ಕುಕನೂರು ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಶ್ರೀಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಜಗದ್ಗುರು ಅನ್ನದಾನೀಶ್ವರ ಸೇವಾ ಟ್ರಸ್ಟ್ ವತಿಯಿಂದ 21 ದಿನಗಳ ಕಾಲ ಹಮ್ಮಿಕೊಂಡಿರುವ ಕಲಬುರಗಿ ಶ್ರೀ ಶರಣಬಸವೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಶ್ರೀ ಮಹಾದೇವ ಸ್ವಾಮೀಜಿ ಚಾಲನೆ ನೀಡಿದರು.

ಕುಕನೂರು: ಪುರಾಣದಲ್ಲಿ ಅಡಕವಾಗಿರುವ ಮಾನವೀಯ ಮೌಲ್ಯ ಸಮಾಜಕ್ಕೆ ದಾರಿದೀಪ ಎಂದು ಕುಕನೂರು, ತಳಕಲ್ಲಿನ ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ಸ್ವಾಮೀಜಿ ಹೇಳಿದರು.

ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಶ್ರೀಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಜಗದ್ಗುರು ಅನ್ನದಾನೀಶ್ವರ ಸೇವಾ ಟ್ರಸ್ಟ್ ವತಿಯಿಂದ 21 ದಿನಗಳ ಕಾಲ ಹಮ್ಮಿಕೊಂಡಿರುವ ಕಲಬುರಗಿ ಶ್ರೀ ಶರಣಬಸವೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪುರಾಣ ಪ್ರವಚನ ಉದ್ದೇಶ ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಜತೆಗೆ ಯುವ ಪೀಳಿಗೆಗೆ ಶರಣರ ಆದರ್ಶಗಳನ್ನು ಪರಿಚಯಿಸುವುದಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶರಣರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಧರ್ಮ ಮತ್ತು ಸಂಸ್ಕೃತಿಯ ಉಳಿವು ಕೇವಲ ಆಚರಣೆಗಳಿಂದ ಸಾಧ್ಯವಿಲ್ಲ. ಅವುಗಳ ಹಿಂದಿರುವ ಮಾನವೀಯ ಸಂದೇಶಗಳನ್ನು ಜೀವನದಲ್ಲಿ ಪಾಲಿಸಿದಾಗ ಮಾತ್ರ ಸಾರ್ಥಕತೆ ದೊರೆಯುತ್ತದೆ. ಮಠಗಳು ಕೇವಲ ಪೂಜೆ, ಪುನಸ್ಕಾರಗಳಿಗೆ ಸೀಮಿತವಾದ ಸ್ಥಳವಲ್ಲ. ಅದು ಸಮಾಜವನ್ನು ಜೋಡಿಸುವ, ಸಂಸ್ಕಾರ ನೀಡುವ, ಧಾರ್ಮಿಕ ಪ್ರಜ್ಞೆ ಬೆಳೆಸುವ ಹಾಗೂ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಕೇಂದ್ರಗಳಾಗಿವೆ ಎಂದರು.

ಕುಕನೂರಿನ ದಳಪತಿ ವೀರಯ್ಯ ತೋಂಟದಾರ್ಯಮಠ ಮಾತನಾಡಿ, ಡಾ. ಮಹಾದೇವ ಸ್ವಾಮೀಜಿ ಅವರು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿದ್ದಾರೆ ಎಂದರು.

ಮುಖಂಡ ಮಲ್ಲೇಶಪ್ಪ ಸಿಂಗಾಪುರ, ಶರಣಬಸವೇಶ್ವರ ಅವರಂತಹ ಮಹಾನ್ ಶರಣರ ಪುರಾಣ ಪ್ರವಚನಗಳನ್ನು ಆಯೋಜಿಸುವುದರಿಂದ ಭಕ್ತರಲ್ಲಿ ಆಧ್ಯಾತ್ಮಿಕ ಆಸಕ್ತಿ ಹೆಚ್ಚಿಸುವ ಜತೆಗೆ ಶರಣ ಸಂಸ್ಕೃತಿಯ ಪರಂಪರೆ ಮುಂದಿನ ಪೀಳಿಗೆಗೂ ತಲುಪುತ್ತದೆ ಎಂದರು.

ಕಂಪ್ಲಿಯ ಶ್ರೀ ಪ್ರಭು ಸ್ವಾಮೀಜಿ, ಹಿರಿಯರಾದ ಮಹಾದೇವಪ್ಪ ಮೂಲಿಮನಿ, ನಾಗರಾಜ ಚರಂತಿಮಠ, ಮುದಿಯಪ್ಪ ಯೋಗೆಮ್ಮನವರ, ಖಾಜಾಸಾಬ್ ಹೊರಪೇಟೆ, ರಂಗಪ್ಪ ಅಳವಂಡಿ, ಉಡುಜಪ್ಪ ವಾಲ್ಮೀಕಿ, ಶೀನಪ್ಪ ತಂಗೋಡಿ, ಭೀಮಣ್ಣ ಹೆಳವಾರ, ಸೋಮಪ್ಪ ಖರ್ಜಗಿ, ಶರಣಪ್ಪ ಬಂಗಾರಿ, ರಾಮಣ್ಣ ನಿಟ್ಟಾಲಿ, ಪಕ್ಕಪ್ಪ ಮುರಿಗಿ, ಬಸವರಾಜ ಬ್ಯಾಳಿ, ಅಬ್ಬಸಾಲಿ ಮುಂಡರಗಿ, ರುದ್ರಪ್ಪ ಚಿಲವಾಡಿಗಿ, ಪುರಾಣ ಪ್ರವಚನಕಾರರಾದ ಅನ್ನಪೂರ್ಣಮ್ಮ ತಾಯಿ, ಸಂಗೀತಗಾರ ರಮೇಶ ಹಟ್ಟಿ, ಬಸವರಾಜ ಹಳ್ಳಿಗುಡಿ, ಬಸವರಾಜ ಹುಯಿಳಗೋಳ ಇತರರಿದ್ದರು. ದಾಸೋಹ ಸೇವೆಯನ್ನು ಗ್ರಾಮದ ಭೀಮಣ್ಣ ಹೆಳವಾರ ನಡೆಸಿದರು.