ಸಾಧಕರ ಸಾಧನೆ ಮುಂದಿನ ಯುವ ಪೀಳಿಗೆಗೆ ಸ್ಫೂರ್ತಿ: ಚೆಪ್ಪುಡೀರ ಎಂ.ಪೂಣಚ್ಚ

| Published : Dec 23 2024, 01:01 AM IST

ಸಾಧಕರ ಸಾಧನೆ ಮುಂದಿನ ಯುವ ಪೀಳಿಗೆಗೆ ಸ್ಫೂರ್ತಿ: ಚೆಪ್ಪುಡೀರ ಎಂ.ಪೂಣಚ್ಚ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ ಸಾಧಕರ ಸಾಧನೆ ಪುಸ್ತಕ ರೂಪದಲ್ಲಿ ದಾಖಲೀಕರಣಗೊಂಡರೆ ಮುಂದಿನ ಯುವ ಪೀಳಿಗೆಗೆ ಅದು ಸ್ಪೂರ್ತಿಯಾಗಿ ಉಳಿದುಕೊಳ್ಳಲಿದೆ ಎಂದು ಚೆಪ್ಪುಡೀರ ಎಂ ಪೂಣಚ್ಚ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ ಸಾಧಕರ ಸಾಧನೆ ಪುಸ್ತಕದ ರೂಪದಲ್ಲಿ ದಾಖಲೀಕರಣಗೊಂಡರೆ ಮುಂದಿನ ಯುವ ಪೀಳಿಗೆಗೆ ಅದು ಸ್ಫೂರ್ತಿಯಾಗಿ ಉಳಿದುಕೊಳ್ಳಲಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಚೆಪ್ಪುಡೀರ ಎಂ.ಪೂಣಚ್ಚ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಕೊಡವ ಮಕ್ಕಡ ಕೂಟದ 105ನೇ ಪುಸ್ತಕ, ಹಾಕಿ ಆಟಗಾರ, ಬರಹಗಾರ ಚೆಪ್ಪುಡೀರ ಎ.ಕಾರ್ಯಪ್ಪ ಅವರು ರಚಿಸಿರುವ ‘ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ’ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಿಕೆಗಳಲ್ಲಿ ಸಾಧಕರ ಸಾಧನೆ ಪ್ರಕಟಗೊಂಡರೆ ಇಂದು ಓದಿ ನಾಳೆ ಮರೆಯುತ್ತೇವೆ. ಆದರೆ ಪುಸ್ತಕದ ರೂಪದಲ್ಲಿ ಹೊರ ಬಂದರೆ ದಾಖಲೆಯ ರೂಪದಲ್ಲಿ ಸಾಧಕರ ನೆನಪು ಸದಾ ಇರುವುದಲ್ಲದೆ ಯುವ ಸಮೂಹದಲ್ಲಿ ಹೊಸ ಸ್ಫೂರ್ತಿಯನ್ನು ತುಂಬುತ್ತದೆ. ಕ್ರೀಡಾ ಜಿಲ್ಲೆ ಕೊಡಗು ಈಗ ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗಿಲ್ಲ, ಎಲ್ಲಾ ಕ್ಷೇತ್ರಗಳಲ್ಲು ಕೊಡಗಿನ ಸಾಧಕರು ಗುರುತಿಸಿಕೊಳ್ಳುತ್ತಿದ್ದಾರೆ. ಶಿಸ್ತಿಗೆ ಹೆಸರಾದ ಕೊಡಗಿನಿಂದ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇದಕ್ಕೆ ಸತತ ಪರಿಶ್ರಮವೇ ಕಾರಣವಾಗಿದ್ದು, ‘ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ’ ಪುಸ್ತಕ ರಚನೆಗೂ ಚೆಪ್ಪುಡೀರ ಕಾರ್ಯಪ್ಪ ಅವರು ಶ್ರಮ ವಹಿಸಿದ್ದಾರೆ ಎಂದು ಶ್ಲಾಘಿಸಿದರು.

‘ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಚಿವ ಎಂ.ಸಿ.ನಾಣಯ್ಯ ಹಾಕಿ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಉತ್ತರ ಭಾರತದವರಿಗೆ ಮಾತ್ರ ಅವಕಾಶ ದೊರೆಯುತ್ತಿದ್ದ ಕಾಲದಲ್ಲೇ ಅದನ್ನು ಮೆಟ್ಟಿನಿಂತು ರಾಷ್ಟ್ರೀಯ ತಂಡದಲ್ಲಿ ಕೊಡಗಿನವರು ಅವಕಾಶ ಪಡೆದುಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಕೊಡಗಿನಲ್ಲಿರುವ ಎಲ್ಲರೂ ಒಗ್ಗಟ್ಟಾಗಿ ಹಾಕಿ ಕ್ರೀಡಾಕೂಟವನ್ನು ನಿರಂತರವಾಗಿ ನಡೆಸಿಕೊಂಡು ಹೋಗುವ ಮೂಲಕ ಉತ್ತಮ ಕ್ರೀಡಾಪಟುಗಳ ಆಯ್ಕೆಗೆ ಕಾರಣವಾಗಬೇಕು. ಕೊಡವ ಕೌಟುಂಬಿಕ ಹಾಕಿ ಹಬ್ಬ ಲಿಮ್ಕಾ ಮತ್ತು ಗಿನ್ನಿಸ್ ದಾಖಲೆಯ ಅರ್ಹತೆಯನ್ನು ಪಡೆದುಕೊಂಡಿದೆ. ದೊಡ್ಡ ಮಟ್ಟದ ಈ ಹಾಕಿ ಹಬ್ಬ ಪ್ರತಿವರ್ಷ ಒಂದೇ ಸ್ಥಳದಲ್ಲಿ ನಡೆಯುವಂತಾಗಬೇಕು, ಇದಕ್ಕಾಗಿ ಶಾಶ್ವತ ಮೈದಾನದ ವ್ಯವಸ್ಥೆಯಾಗಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅನೇಕ ಸಂಶೋಧಕರು ಗ್ರಂಥಗಳನ್ನು ಉಲ್ಲೇಖ ಮಾಡಿಯೇ ಸಂಶೋಧನೆಗಳನ್ನು ಮಾಡಿದ್ದಾರೆ. ದಾಖಲೀಕರಣದಿಂದ ಮಾತ್ರ ಸಾಧಕರ ಸಾಧನೆ ನೆನಪಿನಲ್ಲಿ ಉಳಿಯಲು ಸಾಧ್ಯವೆಂದರು.

ಮತ್ತೊಬ್ಬ ಅತಿಥಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಮಾತನಾಡಿ, ಕೊಡಗಿನಲ್ಲಿ ಹಾಕಿ ಕ್ರೀಡೆಯನ್ನು ಮತ್ತಷ್ಟು ಬೆಳೆಸಬೇಕು. ‘ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ’ ಪುಸ್ತಕ ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಕೊಡಗು ಸಣ್ಣ ಜಿಲ್ಲೆಯಾದರೂ ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಮತ್ತಷ್ಟು ಸಾಧಕರು ಬರಬೇಕಾಗಿದೆ, ಯುವ ಸಮೂಹ ಹಾದಿ ತಪ್ಪಬಾರದು. ಹಿಂದೆ ಅವಕಾಶದ ಕೊರತೆ ಇತ್ತು, ಆದರೆ ಇಂದು ಎಲ್ಲ ಅವಕಾಶಗಳೊಂದಿಗೆ ಪೋಷಕರ ಪ್ರೋತ್ಸಾಹವೂ ಸಿಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಕ್ರೀಡಾಪಟು ಬಾಳೆಯಡ ಕಾಳಪ್ಪ ಹಾಗೂ ಲೆ.ಕ.ಬಾಳೆಯಡ ಸುಬ್ರಮಣಿ ಮಾತನಾಡಿದರು.

ವಿವಿಧ ಶಾಲೆಗಳಿಗೆ ವಿತರಣೆ ಮಾಡಲು ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಗುರುರಾಜ್ ಕೆ.ಪಿ ಹಾಗೂ ಮದೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಅವರಿಗೆ ಇದೇ ಸಂದರ್ಭ ಪುಸ್ತಕಗಳನ್ನು ವಿತರಿಸಲಾಯಿತು.

1975 ವಿಶ್ವಕಪ್ ಹಾಕಿ ಪಂದ್ಯಾವಳಿಯ ವಿಜೇತ, ಹಿರಿಯ ಕ್ರೀಡಾಪಟು ಪೈಕೇರ ಇ.ಕಾಳಯ್ಯ ಉಪಸ್ಥಿತರಿದ್ದರು. ಚೀಯಕ್ ಪೂವಂಡ ಶ್ವೇತನ್ ಚಂಗಪ್ಪ ಅವರು ಬರಹಗಾರ ಚೆಪ್ಪುಡೀರ ಎ.ಕಾರ್ಯಪ್ಪ ಅವರ ಪರಿಚಯ ಮಾಡಿದರು. ಚೋಕಿರ ಅನಿತಾ ನಿರೂಪಿಸಿದರು. ತೆನ್ನೀರ ಟೀನಾ ಚಂಗಪ್ಪ ಪ್ರಾರ್ಥಿಸಿದರು. ಐಚಂಡ ರಶ್ಮಿ ಮೇದಪ್ಪ ಸ್ವಾಗತಿಸಿದರು. ಪೇರಿಯಂಡ ಯಶೋಧ ವಂದಿಸಿದರು.