ಪತ್ರಿಕೋದ್ಯಮದಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸಿ: ಬಿ.ವಿ.ಮಲ್ಲಿಕಾರ್ಜುನಯ್ಯ

| Published : Feb 05 2024, 01:47 AM IST

ಪತ್ರಿಕೋದ್ಯಮದಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸಿ: ಬಿ.ವಿ.ಮಲ್ಲಿಕಾರ್ಜುನಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಿಕೋದ್ಯಮದ ದಿಕ್ಕು ಹಳ್ಳಹಿಡಿಯುತ್ತಿದ್ದು, ಪತ್ರಿಕೆಗಳ, ಟೀವಿ ನೋಡುವವರ ಸಂಖ್ಯೆ ಕಡಿಮೆಯಾಗಿದ್ದು, ಸಾಮಾಜಿಕ ಜಾಲತಾಣಗಳ ಅಬ್ಬರ ಹೆಚ್ಚಾಗಿದೆ. ಇದೆಲ್ಲಾ ಗಮನಿಸಿದರೆ ಮುಂದಿನ ಸಮ್ಮೇಳನ ನಡೆಯುತ್ತದೆಯೋ ಇಲ್ಲವೋ ಎಂಬ ಆತಂಕ ಕಾಡುತ್ತಿದೆ. ಪತ್ರಕರ್ತರು ಮೃತರಾದರೆ ಪರಿಹಾರ ನೀಡಬೇಕು ಎಂಬ ಇತ್ಯಾದಿ ಬೇಡಿಕೆಗಳ ಬದಲಿಗೆ ಪತ್ರಿಕೆಗಳನ್ನು ಓದುವವರ ಸಂಖ್ಯೆ ಅಧಿಕವಾಗಲು ಒತ್ತಾಯ ಹೇರಬೇಕಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

38ನೇ ಪತ್ರಕರ್ತರ ಸಮ್ಮೇಳನ ಅತ್ಯಂತ ಯಶಸ್ವಿಯಾಗಿದೆ. ಸಾಹಿತ್ಯ ಸಮ್ಮೇಳನದ ಜಾತ್ರೆಯಂತೆ ಇದು ನಡೆದಿದೆ. ವರ್ಷದಿಂದ ವರ್ಷಕ್ಕೆ ಪತ್ರಕರ್ತರ ಸಂಘ ಮುಂಚೂಣಿಯಲ್ಲಿ ಬೆಳೆಯುತ್ತಿದೆ ಎಂದು ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಅಭಿಪ್ರಾಯಪಟ್ಟರು.

ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ 38ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಹಿಂದಿನ ಮತ್ತು ಇಂದಿನ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಪತ್ರಿಕೋದ್ಯಮ ಕಂಡಿದೆ. ಮೊದಲಿನ ಪತ್ರಿಕೋದ್ಯಮ ಇಂದಿಲ್ಲ. ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಕಾಲ ಈಗಿಲ್ಲ. ಶತಮಾನ ಕಾಣುವತ್ತ ಸಂಘ ಹೆಜ್ಜೆ ಇಡುತ್ತಿದೆ. ಇವತ್ತಿನ ದಿನಗಳಲ್ಲಿ ಅನೇಕ ಮಾಧ್ಯಮಗಳು ಹುಟ್ಟಿಕೊಂಡಿವೆ.

ಹಿರಿಯ ಪತ್ರಕರ್ತ ಕೆ.ಎನ್. ಚನ್ನೇಗೌಡ ದಿಕ್ಸೂಚಿ ಮಾತುಗಳನ್ನಾಡಿ, ಪತ್ರಿಕೋದ್ಯಮದ ದಿಕ್ಕು ಹಳ್ಳಹಿಡಿಯುತ್ತಿದ್ದು, ಪತ್ರಿಕೆಗಳ, ಟೀವಿ ನೋಡುವವರ ಸಂಖ್ಯೆ ಕಡಿಮೆಯಾಗಿದ್ದು, ಸಾಮಾಜಿಕ ಜಾಲತಾಣಗಳ ಅಬ್ಬರ ಹೆಚ್ಚಾಗಿದೆ. ಇದೆಲ್ಲಾ ಗಮನಿಸಿದರೆ ಮುಂದಿನ ಸಮ್ಮೇಳನ ನಡೆಯುತ್ತದೆಯೋ ಇಲ್ಲವೋ ಎಂಬ ಆತಂಕ ಕಾಡುತ್ತಿದೆ. ಪತ್ರಕರ್ತರು ಮೃತರಾದರೆ ಪರಿಹಾರ ನೀಡಬೇಕು ಎಂಬ ಇತ್ಯಾದಿ ಬೇಡಿಕೆಗಳ ಬದಲಿಗೆ ಪತ್ರಿಕೆಗಳನ್ನು ಓದುವವರ ಸಂಖ್ಯೆ ಅಧಿಕವಾಗಲು ಒತ್ತಾಯ ಹೇರಬೇಕಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದಿ ಚರ್ಚೆ ನಡೆಸಬೇಕು ಎನ್ನುವಂತದ್ದು ಆಗಬೇಕು ಹೊರತು ಬೇಡಿಕೆಗಳಲ್ಲ. ಪತ್ರಿಕೆಗಳನ್ನು ನಡೆಸುವುದು ಕಷ್ಟ. ಅತ್ಯಂತ ಕಡಿಮೆ ಬೆಲೆಗೆ ಪತ್ರಿಕೆಗಳು ಮಾರಾಟ ಮಾಡಬೇಕಿದೆ. ಪತ್ರಿಕೆಗಳು ನಶಿಸಿಹೋಗುವುದಕ್ಕೂ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕು ಎಂದರು.

ಸುದ್ದಿ ಸತ್ಯಾಂಶವಿದ್ದರೆ ವಿಶ್ವಾಸ ಹೆಚ್ಚಲಿದೆ:

ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಈ ಸಮ್ಮೇಳನದಲ್ಲಿ ಎರಡು ದಿನಗಳ ಕಾಲ ಆರೋಗ್ಯಕರ ಚರ್ಚೆಗಳು ನಡೆದಿದೆ. ಯಾವುದೇ ರೀತಿಯ ಮಾಧ್ಯಮಗಳು ಬರಲಿ, ಪತ್ರಿಕೆಗಳ ಓದಿದರೆ ಸಿಗುವ ತೃಪ್ತಿ ಮತ್ಯಾವುದರಲ್ಲೂ ಸಿಗುವುದಿಲ್ಲ. ಪತ್ರಿಕೆ ಕೂಡ ಇನ್ನೂ ಜನರನ್ನು ಸೆಳೆಯುವ ಕೆಲಸ ಮಾಡುವುದು ಸಾಕಷ್ಟಿದೆ. ಸುದ್ದಿ ಸತ್ಯಾಂಶವಿದ್ದರೆ ಜನರು ಮತ್ತಷ್ಟು ವಿಶ್ವಾಸ ಇಡುತ್ತಾರೆ. ಸಂಪಾದಕರು ಮತ್ತಷ್ಟು ಜವಾಬ್ದಾರಿ ಹೊಂದಿ ಸುದ್ದಿಗಳ ಪ್ರಕಟಿಸಬೇಕು. ಪತ್ರಕರ್ತರಿಗೆ ಸರ್ಕಾರದಿಂದ ಸಿಗಬೇಕಾದ ಮತ್ತಷ್ಟು ಸೌಲಭ್ಯಗಳ ಕೊಡಿಸಲು ನಾನು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್ ಏಕಬೋಟೆ, ಕಾರ್ಯದರ್ಶಿ ಫಕೃದ್ದೀನ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ರಾಜ್ಯ ಸಮಿತಿ ಸದಸ್ಯ ಕೆ.ಚಂದ್ರಣ್ಣ, ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ. ಒಡೆಯರ್, ಬಾ.ಮ.ಬಸವರಾಜಯ್ಯ, ವೀರೇಶ್ ಹನಗವಾಡಿ, ಇತರರಿದ್ದರು.

ವಿಶ್ವಾಸಾರ್ಹ ಸುದ್ದಿಗಳ ಬಿತ್ತರಿಸಿ

ವಾಟ್ಸ್ಯಾಪ್, ಯೂಟ್ಯೂಬ್ ಚಾನೆಲ್‌ಗಳು ಇಂದು ನಾಯಿಕೊಡೆಯಂತೆ ಹುಟ್ಟಿಕೊಂಡಿವೆ. ಯೂ ಟ್ಯೂಬ್ ಚಾನೆಲ್‌ಗೆ ನಿರ್ಬಂಧ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಅನೇಕ ಸುಳ್ಳು ಸುದ್ದಿಗಳ ಹರಡಿ ಟಿಆರ್‌ಪಿ ಹೆಚ್ಚಿಸಿಕೊಳ್ಳಲಾಗುತ್ತಿದೆ. ಆದಷ್ಟು ವಿಶ್ವಾಸಾರ್ಹ ಸುದ್ದಿಗಳ ಬಿತ್ತರಿಸಬೇಕಾಗಿದೆ. ಬಸ್ ಪಾಸ್ ಸೇರಿ ಇತರೆ ಅನೇಕ ಬೇಡಿಕೆಗಳ ಇಟ್ಟುಕೊಂಡಿದ್ದೇವೆ. ಸಂಘಟನೆಯಿಂದ ಮಾತ್ರ ನಮ್ಮ ಹಕ್ಕೋತ್ತಾಯ ಈಡೇರುತ್ತದೆ. ಒಟ್ಟಿಗೆ ಇರುವ ಸಂಘಟನಾತ್ಮಕ ಶಕ್ತಿ ಬೆಳೆಸಿಕೊಳ್ಳಿ.

ಬಿ.ವಿ.ಮಲ್ಲಿಕಾರ್ಜುನಯ್ಯ, ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ