ರಾಜ್ಯ ಸರ್ಕಾರಿ ನೌಕರರು ಸರ್ಕಾರದ ನಾಡಿ ಮಿಡಿತವಾಗಿದ್ದು, ಟೀಂ ಕರ್ನಾಟಕವಾಗಿ ನೀವೆಲ್ಲರೂ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರಾಜ್ಯ ಸರ್ಕಾರಿ ಅಧಿಕಾರಿ, ನೌಕರರಿಗೆ ಹೇಳಿದ್ದಾರೆ.
- 240 ತಾಲೂಕಿನ ಪೈಕಿ 164 ತಾಲೂಕು ತೀವ್ರ ಬರಪೀಡಿತ ಪ್ರದೇಶ ಘೋಷಣೆ - ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅಡಿಪಾಯದ ವೇಳೆ ಅಟಲ್ ಮಾತು ಸ್ಮರಣೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯ ಸರ್ಕಾರಿ ನೌಕರರು ಸರ್ಕಾರದ ನಾಡಿ ಮಿಡಿತವಾಗಿದ್ದು, ಟೀಂ ಕರ್ನಾಟಕವಾಗಿ ನೀವೆಲ್ಲರೂ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರಾಜ್ಯ ಸರ್ಕಾರಿ ಅಧಿಕಾರಿ, ನೌಕರರಿಗೆ ಹೇಳಿದರು.ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ರಾಜ್ಯದ ಸರ್ಕಾರಿ ಅಧಿಕಾರಿಗಳು, ನೌಕರರೊಂದಿಗೆ ವೀಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಸರ್ಕಾರದ ಅತ್ಯಂತ ಪ್ರಮುಖ ಅಂಗವಾಗಿದ್ದು, ಜನಸಾಮಾನ್ಯರು ಹಾಗೂ ಸರ್ಕಾರದ ನಡುವೆ ಗಟ್ಟಿಯಾದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಇತಿಹಾಸ ಸೃಷ್ಟಿಸುವಲ್ಲಿ ನಂಬಿಕೆ:ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹಾಗೂ ಪತ್ರಿಕಾ ರಂಗಗಳು ಮುಖ್ಯಸ್ತಂಭಗಳಾಗಿವೆ. ಪ್ರತಿಯೊಬ್ಬ ನೌಕರನ ಶ್ರಮ ಸಮಾಜಕ್ಕೆ ಅತ್ಯಗತ್ಯ. ನಾನು ಇತಿಹಾಸ ಓದುವುದರಲ್ಲಿ ಅಥವಾ ಬರೆಯುವುದರಲ್ಲಿ ನಂಬಿಕೆ ಇಟ್ಟಿಲ್ಲ. ಬದಲಾಗಿ ಹೊಸ ಇತಿಹಾಸ ಸೃಷ್ಟಿಸುವುದರಲ್ಲಿ ನಂಬಿಕೆ ಇಟ್ಟಿದ್ದೇನೆ. ರಾಜ್ಯದ ಲಕ್ಷಾಂತರ ನೌಕರರಿಗೆ ಸಿಕ್ಕಿರುವ ಅಧಿಕಾರ ಹಾಗೂ ಹುದ್ದೆ ಸಾರ್ವಜನಿಕರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ನೀಡಿದ ದೊಡ್ಡ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ರಾಜ್ಯದ ಮಾನವ ಸಂಪನ್ಮೂಲ, ಕೌಶಲ್ಯ ಹಾಗೂ ಶಿಕ್ಷಣ ವ್ಯವಸ್ಥೆಯಿಂದಾಗಿ ಇಡೀ ವಿಶ್ವವೇ ಕರ್ನಾಟಕದತ್ತ ತಿರುಗಿ ನೋಡುವಂತಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಡಿಪಾಯ ಹಾಕಿದ ಸಂದರ್ಭದಲ್ಲಿ ವಿಶ್ವದ ನಾಯಕರು ದೆಹಲಿಗೆ ಹೋಗುವ ಮೊದಲು ಬೆಂಗಳೂರಿಗೆ ಆಗಮಿಸುವ ವಾತಾವರಣ ನಿರ್ಮಾಣವಾಗಿದೆ ಎಂಬ ಮಾತುಗಳನ್ನು ಹೇಳಿದ್ದು, ಇಂದು ಅದು ನಿಜವಾಗಿದೆ ಎಂದು ಮೆಲಕು ಹಾಕಿದರು.164 ತಾಲೂಕು ತೀವ್ರ ಬರಪೀಡಿತ ಪ್ರದೇಶ:
ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರ ಒದಗಿಸುವ ಉದ್ದೇಶದಿಂದ ಸರ್ಕಾರವು ಪ್ರಜಾಸೇವೆ ಎಂಬ ಹೊಸ ಇಲಾಖೆ ಮಾದರಿ ಪ್ರಾರಂಭಿಸಿದೆ. ಇದರಡಿ ಹಿರಿಯ ಅಧಿಕಾರಿಗಳನ್ನು ನೇಮಿಸಿ, ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಜನಸಾಮಾನ್ಯರ ಕುಂದುಕೊರತೆ ಆಲಿಸಿ ತ್ವರಿತವಾಗಿ ಸ್ಪಂದಿಸಲು ಸೂಚಿಸಲಾಗಿದೆ. ರಾಜ್ಯದ ಒಟ್ಟು 240 ತಾಲೂಕುಗಳ ಪೈಕಿ 164 ತಾಲೂಕು ತೀವ್ರ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ ಎಂದು ಅವರು ಹೇಳಿದರು.ಮಳೆ ಕೊರತೆಯಿಂದಾಗಿ ರೈತರ ಮುಂಗಾರು ಬೆಳೆಗಳು ಒಣಗಿ ಅಪಾರ ನಷ್ಟ ಸಂಭವಿಸಿದೆ. ಬೋರ್‌ವೆಲ್‌ಗಳು ಬತ್ತಿಹೋಗಿದ್ದು, ಕುಡಿಯುವ ನೀರು ಹಾಗೂ ಮೇವಿನ ಸಂಕಷ್ಟ ಎದುರಾಗಿದೆ. ಸರ್ಕಾರವು ರೈತರ ನೆರವಿಗೆ ಸದಾ ಬದ್ಧವಾಗಿದೆ. ಅಧಿಕಾರಿ, ನೌಕರರು ಸಹ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಭ್ರಷ್ಟಾಚಾರ ಸಹಿಸುವುದಿಲ್ಲ:ಭಾರತ ಜೋಡೋ ಯೋಜನೆ ಯಶಸ್ಸಿಗೆ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳು ಶಾಸಕರೊಂದಿಗೆ ತಕ್ಷಣ ಸಮಾಲೋಚನೆ ನಡೆಸಬೇಕು. ಇಒ, ಪಿಡಿಒ ಮಟ್ಟದಲ್ಲಿ ಸಭೆ ನಡೆಸಿ, ಯಾವುದೇ ಜಾತಿ- ಧರ್ಮದ ಭೇದವಿಲ್ಲದೇ ಸಂಘಗಳನ್ನು ರಚಿಸಿ ಯುವಕರನ್ನು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಸರ್ಕಾರದ ಯೋಜನೆಗಳಲ್ಲಿ ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಯೋಜನೆಯ ಪ್ರತಿಯೊಬ್ಬ ಫಲಾನುಭವಿಯ ಫೋಟೋ, ಆಧಾರ್ ಹಾಗೂ ವಿವರಗಳನ್ನು ನಿಖರವಾಗಿ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಮನೆ ಬಾಗಿಲಿಗೇ ಇ-ಖಾತಾ:ಫಲಾನುಭವಿಗಳಿಗೆ ನೀಡಿದ ನೆರವು (ಹಸು, ಕುರಿ, ಸೈಕಲ್, ಕಾರು ಇತ್ಯಾದಿ) ಸರಿಯಾಗಿ ಬಳಕೆ ಆಗುತ್ತಿದೆಯೇ ಎಂಬುದನ್ನೂ ಪರಿಶೀಲಿಸಬೇಕು. ಗ್ರಾಮೀಣ ಪ್ರದೇಶದ 1.11 ಕೋಟಿ ಕುಟುಂಬಗಳಿಗೆ ಹಾಗೂ ಬೆಂಗಳೂರು ನಗರದ 25 ಲಕ್ಷ ಮನೆಗಳಿಗೆ ಯಾವುದೇ ಮಧ್ಯವರ್ತಿಗಳಿಲ್ಲದೇ, ಉಚಿತವಾಗಿ ಮನೆ ಬಾಗಿಲಿಗೇ ಇ-ಖಾತಾ ತಲುಪಿಸುವ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ 6 ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರಾಜ್ಯದಲ್ಲಿ ಗುರುತಿಸಲಾಗಿರುವ ಸುಮಾರು 2 ಸಾವಿರ ಗ್ರಾಮೀಣ ಶಾಲೆಗಳನ್ನು ಸಿಎಸ್‌ಆರ್ ನಿಧಿಯಡಿ ದತ್ತು ತೆಗೆದುಕೊಳ್ಳಲು ವಿವಿಧ ಕಂಪನಿಗಳ ಆಡಳಿತ ಮಂಡಳಿಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಿಳಿಸಿದರು.
ಪ್ರಜಾಸೇವೆ ವ್ಯವಸ್ಥೆ:ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಮಾತನಾಡಿ, ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವುದು ನಮ್ಮ ಸರ್ಕಾರದ ಮುಖ್ಯ ಆದ್ಯತೆ. ಸಿಎಂ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಪ್ರಾರಂಭಿಸಲಾದ ಪ್ರಜಾಸೇವೆ ವ್ಯವಸ್ಥೆಯು ಗ್ರಾ.ಪಂ.ಮಟ್ಟದಿಂದ ಹಿಡಿದು ವಿಧಾನಸೌಧದವರೆಗೂ ಜನರ ಧ್ವನಿಯನ್ನು ಆಲಿಸುವ ಪ್ರಕ್ರಿಯೆ ಬಲಪಡಿಸಲಿದೆ. ತುಮಕೂರು ಪ್ರವಾಸ ಕೈಗೊಂಡು, ಬೆಳೆಹಾನಿ ವೀಕ್ಷಿಸಿದ್ದೇವೆ. ರಾಜ್ಯದಲ್ಲಿ ಎದುರಾದ ಬರ, ಕುಡಿಯುವ ನೀರಿನ ಅಭಾವ ಎದುರಿಸಲು ಸರ್ಕಾರವು ಸಾರ್ವಜನಿಕರು ಮತ್ತು ರೈತರ ಬೆನ್ನಿಗೆ ದೃಢವಾಗಿ ನಿಲ್ಲಲಿದೆ ಎಂದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಚಿವರಾದ ಸಂತೋಷ ಲಾಡ್, ಡಾ.ಅಜಯ್ ಸಿಂಗ್, ವಿಜಯಾನಂದ ಕಾಶಪ್ಪನವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ್, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ನೌಕರರು ಸಭೆಯಲ್ಲಿದ್ದರು.- - -
* ಜಗಳೂರು ಅಧಿಕಾರಿಗಳಿಗೆ ಬೆಂಗಳೂರಿಂದ್ಲೇ ಸಿಎಂ ಚಾಟಿ!- ನಾಡಗೀತೆ ವೇಳೆ ಎದ್ದು ನಿಲ್ಲದ ಅಧಿಕಾರಿ, ನೌಕರರು ಫುಲ್ ಕ್ಲಾಸ್ ದಾವಣಗೆರೆ: ನಾಡಗೀತೆಗೆ ಗೌರವ ನೀಡದ ಜಗಳೂರು ತಾಲೂಕು ಅಧಿಕಾರಿಗಳು, ನೌಕರರಿಗೆ ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್‌ನಿಂದಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಚಾಟಿ ಬೀಸಿದ ಘಟನೆ ನಡೆಯಿತು.
ವಿಧಾನಸೌಧದಿಂದ ರಾಜ್ಯದ ಸರ್ಕಾರಿ ಅಧಿಕಾರಿ, ನೌಕರರ ವೀಡಿಯೋ ಕಾನ್ಫರೆನ್ಸ್ ಹಮ್ಮಿಕೊಂಡಿದ್ದ ವೇಳೆ ನಾಡಗೀತೆಗೆ ಗೌರವ ನೀಡದ ಜಗಳೂರು ಪಟ್ಟಣದ ತಾಲೂಕು ಗುರು ಭವನದಲ್ಲಿ ಸೇರಿ, ಸಂವಾದದಲ್ಲಿ ಪಾಲ್ಗೊಂಡಿದ್ದ ಜಗಳೂರು ತಾಲೂಕು ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಸಿಎಂ ಡಿ.ಕೆ.ಶಿವಕುಮಾರ ತೀವ್ರ ಆಕ್ರೋಶಗೊಂಡರು.ಉಪ ವಿಭಾಗಾಧಿಕಾರಿ ಸಂತೋಷ್, ಜಗಳೂರು ತಹಸೀಲ್ದಾರ್ ಗುರುಬಸಪ್ಪ, ತಾಪಂ ಇಒ ಕೆಂಚಪ್ಪ ಸೇರಿದಂತೆ ಹಲವಾರು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಾಡಗೀತೆ ಹಾಡುವ ವೇಳೆ ಕುಳಿತುಕೊಂಡಿದ್ದ ಕೆಲ ಅಧಿಕಾರಿ, ಸಿಬ್ಬಂದಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ನನ್ನ ಕಣ್ಣು ಕುರುಡು ಅಂತಾ ಕೆಲವು ಜನ ತಿಳಿದುಕೊಂಡಿರಬಹುದು. ಜಗಳೂರಿನವರಿಗೆ ಪಾಪ ನಿಂತುಕೊಂಡು, ನಾಡಗೀತೆಗೆ ಗೌರವ ಸಲ್ಲಿಸಲಾಗುತ್ತಿಲ್ಲ. ನಾಡಗೀತೆ ನಡೆಯಬೇಕಾದರೆ ಇನ್ನೂ ಕುಳಿತುಕೊಂಡೇ ಇದ್ದರು. ನಾನು ನನ್ನ ಮೇಲೆಯೇ ವಾಚ್ ಇಟ್ಟುಕೊಂಡಿದ್ದೇನೆ. ನನಗೆ ಇಲ್ಲಿಂದ ಜಗಳೂರು ಕಾಣುವುದಿಲ್ಲ ಅಂತಾ ಅಂದುಕೊಳ್ಳಬೇಡಿ ಎಂದು ಅವರು ಸೂಚ್ಯವಾಗಿ ಎಚ್ಚರಿಸಿದರು.ನಾನು ಇಲ್ಲಿದ್ದರೂ ವಿತ್ ಇನ್ ಮಿನಿಟ್ ಮಾಹಿತಿ ಬರುತ್ತದೆ. ಜಗಳೂರು ಅಷ್ಟೇ ಅಲ್ಲ, ಇನ್ನೂ ಏಳು ತಾಲೂಕುಗಳಲ್ಲಿಯೂ ನಾಡಗೀತೆ ಹಾಡುವ ವೇಳೆ ಇದೇ ರೀತಿ ಕುಳಿತುಕೊಂಡಿದ್ದರು. ವೀಡಿಯೋ ರೆಕಾರ್ಡಿಂಗ್ ಇದೆ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಬೆಂಗಳೂರಿನ ವಿಧಾನಸೌಧದಲ್ಲೇ ಕುಳಿತು, ಚಳಿ ಬಿಡಿಸಿದ್ದು ಗಮನ ಸೆಳೆಯಿತು.
- - -(ಬಾಕ್ಸ್)
* ಪತ್ರಕರ್ತರನ್ನು ದೂರವಿಡುವ ತಹಸೀಲ್ದಾರ್ ನಡೆಗೆ ಅಸಮಾಧಾನಜಗಳೂರು: ತಾಲೂಕು ಆಡಳಿತ ಮತ್ತು ನೂತನ ತಹಸೀಲ್ದಾರ್ ಗುರುಬಸವರಾಜಪ್ಪ ಅವರ ಕಾರ್ಯವೈಖರಿ ವಿರುದ್ಧ ಜಗಳೂರು ತಾಲೂಕು ಪತ್ರಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹಬ್ಬಗಳು ಅಥವಾ ಮಹಾನೀಯರ ಜಯಂತಿಯ ಪೂರ್ವಭಾವಿ ಸಭೆಗಳಿಗೆ ಮಾಧ್ಯಮ ಪ್ರತಿನಿಧಿಗಳಿಗೆ ಅಧಿಕೃತ ಆಹ್ವಾನ ನೀಡುತ್ತಿಲ್ಲ. ಈ ದಿನದ ಸಿಎಂ, ಡಿಸಿಎಂ ವಿಡಿಯೋ ಸಂವಾದ ನಡೆಸುತ್ತಿದ್ದಾರೆ. ಈ ಬಗ್ಗೆಯೂ ಮಾಧ್ಯಮಗಳಿಗೆ ನೀಡದೇ ರಹಸ್ಯವಾಗಿ ಸಭೆ ನಡೆಸಲಾಗಿದೆ ಎಂದು ಕಿಡಿಕಾರಿದರು. ಆಡಳಿತಾತ್ಮಕ ಲೋಪಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯಗಳು ಮಾಧ್ಯಮಗಳ ಮೂಲಕ ಹೊರಬರುತ್ತದೆ ಎಂಬ ಭಯದಿಂದ ತಹಸೀಲ್ದಾರ್ ಪತ್ರಕರ್ತರನ್ನು ದೂರವಿಡುತ್ತಿರಬಹುದು ಎಂದು ಪತ್ರಕರ್ತರು ಸಂಶಯದಿಂದ ನೋಡುವಂತಾಗಿದೆ. ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಾಡಗೀತೆಗೆ ತೋರಿದ ಅಗೌರವ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿದೆ. ಜಗಳೂರು ಅಧಿಕಾರಿಗಳ ಈ ನಡೆಗೆ ಸಾರ್ವಜನಿಕ ವಲಯದಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. - - - -11ಜೆ.ಜಿ.ಎಲ್.1: ಜಗಳೂರು ಗುರು ಭವನದಲ್ಲಿ ತಾಲೂಕುಮಟ್ಟದ ಅಧಿಕಾರಿಗಳು ಸಿಎಂ ವಿಡಿಯೋ ಸಂವಾದ ವೀಕ್ಷಿಸಿದರು.- - -
-11ಕೆಡಿವಿಜಿ4, 5, 6:ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ವೀಡಿಯೋ ಸಂವಾದ ನಡೆಸಿದ ವೇಳೆ ದಾವಣಗೆರೆ ಡಿಸಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಎಸ್ಪಿ ಡಾ. ಎಚ್.ಟಿ.ಶೇಖರ್ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ನೌಕರರು ಪಾಲ್ಗೊಂಡು ಕಾರ್ಯಕ್ರಮ ವೀಕ್ಷಿಸಿದರು.