ಸಾರಾಂಶ
ಹುಬ್ಬಳ್ಳಿ:
ವಿದ್ಯಾರ್ಥಿಗಳು ಓದಿನಲ್ಲಿ ಜಾಣನಿದ್ದರಷ್ಟೇ ಸಾಲದು, ವೃತ್ತಿ ಕೌಶಲ್ಯ ಏನೇನಿದೆ ಎನ್ನುವುದನ್ನು ಅರಿತುಕೊಳ್ಳಬೇಕು. ಕೌಶಲ ಹಾಗೂ ಕಲಿಕೆಯ ಅನುಭವವೇ ವೃತ್ತಿ ಬದುಕನ್ನು ಕೈಹಿಡಿದು, ಭವಿಷ್ಯ ರೂಪಿಸುವುದು. ಅನುಭವಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ ಹೇಳಿದರು.ನಗರದ ಗೋಕುಲ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ದೇಶಪಾಂಡೆ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಸ್ಕಿಲ್‌ಫ್ಲಸ್ ಕಾನ್‌ಕ್ಲೇವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಉದ್ಯೋಗಾವಕಾಶಗಳು ಎಲ್ಲೆಡೆ ವಿಫುಲವಾಗಿವೆ. ಅದು ಸ್ಥಳದಿಂದ ಸ್ಥಳಕ್ಕೆ ಹೆಚ್ಚು ಕಡಿಮೆಯಾಗಿರುತ್ತವೆ. ಉದ್ಯೋಗಾಕಾಂಕ್ಷಿಗಳು ಎಲ್ಲಿಯೇ ಆದರೂ ಕೆಲಸ ಮಾಡುತ್ತೇನೆ ಎನ್ನುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ವಯಸ್ಸಾದಂತೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆ. ಕಲಿಕೆ ಹೆಚ್ಚಾದಂತೆ ಅವಕಾಶಗಳು ಹೆಚ್ಚುತ್ತ ಹೋಗುತ್ತವೆ. ಪ್ರತಿದಿನವೂ ಹೊಸ ಅನುಭವ, ಹೊಸ ಅವಕಾಶ ಎನ್ನುತ್ತ ಹೊಸತನಕ್ಕೆ ತೆರೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಕ್ವೈಂಟಂಟ್ ಸರ್ವಿಸ್ ಸಂಸ್ಥಾಪಕ ಎನ್.ಸಿ. ಮೂರ್ತಿ, ಇಂದು ಹೊಸ ತಂತ್ರಜ್ಞಾನದೊಂದಿಗೆ ಕೈಗಾರಿಕೆಗಳು ತಲೆ ಎತ್ತುತ್ತಿದ್ದು, ಉದ್ಯೋಗ ಬಯಸುವವರು ಸಹ ಹೊಸ ಆವಿಷ್ಕಾರದ ಮನಸ್ಥಿತಿಗೆ ಸಿದ್ಧವಾಗಿರಬೇಕು. ವೃತ್ತಿ ಬದುಕಿಗೆ ಶಿಕ್ಷಣ ಒಂದು ಭಾಗವಾದರೆ, ನಾಯಕತ್ವ, ಆತ್ಮವಿಶ್ವಾಸ, ವ್ಯಕ್ತಿತ್ವ, ಮಾತುಗಾರಿಕೆ, ಭಾಷಾಜ್ಞಾನ, ವರ್ತನೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂಥ ಚಾಕಚಕ್ಯತೆಯ ಕೌಶಲಗಳು ಮತ್ತೊಂದು ಭಾಗವಾಗಿದೆ. ಇಂದಿನ ಎಐ(ಕೃತಕ ಬುದ್ಧಿಮತ್ತೆ) ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕೌಶಲಜ್ಞಾನ ಅನಿವಾರ್ಯವಾಗಿದ್ದು, ವೃತ್ತಪರತೆ, ಬದ್ಧತೆ ಮೈಗೂಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದರು.
ದೇಶಪಾಂಡೆ ಫೌಂಡೇಶನ್ ಸಹ ಸಂಸ್ಥಾಪಕಿ ಜಯಶ್ರೀ ದೇಶಪಾಂಡೆ ಮಾತನಾಡಿ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಮಾಡಿದ ಸಣ್ಣ-ಪುಟ್ಟ ತಪ್ಪುಗಳನ್ನು ತಿದ್ದುಕೊಂಡು ವೃತ್ತಿ ಬದುಕನ್ನು ಉತ್ತಮಪಡಿಸಿಕೊಳ್ಳಬೇಕು. ಆದರೆ, ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡಬಾರದು. ತಪ್ಪಿನಿಂದ ಪಾಠ ಕಲಿತಾಗಲೇ ಹೊಸತು ಸೃಷ್ಟಿಯಾಗುತ್ತದೆ ಎಂದು ಹೇಳಿದರು.ಬೆಳಗಾವಿ ರಾಣಿಚನ್ನಮ್ಮ ವಿವಿ ಕುಲಪತಿ ಸಿ.ಎಂ. ತ್ಯಾಗರಾಜ, ಧಾರವಾಡ ವಿವಿ ಕುಲಪತಿ ಜಯಶ್ರೀ ಎಸ್, ಹಾವೇರಿ ವಿವಿ ಕುಲಪತಿ ಸುರೇಶ ಜಂಗಮಶೆಟ್ಟಿ ಮತ್ತು ಐಐಎಂ ನಿವೃತ್ತ ನಿರ್ದೇಶಕ ಪ್ರೊ. ಸುಶೀಲ್ ವಚಾನಿ ಮಾತನಾಡಿದರು. ನಂತರ ಫೌಂಡೇಶನ್‌ನಲ್ಲಿ ಕೌಶಲಾಭಿವೃದ್ಧಿ ಕೋರ್ಸ್ ಮುಗಿಸಿ ಉದ್ಯೋಗ ಪಡೆದ ಸ್ವಾತಿ ನರಗುಂದ ಮತ್ತು ಅರ್ಪಿತಾ ಪಲ್ಲೇದ ತಮ್ಮ ಅನುಭವ ಹಂಚಿಕೊಂಡರು. ಫೌಂಡೇಶನ್ ಸಿಇಒ ಪಿ.ಎನ್. ನಾಯಕ ಸೇರಿದಂತೆ ಹಲವರಿದ್ದರು.