ಮಾನವ ಜೀವನದ ಪ್ರತಿಯೊಂದು ಹಂತವೂ ಬಹುಮುಖ್ಯ. ಅದರಲ್ಲೂ ವಿದ್ಯಾರ್ಥಿ ಜೀವನ ಜೀವನದ ಅತೀ ಮುಖ್ಯ ಘಟ್ಟ. ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿ ಜೀವನವನ್ನು ಹೆಚ್ಚು ಅನುಭವಿಸಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಗುರಿ ಸಾಧಿಸಲು ಶ್ರಮಿಸಬೇಕು. ರಾತ್ರೋರಾತ್ರಿ ಶ್ರೀಮಂತರಾಗಲು ಸಾಧ್ಯವಿಲ್ಲ. ಎಲ್ಲದಕ್ಕೂ ಸಮಯ ಅಗತ್ಯ ಎಂದು ಚಿತ್ರನಟ, ನಿರ್ದೇಶಕ ಡಾಲಿ ಧನಂಜಯ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರ ಹೊರವಲಯದ ನಾಗಾರ್ಜುನ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಐಕ್ಯ - 2026 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಮಾನವ ಜೀವನದ ಪ್ರತಿಯೊಂದು ಹಂತವೂ ಬಹುಮುಖ್ಯ. ಅದರಲ್ಲೂ ವಿದ್ಯಾರ್ಥಿ ಜೀವನ ಜೀವನದ ಅತೀ ಮುಖ್ಯ ಘಟ್ಟ. ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿ ಜೀವನವನ್ನು ಹೆಚ್ಚು ಅನುಭವಿಸಬೇಕು ಎಂದು ಸಲಹೆ ನೀಡಿದರು.

ನಾವು ಅಂದುಕೊಂಡಂತೆ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ, ಎಂದಿಗೂ ಧೃತಿಗೆಡಬೇಡಿ. ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸೋಲನ್ನು ಅನುಭವಿಸಬೇಕು. ಸೋಲಿನ ಅನುಭವವಾದಾಗಲೇ ಗೆಲುವಿನ ದಾರಿ ತಿಳಿಯುತ್ತದೆ. ಆದ್ದರಿಂದ, ಸೋತು ಗೆಲ್ಲೋಣ ಎಂದು ತಮ್ಮ ಜೀವನದ ಅನುಭವವನ್ನು ಹಂಚಿಕೊಂಡರು.

ಇದೇ ವೇಳೆ ಎನ್.ಜಿ. ಐ ನಿರ್ದೇಶಕ ಡಾ.ಎಸ್.ಜಿ. ಗೋಪಾಲಕೃಷ್ಣ, ಕಾಲೇಜು ಪ್ರಾಂಶುಪಾಲ ಡಾ.ಜಿ.ತಿಪ್ಪೇಸ್ವಾಮಿ ಮಾತನಾಡಿದರು. ಗಮನ ಸೆಳೆದ ಐಪಿಎಲ್ ಆಕ್ಷನ್ ವಾರ್: ಮ್ಯಾನೇಜ್ ಮೆಂಟ್ ವಿಭಾಗ ಆಯೋಜಿಸಿದ್ದ ಐಪಿಎಲ್ ಆಕ್ಷನ್ ವಾರ್ ಹೆಚ್ಚು ಯುವಜನರ ಗಮನ ಸೆಳೆಯಿತು. ರಾಜ್ಯದ ವಿವಿಧ ಕಾಲೇಜುಗಳ 60 ತಂಡಗಳು ಭಾಗವಹಿಸಿದ್ದವು. ಈ ಪೈಕಿ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನ, ಚೆನ್ನೈ ಸೂಪರ್ ಕಿಂಗ್ಸ್ ದ್ವಿತೀಯ ಸ್ಥಾನ ಪಡೆದವು. ಇದೇ ವೇಳೆ ವಿಜೇತ ತಂಡಗಳಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಿಇಒ ಭಾನು ಚೈತನ್ಯ ವರ್ಮಾ, ಎನ್.ಸಿ.ಎಂ.ಎಸ್ ಪ್ರಾಂಶುಪಾಲೆ ಆನಂದಮ್ಮ, ಕಾಲೇಜಿನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಲತಾ, ಆಡಳಿತ ಮಂಡಳಿ ವಿಭಾಗದ ಕಿಶನ್, ಶಿಬು, ಮಂಜುನಾಥ್ ಬಚ್ಚೇಗೌಡ, ಮತ್ತಿತರರು ಇದ್ದರು.

ಸಿಕೆಬಿ-5

ನಗರ ಹೊರವಲಯದ ನಾಗಾರ್ಜುನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ಐಕ್ಯ - 2026 ಸಮಾರಂಭದಲ್ಲಿ ನಟ ಡಾಲಿ ಧನಂಜಯ್ ರನ್ನು ಸನ್ಮಾನಿಸಲಾಯಿತು