ಮೂಡುಬಿದಿರೆ: 14ರಿಂದ 20ರ ವರೆಗೆ ಸಹಕಾರಿ ಚಿಂತನಾ ಸರಣಿ

| Published : Nov 13 2023, 01:15 AM IST

ಸಾರಾಂಶ

ಮೂಡುಬಿದಿರೆಯಲ್ಲಿ ನ.೧೪ರಿಂದ ೨೦ರ ವರೆಗೆ ಸಹಕಾರ ಚಿಂತನ ಸರಣಿ

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಅಖಿಲ ಭಾರತ 70ನೇ ಸಹಕಾರ ಸಪ್ತಾಹದ ಹಿನ್ನೆಲೆಯಲ್ಲಿ ಶತಮಾನದ ಹಿನ್ನೆಲೆಯಿರುವ ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್‌ ಸೊಸೈಟಿ ಲಿ. ವತಿಯಿಂದ ಸಪ್ತ ಸಂಧ್ಯಾ ಸಹಕಾರಿ ಚಿಂತನ ಸರಣಿ, ಸಾಂಸ್ಕೃತಿಕ ವೈಭವ, ಕಲ್ಪವೃಕ್ಷ , ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನ.14ರಿಂದ 20ರ ವರೆಗೆ ಬ್ಯಾಂಕಿನ ಕಲ್ಪವೃಕ್ಷ ಸಭಾಭವನದಲ್ಲಿ ಜರುಗಲಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಸಹಕಾರಿ ರತ್ನ ಎಂ. ಬಾಹುಬಲಿ ಪ್ರಸಾದ್ ತಿಳಿಸಿದ್ದಾರೆ.

ಶಾಸಕ ಉಮಾನಾಥ ಕೋಟ್ಯಾನ್, ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆಯಲ್ಲಿ ನ.14ರ ಸಂಜೆ 5.30ಕ್ಕೆ ಸಪ್ತಸಂಧ್ಯಾ ಚಿಂತನ ಸರಣಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಶ್ರೀ ಜೈನ ಮಠದ ಭಟ್ಟಾರಕ ಶ್ರೀಗಳವರ ಆಶೀರ್ವಚನ, ಕರ್ನಾಟಕ ಬ್ಯಾಂಕಿನ ನಿವೃತ್ತ ಜಿ.ಎಂ. ಚಂದ್ರಶೇಖರ ರಾವ್ , ಚೌಟರ ಅರಮನೆಯ ಕುಲದೀಪ್ ಎಂ. ಉಪಸ್ಥಿತಿಯಲ್ಲಿ ಉದ್ಯಮಿ ಕೆ. ಶ್ರೀಪತಿ ಭಟ್ ಅವರಿಗೆ ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ.ಪ್ರಭಾತ್ ಬಲ್ನಾಡು ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಬಳಿಕ ನೃತ್ಯ ಸಂಗೀತ ಕಾರ್ಯಕ್ರಮವಿದೆ.

ನ.15ರಂದು ರೈತರ ಸಂಕಷ್ಟ ಮತ್ತು ಪರಿಹಾರ ಕುರಿತು ಎಸ್.ಕೆ.ಡಿ.ಆರ್.ಡಿ.ಪಿ.ಯ ಡಾ. ಎಲ್.ಮಂಜುನಾಥ್ ಅವರಿಂದ ದಿಕ್ಸೂಚಿ ಭಾಷಣ, ವಿಜ್ಞಾನಿ ಡಾ.ರವಿರಾಜ್ ಶೆಟ್ಟಿ ಜಿ., ಮೂಡುಬಿದಿರೆ ತಾಲೂಕು ಕ.ಸಾ.ಪ. ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದು, ರೆ. ಫಾ ವಿನ್ಸೆಂಟ್ ಡಿಸೋಜ ಮಂಗಳೂರು ಆಶೀರ್ವನ ನೀಡಲಿದ್ದಾರೆ. ಬಳಿಕ ನಾದ, ನೃತ್ಯ ವೈಭವವಿದೆ.

ನ.16ರಂದು ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಆದ್ಯಾ ಕಮ್ಯುನಿಕೇಶನ್‌ನ ಚೆಂಗಪ್ಪ ಅವರಿಂದ ಸಹಕಾರ ಸಂಸ್ಥೆಗಳಲ್ಲಿ ಆಧುನಿಕ ತಾಂತ್ರಿಕತೆ ಅಳವಡಿಕೆ ಕುರಿತ ದಿಕ್ಸೂಚಿ ಭಾಷಣವಿದೆ. ಮಹಾವೀರ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ರಮೇಶ ಭಟ್, ಆಳ್ವಾಸ್ ಪ.ಪೂ ಕಾಲೇಜಿನ ಪ್ರಾಚಾರ್ಯ ಸದಾಕತ್ ಮುಖ್ಯ ಅತಿಥಿಗಳಾಗಿದ್ದಾರೆ. ಬಳಿಕ ಸುಗಮ ಸಂಗೀತ ಕಾರ್ಯಕ್ರಮವಿದೆ.

ನ.17ರಂದು ನ್ಯಾಯವಾದಿ ಮನೋಜ್ ಶೆಣೈ ಅಧ್ಯಕ್ಷತೆಯಲ್ಲಿ ಮಂಗಳೂರಿನ ಹಿರಿಯ ನ್ಯಾಯವಾದಿ ಜಿ.ಕೆ. ಪರಮೇಶ್ವರ ಜೋಯಿಸ್ ಅವರಿಂದ ಸಹಕಾರ ಮತ್ತು ವಿವಿಧ ಕಾನೂನುಗಳು ಕುರಿತ ದಿಕ್ಸೂಚಿ ಭಾಷಣವಿದೆ. ಸಹಕಾರಿ ತರಬೇತಿ ಸಂಸ್ಥೆಯ ಪ್ರಾಚಾರ್ಯ ಡಾ.ಎಂ. ವಿಶ್ವೇಶ್ವರಯ್ಯ, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್. ರಮೇಶ್, ಸಿ.ಎ. ಚಂದ್ರಶೇಖರ್ ಮಂಗಳೂರು ಅವರು ಮುಖ್ಯ ಅತಿಥಿಗಳಾಗಿದ್ದಾರೆ. ಬಳಿಕ ಕುದ್ರೋಳಿ ಗಣೇಶ್ ಅವರ ಜಾದೂ ವಿಸ್ಮಯ ಕಾರ್ಯಕ್ರಮವಿದೆ.

ನ.18ರಂದು ಸಂಸ್ಥಾಪಕರ ದಿನಾಚರಣೆ, ಕಲ್ಪವೃಕ್ಷ ಪ್ರಶಸ್ತಿ ಪ್ರದಾನ:

ನ.18ರಂದು ಫಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಬ್ಯಾಂಕಿನ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ಧಾರೆ. ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅವರಿಗೆ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ. ಎಂ. ಮೋಹನ ಆಳ್ವ ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಮೈಸೂರು ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕ ಉಮೇಶ್ ಮುಖ್ಯ ಅತಿಥಿಗಳಾಗಿದ್ದು ಬಳಿಕ ನೃತ್ಯ ವೈಭವ ಕಾರ್ಯಕ್ರಮವಿದೆ.

ನ.19ರಂದು ಮೂಡುಬಿದಿರೆಯ ಡಾ. ಗುರುಪ್ರಸಾದ್ ಅಡಿಗ ಅಧ್ಯಕ್ಷತೆಯಲ್ಲಿ ಡಾ. ಸದಾನಂದ ನಾಯ್ಕ್ ಅವರಿಂದ ವೈದ್ಯ ರೋಗಿಗಳ ಸಂಬಂಧ ಅಂದು ಇಂದು ಕುರಿತು ಉಪನ್ಯಾಸ ನೀಡಲಿದ್ದಾರೆ. ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲೆ ಡಾ.ವನಿತಾ ಶೆಟ್ಟಿ , ಮೂಡುಬಿದಿರೆ ಶ್ರೀ ಅಯ್ಯಪ್ಪ ದೇವಸ್ಥಾನದ ಆಡಳಿತ ಮೊಕ್ತೇಸರ ಸುದರ್ಶನ್ ಎಂ. ಅವರು ಮುಖ್ಯ ಅತಿಥಿಗಳಾಗಿದ್ದಾರೆ. ಬಳಿಕ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವಿದೆ.

ನ.20ರಂದು ಜಯಶ್ರೀ ಅಮರನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಉಪನ್ಯಾಸಕಿ ಚೇತನಾ ರಾಜೇಂದ್ರ ಹೆಗ್ಡೆ ಅವರಿಂದ ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಸಹಕಾರ ಕುರಿತು ಉಪನ್ಯಾಸ ನೀಡಲಿದ್ದಾರೆ. ಮೂಡುಬಿದಿರೆ ತಾಲೂಕು ಶಿಕ್ಷಣ ಇಲಾಖೆಯ ಡಾ. ರಾಜಶ್ರೀ, ಸಹಕಾರಿ ತರಬೇತಿ ಸಂಸ್ಥೆಯ ಉಪನ್ಯಾಸಕಿ ಬಿಂದು ನಾಯರ್, ಬ್ಯಾಂಕಿನ ಉಪಾಧ್ಯಕ್ಷೆ ಪ್ರೇಮಾ ಎಸ್. ಸಾಲ್ಯಾನ್ ಅವರು ಮುಖ್ಯ ಅತಿಥಿಗಳಾಗಿದ್ದಾರೆ. ಬಳಿಕ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವಿದೆ.

ಏಳು ದಿನಗಳ ಈ ಚಿಂತನ ಸರಣಿ, ಸಪ್ತ ಸಂಧ್ಯಾ ಕಾರ್ಯಕ್ರಮದಲ್ಲಿ ಉದ್ಯಮ, ಸಾಹಿತ್ಯ, ಸೇವೆ, ಕೃಷಿ, ಹೈನುಗಾರಿಕೆ, ಕಲೆ, ಧಾರ್ಮಿಕ ರಂಗಗಳಲ್ಲಿನ ಒಟ್ಟು 29 ಸಾಧಕರಿಗೆ 8 ಸಂಘ ಸಂಸ್ಥೆಗಳಿಗೆ ಅಭಿನಂದನಾ ಕಾರ್ಯಕ್ರಮವಿದೆ ಎಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಧರಣೇಂದ್ರ ಜೈನ್ ತಿಳಿಸಿದರು. ಆಡಳಿತ ಮಂಡಳಿಯ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು.