ಉತ್ತಮ ಶಿಕ್ಷಣದಿಂದ ಸಾಧನೆ: ಉಳುವಂಗಡ ಕಾವೇರಿ ಉದಯ

| Published : Feb 27 2025, 12:31 AM IST

ಸಾರಾಂಶ

ಜ್ಞಾನವನ್ನು ಕದಿಯಲು ಯಾರಿಗೂ ಸಾಧ್ಯವಿಲ್ಲ. ಅದು ಶಿಕ್ಷಣದಿಂದ ಬರುತ್ತದೆ ಎಂದು ಉಳುವಂಗಡ ಕಾವೇರಿ ಉದಯ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜ್ಞಾನವನ್ನು ಕದಿಯಲು ಯಾರಿಗೂ ಸಾಧ್ಯವಿಲ್ಲ. ಅದು ಶಿಕ್ಷಣದಿಂದ ಬರುತ್ತದೆ. ಪ್ರೌಢಶಾಲಾ ಹಂತದಲ್ಲಿ ಉತ್ತಮ ಶಿಕ್ಷಣ ಸಿಕ್ಕಿ ಅಭ್ಯರ್ಥಿಗಳು ಮನಸ್ಸು ಮಾಡಿದರೆ ಯಾವ ಸಾಧನೆ ಬೇಕಾದರೂ ಮಾಡಬಹುದು ಎಂದು ಸಾಹಿತಿ, ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ ನುಡಿದರು.

ಬಿರುನಾಣಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರಿ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕೈಬುಲಿರ ಪಾರ್ವತಿ ಬೋಪಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

2023-24ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ನಡೆದ ಹತ್ತನೇ ತರಗತಿಯ ಕನ್ನಡ ಮಾಧ್ಯಮ ಪರಿಕ್ಷೆಯಲ್ಲಿ ಮೊದಲಿಗಳಾಗಿ ಬಂದ ಯು.ಅದವಿಯಾ ಸಾಕ್ಷಿ ಎಂದರು. ಮಾದಾಪುರದಂತಹ ಗ್ರಾಮೀಣ ಪ್ರದೇಶದ ಶ್ರೀಮತಿ ಚೆನ್ನಮ್ಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಜಿಲ್ಲೆಗೆ ಪ್ರಥಮ ಬಂದದ್ದು ನಿಜಕ್ಕೂ ಸಾಧನೆಯೇ ಸರಿ, ಇದು ಎಲ್ಲ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು ಎಂದರು.

ದತ್ತಿದಾನಿಗಳ ಆಶಯದಂತೆ 2023-24ನೇ ಸಾಲಿನಲ್ಲಿ ಕೊಡಗು ಜಿಲ್ಲೆಯ 10ನೇ ತರಗತಿಯ ಕನ್ನಡ ಮಾಧ್ಯಮ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಾದಾಪುರದ ಶ್ರೀಮತಿ ಚೆನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿನಿ ಅದವಿಯಾ ಯು. ರವರು ಮೂಡಬಿದರೆಯ ಕಾಲೇಜಿನಲ್ಲಿ ಮುಂದಿನ ಶಿಕ್ಷಣ ಪಡೆಯುತ್ತಿದ್ದು ಅವರ ಪರವಾಗಿ ಅವರ ಸಂಬಂದಿ , ಶಿಕ್ಷಕಿ, ಕೆ.ಎ. ನಸೀಮ ಗೌರವ ಸ್ವೀಕರಿಸಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಈಗಾಗಲೇ 35 ದತ್ತಿನಿಧಿಗಳು ಸ್ಥಾಪಿತವಾಗಿದೆ. ಎಲ್ಲ ದತ್ತಿ ಸ್ಥಾಪನೆಗಳ ಉದ್ದೇಶ ವಿದ್ಯಾರ್ಥಿಗಳಿಗೆ ಸಾಹಿತ್ಯಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳ ಪರಿಚಯ ಮಾಡುವುದಾಗಿದೆ. ಜಾನಪದ ಕಲೆಗಳ ಕುರಿತು, ಜಾನಪದ ಸಾಹಿತ್ಯದ ಕುರಿತು, ಕನ್ನಡ ಸಾಹಿತ್ಯದ ಬೆಳವಣಿಗೆ ಕುರಿತು, ಕನ್ನಡ ಮತ್ತು ಕೊಡವ ಭಾಷಾ ಸಂಬಂಧದ ಕುರಿತು, ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ರವರ ಸಾಧನೆಗಳ ಕುರಿತು ಶೈಕ್ಷಣಿಕವಾಗಿ ಸಾಧನೆ ಮಾಡಿದ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿ ಸಾಧಕರ ಕುರಿತು ಉಪನ್ಯಾಸಗಳಿವೆ. ಕೈಬುಲಿರ ಪಾರ್ವತಿ ಬೋಪಯ್ಯ ಈಗಾಗಲೇ ಒಂದು ದತ್ತಿ ಸ್ಥಾಪಿಸಿದ್ದು 10ನೇ ತರಗತಿಯಲ್ಲಿ ಕೊಡಗು ಜಿಲ್ಲೆಯ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯನ್ನು ಗೌರವಿಸುವುದಾಗಿದೆ. ಅಲ್ಲದೇ ಇನ್ನೂ ಎರಡು 50,000 ರು. ಗಳ ದತ್ತಿಯನ್ನು ಪಾರ್ವತಿ ಬೋಪಯ್ಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಅರ್ಪಿಸಿದ್ದಾರೆ ಅವರಿಗೆ ಅಭಿನಂದನೆಗಳು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿರುನಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಮ್ಮತ್ತಿರ ರಾಜೇಶ್ ನಮ್ಮ ಗ್ರಾಮದಲ್ಲಿ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ಏರ್ಪಡಿಸಿದ್ದಕ್ಕೆ ಧನ್ಯವಾದ ಅರ್ಪಿಸಿದರು. ಮತ್ತು ಮುಂದಿನ ದಿನಗಳಲ್ಲಿ ಇಲ್ಲಿ ಕಾರ್ಯಕ್ರಮ ನಡೆಸುವ ಸಂದರ್ಭ ಪಂಚಾಯಿತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ನುಡಿದರು.

ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷರಾದ ಎ.ಬಿ.ಲಾಲ ಅಪ್ಪಣ್ಣ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ಸಣ್ಣ ಸಣ್ಣ ಹಳ್ಳಿಗಳಿಗೂ ಭೇಟಿ ನೀಡಿ ಕಾರ್ಯಕ್ರಮ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು ನುಡಿಯ ಆಚಾರ ವಿಚಾರಗಳ ಸಂಸ್ಕೃತಿಯ ಅರಿವು ಮೂಡಿಸುತ್ತಿರುವುದು ಅಭಿನಂದನೀಯ ಎಂದರು.

ದತ್ತಿ ದಾನಿಗಳಾದ ಕೈಬುಲಿರ ಪಾರ್ವತಿ ಬೋಪಯ್ಯ ಅವರನ್ನು ಎರಡು ನೂತನ ದತ್ತಿ ಸ್ಥಾಪನೆ ಮಾಡಿದಕ್ಕಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಸೇವೆ ಮತ್ತು ಕ್ರೀಡಾ ಸಾಧಕರನ್ನು ಗುರುತಿಸಿ ಗೌರವಿಸುವ ಕುರಿತು ಈ ದತ್ತಿ ಸ್ಥಾಪನೆ ಮಾಡಿರುವುದಾಗಿ ತಿಳಿಸಿದರು.

ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೋಳೆರ ದಯಾ ಚಂಗಪ್ಪ ಕನ್ನಡ ನಾಡು ನುಡಿ ಕನ್ನಡ ಧ್ವಜದ ಇತಿಹಾಸದ ಕುರಿತು ಮಾತನಾಡಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಬಿ.ಬಿ ಸರಸ್ವತಿ ಈ ಕಾರ್ಯಕ್ರಮದ ನೆನಪಿಗೆ ನಡೆಸಿದ ಪ್ರಬಂದ ಸ್ಪರ್ಧೆ ಮತ್ತು ಗೀತ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

ವೇದಿಕೆಯಲ್ಲಿ ಶ್ರೀ ಭಗವತಿ ದೇವಸ್ಥಾನ ಸಮಿತಿಯ ಅಧ್ಯಕ್ಷರು, ಮಾಜಿ ಸೈನಿಕರೂ ಆದ ಕಾಳಿಮಾಡ ಮುತ್ತಣ್ಣ, ತಾಲೂಕು ಪಂಚಾಯಿತಿಯ ಮಾಜಿ ಸದಸ್ಯರಾದ ಬೊಳ್ಳೆರ ಪೊನ್ನಪ್ಪ, ಹುದಿಕೇರಿ ಹೋಬಳಿ ಗೌರವ ಕಾರ್ಯದರ್ಶಿಗಳಾದ ಕುಪ್ಪಣ್ಣಮಾಡ ನಂಜಮ್ಮ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಾನಂಗಡ ಅರುಣ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಹುದಿಕೇರಿ ಹೋಬಳಿ ವ್ಯಾಪ್ತಿಯಲ್ಲಿ ಗ್ರಾಮಸಿರಿ ಕಾರ್ಯಕ್ರಮ ಮಾಡುವ ಮೂಲಕ ಜಿಲ್ಲೆಯ ಜಾನಪದ, ಕೃಷಿಕ ವರ್ಗದ ಆಚರಣೆ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು, ಸಾಧಕರನ್ನು ಗೌರವಿಸುವುದು ಮತ್ತು ಸಮಾಜದಲ್ಲಿ ಸೇವೆ ಸಲ್ಲಿಸಿ ಕಣ್ಮರೆಯಾದವರನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮವನ್ನು ಮಾಡುವುದಾಗಿ ತಿಳಿಸಿದರು.

ಪ್ರಬಂಧ ಸ್ಪರ್ಧೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿನಿ ಸೌಮ್ಯ ಪಿ. ಎಸ್ ಪ್ರಥಮ ಸ್ಥಾನ ಪಡೆದರೆ, 6ನೇ ತರಗತಿಯ ಜ್ಯೋತಿ ಜಿ. ದ್ವಿತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ತಾರುಣ್ಯ ಪ್ರಥಮ, ತಾನಿಯ ದ್ವಿತೀಯ ಪಡೆದರು. ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಡೆದ ಕನ್ನಡ ಗೀತೆ ಸ್ಪರ್ಧೆಯಲ್ಲಿ ಸುಜ್ಯೋತಿ ಶಾಲೆಯ ಮೋಕ್ಷ ಹೆಚ್. ಸಿ. ಪ್ರಥಮ, ಪೂವಮ್ಮ ದ್ವಿತೀಯ ಪಡೆದರು.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಡೆದ ಕನ್ನಡ ಗೀತೆ ಸ್ಪರ್ಧೆಯಲ್ಲಿ ಸುಜ್ಯೋತಿ ಶಾಲೆಯ

ಪೊನ್ನಣ್ಣ ಪ್ರಥಮ ಸ್ಥಾನ, ಸ. ಹಿ. ಪ್ರಾಥಮಿಕ ಶಾಲೆ ಬಿರುನಾಣಿಯ ತನುಜಾ ದ್ವಿತೀಯ ಸ್ಥಾನ ಪಡೆದರು.

ಸಮೂಹ ರೈತ ಗೀತಾ ಸ್ಪರ್ಧೆಯಲ್ಲಿ ಸುಜ್ಯೋತಿ ಶಾಲೆಯ ವಿದ್ಯಾರ್ಥಿಗಳಾದ ರಿಜಮ್ ಮೇದಪ್ಪ, ಪ್ರಚಿತ್, ಧನಿಕ್ ಪೊನ್ನಣ್ಣ ಪ್ರಥಮ ಸ್ಥಾನ ಪಡೆದರೆ

ಸ. ಹಿ. ಪ್ರಾಥಮಿಕ ಶಾಲೆ ಬಿರುನಾಣಿ ಶಾಲೆಯ ವಿದ್ಯಾರ್ಥಿಗಳಾದ ತನುಜಾ, ಸೌಮ್ಯ, ಜ್ಯೋತಿ , ದಿವ್ಯ ದ್ವಿತೀಯ ಸ್ಥಾನ ಪಡೆದರು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಾಲೂಕು ಕಸಾಪ ನಿರ್ದೇಶಕರಾದ ಬುಟ್ಟಿಯಂಡ ಸುನಿತ ಗಣಪತಿ, ಹುದಿಕೇರಿ ಹೋಬಳಿ ಕಸಾಪ

ಗೌರವ ಕೋಶಾಧಿಕಾರಿ ಅಣ್ಣಳಮಾಡ ಭವ್ಯ, ಸಂಘಟನಾ ಕಾರ್ಯದರ್ಶಿ ಕರ್ತಮಾಡ ಪಾರ್ವತಿ ವಿಜಯ, ಸದಸ್ಯರಾದ ಬುಟ್ಟಿಯಂಡ ರೋಹಿಣಿ, ಧರಣಿ, ಸಬಿತಾ, ಸದಕುಮಾರ್, ಅರುವತ್ತೊಕ್ಲುವಿನ ಕೆ.ಪಿ ಅಶ್ರಫ್, ಶಾಲಾ ಶಿಕ್ಷಕರು, ಸಾರ್ವಜನಿಕರು ಉಪಸ್ಥಿತರಿದ್ದರು.

ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಕುಪ್ಪಣಮಾಡ ನಂಜಮ್ಮ ದೇವಯ್ಯ ಸ್ವಾಗತಿಸಿದರು. ಅದ್ಯಾಪಕಿ ಚೇನಂಡ ಅಮಿತ್ ನಿರೂಪಿಸಿ ವಂದಿಸಿದರು.