆದಿದೆ. ಈ ಕಲೆಗೆ ಸಮರ್ಪಣಾ ಮನೋಭಾವ ಮುಖ್ಯ. ಎಲ್ಲವನ್ನು ಸಮರ್ಪಿಸಿಕೊಂಡಾಗ ಮಾತ್ರ ಈ ಕಲೆ ಒಲಿಯಲಿದೆ ಎಂದರು. ರಂಗಭೂಮಿ ಕಲಾವಿದ ಡಮರುಗ ಉಮೇಶ್ ಮಾತನಾಡಿದರು. ಇದೇ ವೇಳೆ ವಿದೂಷಿ ಸಹನ ಓಹಿಲೇಶ್‌ ಅವರಿಗೆ ಗೌರವ ಸಮರ್ಪಣೆ ನಡೆಯಿತು. ವೇದಿಕೆಯಲ್ಲಿ ಉಪನ್ಯಾಸಕರಾದ ವಿಜಯಕುಮಾರ್, ಕುಮಾರಸ್ವಾಮಿ, ಬಿಜೆಪಿ ಯುವ ಮುಖಂಡ ಡಾ.ದರ್ಶನ್ ಮತ್ತಿತರರು ಉಪಸ್ಥಿತರಿದ್ದರು. ರೇವತಿ ನೃತ್ಯ ಕಲಾ ಮಂದಿರದ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು.