ಹಾವೇರಿ: ಮಹಿಳೆಯರು ಇಂದು ಉತ್ತಮ ಶಿಕ್ಷಣ ಪಡೆದುಕೊಂಡು ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಹುಕ್ಕೇರಿಮಠದ ಡಾ. ಸದಾಶಿವ ಮಹಾಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠ ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2025-26ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಯುಥ್ ರೆಡ್‌ಕ್ರಾಸ್ ಹಾಗೂ ಎನ್.ಎಸ್.ಎಸ್. ಚಟುವಟಿಕೆ ಸಮಾರೋಪ ಸಮಾರಂಭ ಮತ್ತು ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮಹಿಳೆ ಅಡುಗೆ ಮನೆಗೆ ಸೀಮಿತ ಎನ್ನುವ ಮಾತು ಇತ್ತು. ಆದರೆ ಈಗ ಆ ಮಾತು ಬಹಳಷ್ಟು ಬದಲಾವಣೆಯಾಗಿದೆ. ಜಗತ್ತಿನ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ತಮ್ಮದೆ ಆದ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಹೀಗೆ ಎಲ್ಲ ವಲಯಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಇದಕ್ಕೆಲ್ಲ ಕಾರಣ ಶಿಕ್ಷಣ. ಆದ್ದರಿಂದ ಮಹಿಳೆಯರು ಉತ್ತಮವಾದ ಶಿಕ್ಷಣ ಕಲಿತು, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರೇವತಿ ಹೊಸಮಠ ಮಾತನಾಡಿ, ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದೊಂದಿಗೆ ವೃತ್ತಿಗನುಸಾರ ಕೌಶಲ್ಯ ಪಡೆಯಲು ಸಲಹೆ ನೀಡಿದರು. ಮಹಿಳೆಗೆ ಸಂಬಂಧಿಸಿದಂತೆ ತೊಟ್ಟಿಲನ್ನು ತೂಗುವ ಕೈ ಜಗತ್ತನ್ನು ಆಳಬಲ್ಲದು ಎಂಬುದರ ಹಿಂದಿನ ಮಹಿಳಾ ಶಕ್ತಿ ಬಗ್ಗೆ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಲಿಂಗೇಶ್ವರ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎಸ್.ಎಸ್. ಮುಷ್ಠಿ ಮಾತನಾಡಿ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗುವ ಮೂಲಕ ಮಹಾವಿದ್ಯಾಲಯದ ಕೀರ್ತಿಯನ್ನು ಉನ್ನತಿಸಬೇಕು ಎಂದು ಹೇಳಿದರು.
ಈ ವೇಳೆ ವಿದ್ಯಾಪೀಠದ ಆಡಳಿತ ಮಂಡಳಿಯ ಗೌರವ ಉಪಾಧ್ಯಕ್ಷ ವೀರಣ್ಣ ಅಂಗಡಿ, ವಿದ್ಯಾಪೀಠದ ಸದಸ್ಯ ಮಹೇಶ ಚಿನ್ನಿಕಟ್ಟಿ ಉಪಸ್ಥಿತರಿದ್ದರು. ಪ್ರೊ. ಬಿ.ವಿ. ಹಿರೇಮಠ ಸ್ವಾಗತಿಸಿದರು. ಪ್ರಾಚಾರ್ಯೆ ಡಾ. ಸವಿತಾ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಟಿ.ಎನ್. ಮಡಿವಾಳರ ಅತಿಥಿ ಪರಿಚಯಿಸಿದರು.
ಪ್ರೊ. ವಿ.ಕೆ. ಹಲಗಣ್ಣನವರ ನಗದು ಬಹುಮಾನ ವಿತರಣೆ ಕಾರ್ಯಕ್ರಮ, ಪ್ರೊ. ನಾಗರಾಜ ಎಂ.ಎಚ್. ಕ್ರೀಡಾ ಬಹುಮಾನ ವಿತರಣಾ ಕಾರ್ಯಕ್ರಮ ಹಾಗೂ ಪ್ರೊ. ಪಿ.ಎಂ. ಹಾವೇರಿ ಸಾಂಸ್ಕೃತಿಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರೊ. ಎಸ್.ಎ. ಸೈಯದ್ ವಾರ್ಷಿಕ ವರದಿ ವಾಚಿಸಿದರು. ಎಂ.ಎಂ. ಮಡಿವಾಳರ ಎನ್.ಎಸ್.ಎಸ್. ವರದಿ ವಾಚಿಸಿದರು. ಚಂದ್ರಕಲಾ ನಾಗನೂರ ವಂದಿಸಿದರು. ಎಸ್.ಬಿ. ಗಾಜಿಪುರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಆದರ್ಶ ವಿದ್ಯಾರ್ಥಿನಿ ಬಹುಮಾನವನ್ನು ಬಿಎ ಮತ್ತು ಬಿಕಾಂ ವಿಭಾಗದಿಂದ ಕ್ರಮವಾಗಿ ಪೂರ್ಣಿಮಾ ಕರ್ಜಗಿ ಮತ್ತು ಸುಶ್ಮಿತಾ ಕಾಯಕದ ಪಡೆದುಕೊಂಡರು. ಸಮಗ್ರ ವೀರಾಗ್ರಣಿ ಚಂದ್ರಕಲಾ ನಾಗನೂರ ಪಡೆದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.