ಗದಗ: ನಗರದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತನ ಸರಸ್ವತಿ ದೇವಿಯ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ಐತಿಹಾಸಿಕ ಮಹತ್ವವುಳ್ಳ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಸರಸ್ವತಿ ದೇವಸ್ಥಾನದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ದುಷ್ಕರ್ಮಿಗಳು ದೇವಿಯ ಮೂರ್ತಿಯ ಎದೆಭಾಗವನ್ನು ಹಾನಿಗೊಳಿಸಿ ವಿಕೃತಿ ಮೆರೆದಿದ್ದಾರೆ. ಕಳೆದ ರಾತ್ರಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಶನಿವಾರ ಮಧ್ಯಾಹ್ನ ವಿಷಯ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ದೇವಾಲಯವು ಸುಮಾರು 8ನೇ ಶತಮಾನಕ್ಕೆ ಸೇರಿದ್ದು, ತನ್ನ ವಾಸ್ತುಶಿಲ್ಪ ವೈಭವಕ್ಕೆ ಹೆಸರುವಾಸಿಯಾಗಿದೆ. ಪ್ರಸ್ತುತ ಈ ದೇವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಕ್ಷಣೆಯಲ್ಲಿದೆ. ಇಂತಹ ಸೂಕ್ಷ್ಮ ಹಾಗೂ ಐತಿಹಾಸಿಕ ಮಹತ್ವದ ಸ್ಥಳದಲ್ಲಿ ಭದ್ರತಾಲೋಪ ಉಂಟಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಘಟನೆ ನಡೆದ ತಕ್ಷಣವೇ ಗದಗ ಶಹರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿರುವ ಕುರುಹುಗಳನ್ನು ಸಂಗ್ರಹಿಸಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ.ಅಡವೀಂದ್ರಸ್ವಾಮಿ ಮಠದಲ್ಲಿ ಶಿವಾನುಭವ

ಗದಗ: ಪುಣ್ಯಕ್ಷೇತ್ರಗಳ ದರ್ಶನದಿಂದ ಮಾನವ ಜನ್ಮ ಸಾರ್ಥಕವಾಗುತ್ತದೆ. ಕೈಕಾಲು ಗಟ್ಟಿ ಇರುವಾಗಲೇ ಯಾತ್ರೆ ಮಾಡಬೇಕೆಂದು ಅಡ್ನೂರು ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು ತಿಳಿಸಿದರು.ನಗರದ ಅಡವೀಂದ್ರಸ್ವಾಮಿ ಮಠದ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ಜರುಗಿದ 349ನೇ ಶಿವಾನುಭವ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಮಾತನಾಡಿ, ಲಿಂ. ಗಂಗಾಧರ ಸ್ವಾಮಿಗಳು, ಕೆ. ಸುಧಾಕರ್ ರಾವ್, ಡಾ. ಬಿ.ಎಫ್. ದಂಡಿ ಹಾಗೂ ಲಿಂ. ಪಾಂಡುರಂಗ ಕುರ್ತುಕೋಟಿ ಅವರ ಸೇವೆಯನ್ನು ಸ್ಮರಿಸಿ, ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ವಿರೂಪಾಕ್ಷಯ್ಯ ಹೊಸಳ್ಳಿಮಠ್ ಕೇದಾರ, ಬದರಿನಾಥ್ ಮಹಿಮೆ ಕುರಿತು ಉಪನ್ಯಾಸ ನೀಡಿದರು.


ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ರಾಜೇಂದ್ರ ಎಸ್. ಗಡಾದ ಯಾತ್ರೆಯು ಮನಸ್ಸಿಗೆ ಶಾಂತಿ ನೀಡುತ್ತದೆ ಎಂದರು. ಸುಜಾತಾ ದೊಡ್ಡಮನಿ ಹಾಗೂ ಚನ್ನಬಸಯ್ಯ ಹೇಮಗಿರಿಮಠ ನುಡಿನಮನ ಸಲ್ಲಿಸಿದರು.ಇದೇ ವೇಳೆ ಪುಣ್ಯಕ್ಷೇತ್ರಗಳ ದರ್ಶನ ಮಾಡಿದ ವಿರೂಪಾಕ್ಷಯ್ಯ ಹೊಸಳ್ಳಿಮಠ, ವಿಜಯಕುಮಾರ ಹಿರೇಮಠ, ಡಾ. ರಾಜೇಂದ್ರ ಎಸ್. ಗಡಾದ, ಜ್ಯೋತಿ ಗಡಾದ, ಕಬಾಡಿ ಸಹೋದರ ದಂಪತಿಗಳನ್ನು ಹಾಗೂ ಸವಿತಾ ಹೊಸಳ್ಳಿಮಠ, ಗುರಪ್ಪ ನಿಡಗುಂದಿ ದಂಪತಿ ಮತ್ತು ಶ್ರೀಮತಿ ಬಳಿಗಾರ ಅವರನ್ನು ಸತ್ಕರಿಸಲಾಯಿತು.

ವೀರೇಶ್ವರ ಸ್ವಾಮಿಗಳಿಂದ ವೇದಘೋಷ ನಡೆಯಿತು. ಪ್ರಕಾಶ ಬಂಡಿ ಸ್ವಾಗತಿಸಿದರು, ವಿ.ಎಂ. ಕುಂದ್ರಾಳಹಿರೇಮಠ ನಿರೂಪಿಸಿದರು, ಎಂ.ಎಂ. ಜೋಗಿನ ವಂದಿಸಿದರು. ಚನ್ನಬಸಪ್ಪ ಕಾಳಗಿ, ಪ್ರೊ. ಸಿ. ಲಿಂಗಾರೆಡ್ಡಿ ಉಪಸ್ಥಿತರಿದ್ದರು. ಬಿ.ಎಂ. ಬಿಳೆಯಲಿ, ಜಿ.ಎಂ. ಯಾನಂ ಶೆಟ್ಟಿ, ಡಾ. ಎಲ್.ವಿ. ಪಾಟೀಲ್, ಸುಶೀಲಾ ಕೋಟಿ ಮತ್ತಿತರರು ಪಾಲ್ಗೊಂಡಿದ್ದರು.