ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣ ನಡೆಯದಂತೆ ತಡೆಗಟ್ಟಬೇಕು ಎಂದು ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು. ನಗರದ ಹೊರವಲಯದಲ್ಲಿರುವ ತಾಲೂಕು ಆಡಳಿತದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ ಸಾಗಾಣಿಕೆ ಹಾಗೂ ಮಾರಾಟ, ಶಾಲೆಯಿಂದ ಹೊರಗುಳಿದ ಮಕ್ಕಳ ಪುನರ್ವಸತಿ, ಪೋಕ್ಸೋ ಕುರಿತು ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.ದೌರ್ಜನ್ಯ ತಡೆಗಟ್ಟಬೇಕು
ಸಮಾಜದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಂವಿಧಾನದ ಅಡಿಯಲ್ಲಿ ಮಕ್ಕಳಿಗೆ ಕನಿಷ್ಠಮಟ್ಟದ ಗುಣಮಟ್ಟದ ಶಿಕ್ಷಣ ಕೊಡಿಸುವ ಜವಾಬ್ದಾರಿ ಪೋಷಕರದ್ದಾಗಿರುತ್ತದೆ. ಬಾಲ್ಯವಿವಾಹ, ಬಾಲಕಾರ್ಮಿಕ,ಪೋಕ್ಸೋ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳ ಮೇಲಿನ ಅಮಾನುಷ ಘಟನೆಗಳ ನಿಯಂತ್ರಣಕ್ಕೆ ಮುಂದಾಗಬೇಕಾಗಿದೆ. ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವ ಜೊತೆಗೆ ಅವರ ರಕ್ಷಣೆ ಬಗ್ಗೆ ನಿಗಾವಹಿಸಬೇಕಾಗಿದೆ ಎಂದರು. ಬದ್ಧತೆಯಿಂದ ಕಾರ್ಯ ನಿರ್ವಹಿಸಿಶಾಲಾ ಕಾಲೇಜುಗಳಿಗೆ ನಿತ್ಯ ತೆರಳುವ ಮಕ್ಕಳ ಶಾಲಾ ವಾಹನಗಳಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆಯ ಬಗ್ಗೆ ಕ್ರಮವಹಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಬಾಲ್ಯವಿವಾಹ, ಪೋಕ್ಸೋ ಪ್ರಕರಗಳ ಬಗ್ಗೆ ಸ್ಥಳೀಯಕಾವಲು ಸಮಿತಿಯವರು ಸೂಕ್ತಕ್ರಮವಹಿಸಿ ಬದ್ದತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಸಮಾಜದಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಹೇಳಿದರು.
ತಾಲೂಕಿನ ವಿವಿಧೆಡೆಗಳಲ್ಲಿ ನಡೆಯುವ ಬಾಲ್ಯವಿವಾಹಗಳನ್ನು ನಿಯಂತ್ರಿಸುವ ಜವಾಬ್ದಾರಿ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳ ಮೇಲಿದೆ. ಒಂದು ಬಾಲ್ಯವಿವಾಹ ಪ್ರಕರಣ ದಾಖಲಾದರೆ ಸ್ಥಳೀಯ ಅಧಿಕಾರಿಗಳು, ಮದುಮಗ, ಅವರ ಪೋಷಕರು,ಕಲ್ಯಾಣ ಮಂಟಪ ಮಾಲೀಕರು, ಪುರೋಹಿತರು, ವಾದ್ಯವೃಂದದವರು, ಮದುವೆಗೆ ಬಂದು ಉಡುಗೊರೆ ನೀಡಿದವರು. ಫೋಟೋಗಳಲ್ಲಿ ಸೆರೆಯಾದ ಪ್ರತಿಯೊಬ್ಬರೂ ಆರೋಪಿಗಳಾಗುತ್ತಾರೆ ಎಂದು ಎಚ್ಚರಿಸಿದರು.ಇವರೆಲ್ಲರ ಮೇಲೆ ಪೊಲೀಸರು ಕೇಸ್ ದಾಖಲಿಸಬಹುದಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಬಾಲ್ಯ ವಿವಾಹಗಳ ನಿಯಂತ್ರಣದ ಬಗ್ಗೆ ಅಧಿಕಾರಿಗಳು ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಮಕ್ಕಳ ರಕ್ಷಣಾ ಸಮಿತಿಬಾಲ್ಯವಿವಾಹ ಕುರಿತು ಹಂತಹಂತವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ. ಪ್ರತಿ ಶಾಲೆ ಮತ್ತು ಕಾಲೇಜಿನಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ.ಸತ್ಯನಾರಾಯಣ ಹೇಳಿದರು.
ಜನಸ್ನೇಹಿ ಪೊಲೀಸ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಪರಿಕಲ್ಪನೆಯನ್ನು ಆರಂಭಿಸಿ ಸ್ಥಳೀಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಆಗಮಿಸಿ ಅಲ್ಲಿನ ಕಾನೂನು ವ್ಯವಸ್ಥೆಯನ್ನು ಅರಿತು ಧೈರ್ಯವಾಗಿರಲು ಪೋತ್ಸಾಹ ನೀಡಲಾಗುತ್ತಿದೆ ಎಂದು ಸಿಪಿಐ ಕೆ.ಪಿ.ಸತ್ಯನಾರಾಯಣ ರವರು ಸಭೆಗೆ ವಿವರವಾಗಿ ತಿಳಿಸಿದರು.ಈ ವೇಳೆ ತಹಸೀಲ್ದಾರ್ ಮಹೇಶ್ ಎಸ್.ಪತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಕೆ.ವೆಂಕಟೇಶ್ ರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಬಿ.ನೌತಾಜ್, ತಾ.ಪಂ ಇ.ಒ ಜಿ.ಕೆ.ಹೊನ್ನಯ್ಯ, ಬಿ.ಇ.ಒ. ಕೆ.ವಿ.ಶ್ರೀನಿವಾಸಮೂರ್ತಿ, ಸಿ.ಡಿ.ಪಿ.ಒ. ಕೆ.ರವಿ, ಸಿಪಿಐ ಕೆ.ಪಿ.ಸತ್ಯನಾರಾಯಣ, ಕರ್ನಾಟಕ ರಾಜ್ಯ ಪೋಷಕರ ಸಂಘಟನೆಯ ಅಧ್ಯಕ್ಷರಾದ ಬಿ.ಎನ್.ಯೋಗಾನಂದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ (ಸಾಂಸ್ಥಿಕ) ಕೆ.ಎನ್.ಮಂಜುನಾಥ್, ಕಾನೂನು ಮತ್ತು ಪರಿವೀಕ್ಷಣಾಧಿ ಕಾರಿ ಡಿ.ಕೆ.ರಾಮೇಗೌಡ, ಜಿಲ್ಲಾ ಸಿ ಡಬ್ಲ್ಯೂಸಿ ಅಧ್ಯಕ್ಷರಾದ ಮುನಿನಾರಾಯಣಸ್ವಾಮಿ, ಸದಸ್ಯರಾದ ಬಿ.ಆರ್.ಮಹೇಶ್, ತ್ರಿಭುವನೇಶ್ವರಿ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು