ಭಾರತೀಯ ವಿಜ್ಞಾನಿಗಳ ಸಾಧನೆ ಜಗತ್ತಿಗೆ ಪ್ರೇರಣೆ: ಇಸ್ರೋ ವಿಜ್ಞಾನಿ ಡಾ.ದಾರುಕೇಶ

| Published : Dec 16 2023, 02:00 AM IST / Updated: Dec 16 2023, 02:01 AM IST

ಭಾರತೀಯ ವಿಜ್ಞಾನಿಗಳ ಸಾಧನೆ ಜಗತ್ತಿಗೆ ಪ್ರೇರಣೆ: ಇಸ್ರೋ ವಿಜ್ಞಾನಿ ಡಾ.ದಾರುಕೇಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರಿನ ಜಿಪಂ ಸಭಾಂಗಣದಲ್ಲಿ ವಿಜ್ಞಾನಿ- ವಿದ್ಯಾರ್ಥಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಸ್ರೊ ವಿಜ್ಞಾನಿ ಡಾ. ಬಿ.ಎಚ್‌ಎಂ ದಾರುಕೇಶ ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಭಾರತೀಯ ವಿಜ್ಞಾನಿಗಳು ತೋರುತ್ತಿರುವ ಸಾಧನೆಗಳು ಇಡೀ ಜಗತ್ತಿಗೆ ಪ್ರೇರಣೆಯಾಗಿವೆ. ಅದಕ್ಕಾಗಿಯೇ ಪ್ರಪಂಚ ಭಾರತೀಯ ವಿಜ್ಞಾನಿಗಳತ್ತ ಮುಖ ಮಾಡಿದೆ ಎಂದು ಇಸ್ರೊ ವಿಜ್ಞಾನಿ ಡಾ.ಬಿ.ಎಚ್‌.ಎಂ ದಾರುಕೇಶ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ, ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಜ್ಞಾನಿ-ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವ ಎದುರಿಸುತ್ತಿರುವ ಸವಾಲುಗಳನ್ನು ಕಡಿಮೆ ಖರ್ಚಿನ ಜೊತೆಗೆ ಸರಳ ರೀತಿಯ ಪರಿಹಾರ ಕಂಡುಕೊಳ್ಳುವ ಅಪಾರ ಪ್ರಮಾಣದ ಶಕ್ತಿ ಭಾರತೀಯ ವಿಜ್ಞಾನಿಗಳಲ್ಲಿ ಅಡಗಿದೆ. ಅವರು ತೋರುತ್ತಿರುವ ಸಾಧನೆಗಳಿಗೆ ಇಡೀ ಜಗತ್ತೆ ದೇಶದತ್ತ ತಿರುಗಿ ನೋಡುವಂತೆ ಮಾಡಿದೆ. ದೇಶದ ವಿವಿಧ ಕ್ಷೇತ್ರಗಳಲ್ಲಿ ವಿಜ್ಞಾನಿಗಳ ಅಗತ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದವರು ಕಷ್ಟಪಟ್ಟು ವಿಜ್ಞಾನಿಗಳಾಗಬಹುದು ಎಂದರು.

ಸಾಮಾನ್ಯ ನಾಗರಿಕರೆ ಅಸಾಧ್ಯವಾದದ್ದನ್ನು ಸಾಧನೆ ಮಾಡಿದ್ದಾರೆ. ನಾನು ಕೂಡ ಸರ್ಕಾರಿ ಶಾಲೆಯಲ್ಲಿಯೇ ಓದಿದ್ದೇನೆ. ಹೀಗಾಗಿ ಕಷ್ಟಪಟ್ಟರೆ ಮುಂದೆ ನೀವು ಕೂಡ ಇಸ್ರೊದಂತ ಸಂಸ್ಥೆಗಳಲ್ಲಿ ವಿಜ್ಞಾನಿಯಾಗಬಹುದು. ಪಠ್ಯದ ಜತೆಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾವುದನ್ನು ಕಲಿಯಬೇಕು. ಅವಕಾಶಗಳನ್ನು ಕೈಚಾಚಿ ಬಾಚಿಕೊಳ್ಳಬೇಕು. ದೇಶದಲ್ಲಿ 60ಕ್ಕು ಹೆಚ್ಚು ಸಂಶೋಧನಾ ಸಂಸ್ಥೆಗಳಿವೆ. ಸುಮಾರು 300 ಕ್ಕೂ ಹೆಚ್ಚು ವಿಜ್ಞಾನ ಸಂಬಂಧಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ನಿಮಿಗಿದೆ ಎಂದು ವಿವರಿಸಿದರು.

ವಿಜ್ಞಾನ ಎನ್ನುವುದು ನಮ್ಮ ಜೀವನ ವಿಧಾನ. ಸುಂದರವಾದ ಜಗತ್ತನ್ನು ಇನ್ನಷ್ಟು ಸುಂದರವಾಗಿಸುವ ಕೆಲಸ ವಿಜ್ಞಾನ ಮಾಡುತ್ತದೆ.ನಮ್ಮ ಸುತ್ತ-ಮುತ್ತಲಿನ ವಿಶ್ವವನ್ನು ಅರಿಯುವುದೇ ವಿಜ್ಞಾನ, ಜಗತ್ತು ನಡೆಯುತ್ತಿರುವ ಅಂಶಗಳನ್ನು ತಿಳಿಯುವುದೇ ವಿಜ್ಞಾನವಾಗಿದೆ, ನಿಮ್ಮಂತ ವಿದ್ಯಾರ್ಥಿಗಳೇ ಮುಂದೆ ವಿಜ್ಞಾನಿಗಳಾಗಿ ಚಂದ್ರಯಾನ ಸೇರಿದಂತೆ ಹಲವಾರು ವಿಸ್ಮಯದ ಸಂಗತಿಗಳನ್ನು ಬೆಳಕಿಗೆ ತರಬೇಕು ಎಂದು ಹೇಳಿದರು.

ಸಂವಾದ ಕಾರ್ಯಕ್ರಮವನ್ನು ಜಿಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆಯವರು ಉದ್ಘಾಟಿಸಿ ಮಾತನಾಡಿದರು. ಸರ್ವ ಶಿಕ್ಷಣ ಅಭಿಯಾನದ ಯೋಜನೆ ಸಂಯೋಜಕಿ ಆರ್.ಇಂದಿರಾ ವಿಜ್ಞಾನಿ ದಾರುಕೇಶ ಅವರನ್ನು ಪರಿಚಯ ಮಾಡಿಕೊಟ್ಟರು. ಪ್ರಭಾರ ಬಿಇಒ ವೆಂಕೋಬ, ವಯಸ್ಕರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೆಟರ್ ಅಜಿತ್ ಕುಮಾರ್, ಶಿಕ್ಷಣಪ್ರೇಮಿ ಹಫಿಜುಲ್ಲಾ ಸೇರಿ, ವಿವಿಧ ಶಾಲೆಗಳ ಶಿಕ್ಷಕರು-ವಿದ್ಯಾರ್ಥಿಗಳು ಭಾಗವಹಿಸಿದ್ದರು.