ದಾಬಸ್‍ಪೇಟೆ: ಯಾವುದೇ ಹಿನ್ನೆಲೆಯಿದ್ದರೂ ಕಷ್ಟಪಟ್ಟು ಶಿಕ್ಷಣ ಪಡೆದರೆ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ಡಾ. ವಿಜಯಲಕ್ಷ್ಮಿ ದೇಶಮಾನೆ ಹೇಳಿದರು

ದಾಬಸ್‍ಪೇಟೆ: ಯಾವುದೇ ಹಿನ್ನೆಲೆಯಿದ್ದರೂ ಕಷ್ಟಪಟ್ಟು ಶಿಕ್ಷಣ ಪಡೆದರೆ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ಡಾ. ವಿಜಯಲಕ್ಷ್ಮಿ ದೇಶಮಾನೆ ಹೇಳಿದರು.

ನೆಲಮಂಗಲ ಪಟ್ಟಣದ ಹರ್ಷ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಲೆಗಸಿ ಆಫ್ ಲೈಟ್ ಹಾಗೂ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಬಾಲ್ಯದಲ್ಲಿ ತಾಯಿಯೊಂದಿಗೆ ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿದ್ದೆ. ಅಂದು ಕಷ್ಟಪಟ್ಟು ಶಿಕ್ಷಣ ಪಡೆದಿದ್ದರಿಂದಲೇ ಈ ಮಟ್ಟದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಮ್ಮ ಬಾಲ್ಯದ ಬಡತನದ ದಿನಗಳನ್ನು ಭಾವುಕರಾಗಿ ನೆನೆದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಶಿವಕುಮಾರ್ ಮಾತನಾಡಿ, ಕೇವಲ ಪಠ್ಯದ ಶಿಕ್ಷಣ ಅಷ್ಟೇ ಸಾಲದು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಆರೋಗ್ಯ ಕುರಿತು ಜಾಗೃತಿ ಮೂಡಿಸುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯ. ಡಾ. ವಿಜಯಲಕ್ಷ್ಮಿ ದೇಶಮಾನೆ ಅವರ ಸಾಧನೆ ಮತ್ತು ಸರಳತೆ ನಮ್ಮ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಉಪಾಧ್ಯಕ್ಷೆ ಗಿರಿಜಾ ಶಿವಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಹೆಣ್ಣುಮಕ್ಕಳು ತಮ್ಮ ಆರೋಗ್ಯ ಸಮಸ್ಯೆಗಳನ್ನು ಹೊರಗೆ ಹೇಳಿಕೊಳ್ಳಲು ಮುಜುಗರಪಡುತ್ತಾರೆ. ಆರಂಭಿಕ ಹಂತದಲ್ಲೇ ಸ್ತನ ಕ್ಯಾನ್ಸರ್‌ನಂತಹ ಕಾಯಿಲೆಗಳು ಪತ್ತೆ ಹಚ್ಚಿದರೆ ಗುಣಪಡಿಸಬಹುದು ಎಂಬ ಅರಿವು ಮೂಡಿಸಲು ಈ ವಿಶೇಷ ಜಾಗೃತಿ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಐಸಿಎಂಆರ್ ಮುಖ್ಯಸ್ಥ ಡಾ. ವೀರೇಂದ್ರಪ್ರಕಾಶ್ ಸಿಂಗ್, ಸ್ವಾತಿ ಗ್ರೂಪ್ ಆಫ್ ಹೋಟೆಲ್ಸ್ ಮುಖ್ಯಸ್ಥ ಜಿ.ಕೆ.ಶೆಟ್ಟಿ, ವಿದ್ಯಾಸಂಸ್ಥೆ ಕಾರ್ಯದರ್ಶಿ ಹರ್ಷ ಶಿವಕುಮಾರ್, ಸಹಕಾರ್ಯದರ್ಶಿ ಯಶಸ್ ಶಿವಕುಮಾರ್, ಪ್ರಾಂಶುಪಾಲರಾದ ಪ್ರೀತಿ, ಪೂರ್ಣಿಮಾ ಶೇಖರ್ ಉಪಸ್ಥಿತರಿದ್ದರು.

ಪೋಟೋ 1 :

ನೆಲಮಂಗಲದ ಹರ್ಷ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಲೆಗಸಿ ಆಫ್ ಲೈಟ್ ಹಾಗೂ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರದಲ್ಲಿ ಪದ್ಮಶ್ರೀ ಪುರಸ್ಕೃತೆ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರನ್ನು ಸಂಸ್ಥೆಯಲ್ಲಿ ಸನ್ಮಾನಿಸಲಾಯಿತು.