ಸಾರಾಂಶ
ಗದಗ: ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕಾನೂನು ನೆರವು ಅಭಿರಕ್ಷಕರು, ಪ್ಯಾನೆಲ್ ವಕೀಲರು ಹಾಗೂ ಪ್ರಾಧಿಕಾರಕ್ಕೆ ನೂತನವಾಗಿ ಆಯ್ಕೆಯಾದ ಪಿ.ಎಲ್.ವಿ (ಅರೇಕಾಲಿಕ ಕಾನೂನು ಸ್ವಯಂ ಸೇವಕರು) ಕಾರ್ಯ ನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಎಡಿಆರ್ ಕಟ್ಟಡದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಪ್ಯಾನೆಲ್ ವಕೀಲರಿಗೆ, ಕಾನೂನು ನೆರವು ಅಭಿರಕ್ಷಕರು ಹಾಗೂ ನೂತನವಾಗಿ ಆಯ್ಕೆಯಾದ ಪಿ.ಎಲ್.ವಿ (ಅರೇಕಾಲಿಕ ಕಾನೂನು ಸ್ವಯಂ ಸೇವಕರು)ಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಷ್ಟ್ರಮಟ್ಟದಿಂದ ಹಿಡಿದು ತಾಲೂಕು ಮಟ್ಟದವರೆಗೆ ಕಾನೂನು ಸೇವಾ ಪ್ರಾಧಿಕಾರಗಳು ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ, ದೀನ ದಲಿತರಿಗೆ, ಬಡವರಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನಿನ ಅರಿವು ಮತ್ತು ನೆರವು ನೀಡುವುದು ಪ್ರಾಧಿಕಾರದ ಉದ್ದೇಶವಾಗಿದೆ. ಈ ತರಬೇತಿಯ ಸದುಪಯೋಗ ಪಡೆದು ಪ್ಯಾನಲ್ ವಕೀಲರು ಹಾಗೂ ಕಾನೂನು ನೆರವು ಅಭಿರಕ್ಷಕ ವಕೀಲರು ಈಗಾಗಲೇ ನ್ಯಾಯಾಲಯಗಳಲ್ಲಿ ಚಾಲ್ತಿ ಇದ್ದ ಉಚಿತ ಪ್ರಕರಣಗಳ ಬಗ್ಗೆ ಪಕ್ಷಗಾರರಿಗೆ ಅವರ ಪ್ರಕರಣಗಳ ಬಗ್ಗೆ ಮಾಹಿತಿ ಹಾಗೂ ಮುದ್ದತ್ ದಿನಾಂಕಗಳ ಬಗ್ಗೆ ಪಕ್ಷಗಾರರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ತಪ್ಪದೇ ಮಾಹಿತಿ ನೀಡುವುದು, ಪಕ್ಷಗಾರರ ಹಿತಕಾಯಬೇಕು ಎಂದರು.
ಹೊಸದಾಗಿ ನೇಮಕಗೊಂಡ ಪಿ.ಎಲ್.ವಿ ಗಳು ಪ್ರಾಧಿಕಾರದ ಉದ್ದೇಶಗಳ ಬಗ್ಗೆ ಉಚಿತ ಕಾನೂನು ನೆರವಿನ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ಅಸಹಾಯಕರಿಗೆ ಉಚಿತ ಕಾನೂನು ಸೇವೆಗಳ ಸೌಲಭ್ಯಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು. ಲೋಕ ಅದಾಲತ್ ಹಾಗೂ ಮಧ್ಯಸ್ಥಿಕೆ ಕೇಂದ್ರಗಳ ಸೌಲಭ್ಯಗಳ ಸದುಪಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.ಜನರಿಗೆ ಅನುಕೂಲವಾಗಲಿ ಎಂದು ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಮುಂಭಾಗದಲ್ಲಿ ಪ್ರತಿದಿನ ಇಬ್ಬರು ವಕೀಲರು ಸಲಹೆ ನೀಡಲು ಲಭ್ಯ ಇರುತ್ತಾರೆ, ಕೌಟುಂಬಿಕ ದೌರ್ಜನ್ಯಗಳಿಗೆ ಸಂಬಂಧಪಟ್ಟಂತೆ ಸಿಡಿಪಿಒ ಕಚೇರಿಯಲ್ಲಿ, ತಹಸೀಲ್ದಾರ ಕಚೇರಿ,ಬಾಲ ನ್ಯಾಯಮಂಡಳಿ, ಜಿಲ್ಲಾ ಕಾರಾಗೃಹ, ಎಆರ್‌ಟಿ ಸೆಂಟರ್, ಜಿಲ್ಲಾಸ್ಪತ್ರೆಯಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರ್‌ದಲ್ಲಿ ನುರಿತ ವಕೀಲರು ಸಲಹೆ ನೀಡಲು ಲಭ್ಯರಿರುವ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಪಿಎಲ್‌ವಿ ಗಳು ಯಾವುದೇ ಶುಲ್ಕ, ಸಂಭಾವನೆ ಅಥವಾ ಸಂಬಳ ನಿರೀಕ್ಷಿಸದೇ ತಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿರುವ ಶೋಷಿತ ಹಾಗೂ ತುಳಿತಕ್ಕೊಳಗಾದ ಜನರ ಸೇವೆ ಅರ್ಪಣಾ ಮನೋಭಾವದಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಮಾತನಾಡಿ, ರಾಜ್ಯ ಪ್ರಾಧಿಕಾರದ ನಿರ್ದೇಶನದ ಮೇರಿಗೆ ಹಮ್ಮಿಕೊಳ್ಳಲಾದ ಈ ತರಬೇತಿಯಸದುಪಯೋಗ ಪಡೆದು ಪಿಎಲ್‌ವಿಗಳು ತಮ್ಮ ಕಾರ್ಯ ಕ್ಷೇತ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿವಿಧ ಇಲಾಖೆಗಳ, ಎನ್‌ಜಿಒಗಳ ಸಹಯೋಗದಲ್ಲಿ ಮಕ್ಕಳು, ಶ್ರಮಿಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದವರಿಗೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರಗಳ ಅಧಿನಿಯಮದಡಿಯ ಫಲಾನುಭವಿಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳ ಬಗೆಗೆ ನಾಗರಿಕರಲ್ಲಿ ಅರಿವನ್ನು ಮೂಡಿಸಬೇಕು. ನಾಗರಿಕರಿಗೆ ಲೋಕ ಅದಾಲತ್‌ನಲ್ಲಿ ತಮ್ಮ ಪ್ರಕರಣ ಇತ್ಯರ್ಥಗೊಂಡಲ್ಲಿ ನ್ಯಾಯಾಲಯಕ್ಕೆ ತುಂಬಿದ ಕೋರ್ಟ್ ಫೀ ಸಂಪೂರ್ಣ ವಾಪಸ್ ನೀಡುವ ಬಗ್ಗೆ ಹಾಗೂ ಪ್ರಕರಣ ರಾಜೀ ಆದಲ್ಲಿ ಅಫೀಲು ಇರುವುದಿಲ್ಲ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಸರ್ಕಾರದ ಯೋಜನೆಗಳು, ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ನೇರವಾಗಿ ಫಲಾನುಭವಿಗಳಿಗೆ ಸಿಗುವಂತೆ ಮಾಡಬೇಕು. ಅರ್ಹ ವ್ಯಕ್ತಿಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯದೇ ಇದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮಾಹಿತಿ ನೀಡಿದಲ್ಲಿ ಕ್ರಮವಹಿಸಲಾಗುವುದು. ಒಟ್ಟಿನಲ್ಲಿ ಪ್ಯಾನಲ್ ವಕೀಲರು, ಎಲ್‌ಎಡಿಸಿ ವಕೀಲರು ಹಾಗೂ ಪಿಎಲ್‌ವಿಗಳು ತಮ್ಮ ಜವಾಬ್ದಾರಿ ಅರಿತು ನಿಸ್ವಾರ್ಥ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿಪಾಟೀಲ, ಬಾಲನ್ಯಾಯ ಮಂಡಳಿಯ ಸದಸ್ಯ, ಹಿರಿಯ ವಕೀಲ ಜಿ.ಸಿ.ರೇಶ್ಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ಯಾನೆಲ್ ವಕೀಲರು, ಕಾನೂನು ನೆರವು ಅಭಿರಕ್ಷಕರು ಹಾಗೂ ನೂತನವಾಗಿ ಆಯ್ಕೆಯಾದ ಪಿ.ಎಲ್.ವಿಗಳು ಇದ್ದರು.ಪಿಎಲ್‌ವಿ ಪರಶುರಾಮ ಕಳಗಣ್ಣವರ ಪ್ರಾರ್ಥಿಸಿದರು. ಶಿರಸ್ತೆದಾರ ಬಿ.ಎಂ. ಕುಕನೂರ ಕಾರ್ಯಕ್ರಮ ನಿರ್ವಹಿಸಿದರು.