ನಿಯಮ ಉಲ್ಲಂಘಿಸಿದ ಕ್ರಷರ್‌ಗಳ ವಿರುದ್ಧ ಕ್ರಮ

| Published : Apr 18 2025, 12:39 AM IST

ನಿಯಮ ಉಲ್ಲಂಘಿಸಿದ ಕ್ರಷರ್‌ಗಳ ವಿರುದ್ಧ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಅನೇಕ ಕ್ರಷರ್, ಕ್ವಾರಿಗಳಿಗೆ ಫೆನ್ಸಿಂಗ್ ಮಾಡಿ ಗಡಿ ಗುರುತು ಮಾಡಿ ನಂತರ ಕ್ರಷರ್ ಆರಂಭಿಸಲು ಅಧಿಕಾರಿಗಳು ಸೂಚನೆ ನೀಡಬೇಕಾಗಿತ್ತು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಉಪಲೋಕಾಯುಕ್ತರ ಗಮನಕ್ಕೆ ಬಂದಿತು. ಈ ಬಗ್ಗೆ ಅ‍ರು ಅಧಿಕಾರಿಗಳ ಮೇಲೆ ಕಿಡಿಕಾರಿದರು. ಕೆಲವು ಕ್ರಷರ್ ಮಾಲೀಕರು ವಾಹನಗಳ ಓಡಾಟಕ್ಕೆ ಕೆರೆಗಳನ್ನು ಮುಚ್ಚಿರುವುದು ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ಟೇಕಲ್

ಮಾಲೂರು ತಾಲೂಕಿನ ಟೇಕಲ್ ಬಳಿ ಇರುವ ಕ್ರಷರ್ ಮತ್ತು ಕ್ವಾರಿಗಳು ನಿಯಮ ಉಲ್ಲಂಘಿಸುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಉಪ ಲೋಕಾಯುಕ್ತ ವೀರಪ್ಪನವರು ತರಾಟೆಗೆ ತೆಗೆದುಕೊಂಡರು.

ಅವರು ಗುರುವಾರ ಟೇಕಲ್ ವ್ಯಾಪ್ತಿಯಲ್ಲಿನ ಮಿಟ್ಟಿಗಾನಹಳ್ಳಿ, ಮಾಕಾರಹಳ್ಳಿ, ಕೊಮ್ಮನಹಳ್ಳಿ, ಸುತ್ತಮುತ್ತ ಇರುವ ಕ್ರಷರ್‌ಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಕ್ರಷರ್‌ಗಳು ನಿಯಮ ಉಲ್ಲಂಘಿಸುತ್ತಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ಬೇಜವಾಬ್ದಾರಿ

ಇಲ್ಲಿನ ಅನೇಕ ಕ್ರಷರ್, ಕ್ವಾರಿಗಳಿಗೆ ಫೆನ್ಸಿಂಗ್ ಮಾಡಿ ಗಡಿ ಗುರುತು ಮಾಡಿ ನಂತರ ಕ್ರಷರ್ ಆರಂಭಿಸಲು ಅಧಿಕಾರಿಗಳು ಸೂಚನೆ ನೀಡಬೇಕಾಗಿತ್ತು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿರುವುದೆ ಕಂಡು ಬಂದಿಲ್ಲ ಎಂದು ಅಧಿಕಾರಿಗಳ ಮೇಲೆ ಕಿಡಿಕಾರಿದರು. ಕೆಲವು ಕ್ರಷರ್ ಮಾಲೀಕರು ವಾಹನಗಳ ಓಡಾಟಕ್ಕೆ ಕೆರೆಗಳನ್ನು ಮುಚ್ಚಿ ರಸ್ತೆ ಮಾಡಿಕೊಂಡಿರುವುದನ್ನು ಸುತ್ತಮುತ್ತಲ ರೈತರಿಂದ ಮಾಹಿತಿ ಪಡೆದರು.

ನಂತರ ತಹಸೀಲ್ದಾರ್ ರೂಪಾರವರಿಗೆ ಕೆರೆಗಳಲ್ಲಿ ನಿರ್ಮಾಣ ಮಾಡಿರುವ ರಸ್ತೆಗಳನ್ನು ತೆರವು ಮಾಡಿಸಲು ಗಡುವು ನೀಡಿದರು. ಕಾನೂನು ಪಾಲನೆ ಮಾಡದ ಗಣಿ ಅಧಿಕಾರಿ, ಜಿಲ್ಲಾ ಸರ್ವೇ ಅಧಿಕಾರಿಗಳು (ಎಡಿಎಲ್‌ಆರ್) ಮತ್ತು ತಹಸೀಲ್ದಾರ್ ವಿರುದ್ಧ ಸುಮೋಟೋ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಸಿದರು. ಭೇಟಿ ನೀಡದ ಅಧಿಕಾರಿಗಳು

ಕ್ರಷರ್ ಪರವಾನಿಗೆ ನೀಡಿದ ನಂತರ ಇದಕ್ಕೆ ಸಂಬಂಧಪಟ್ಟಂತ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾನೂನು ರೀತಿಯ ಪಾಲನೆ ನಡೆಸುತ್ತಿದ್ದಾರೆಯೇ ಇಲ್ಲವೆ ಎಂಬುದನ್ನು ಪರಿಶೀಲಿಸಬೇಕು. ನಿಯಮ ಮೀರಿದ್ದರೆ ಮಾಲೀಕರಿಗೆ ಎಚ್ಚರಿಕೆ ನೀಡಬೇಕು ಮತ್ತು ಕ್ವಾರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ನಿಯಮಾನುಸಾರ ಸರ್ಕಾರಿ ಸೌಲಭ್ಯಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಕಾಲಕಾಲಕ್ಕೆ ಒದಗಿಸುತ್ತಿದ್ದಾರೆ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ಮಾಡಿಲ್ಲ ಎಂದು ಹೇಳಿದರು.

ಸಣ್ಣಪುಟ್ಟ ಅನಾಹುತಗಳಾದಾಗ ಅವರಿಗೆ ಸರ್ಕಾರದಿಂದ ಸಿಗುವ ಪರಿಹಾರ ಮತ್ತು ಸೌಲಭ್ಯಗಳು ನೇರವಾಗಿ ಅವರ ಕುಟುಂಬಸ್ಥರಿಗೆ ಪಡೆಯಲು ಅನುಕೂಲವಾಗುತ್ತದೆ. ಆದರೆ ಸ್ಥಳೀಯ ಅಧಿಕಾರಿಗಳು ಇದಾವುದನ್ನು ಗಮನಿಸದೆ ಪರವಾನಿಗೆ ನೀಡಿರುವುದರ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದರು.ಆರೋಗ್ಯ ರಕ್ಷಣೆಗೆ ಪರಿಸರ ಕಾಪಾಡಿ

ಪರಿಸರ ಕಾಪಾಡಲು ಸರ್ಕಾರಿ ಜಮೀನು ಈ ಹಿಂದೆ ಪೂರ್ವಜರು ಮೀಸಲು ಇಟ್ಟಿದ್ದರು (ಕೆರೆ, ಕುಂಟೆ, ಬಾವಿ, ಗೋಮಾಳ). ಆದರೆ ಇಂದು ಸರ್ಕಾರಿ ಜಾಗಗಳನ್ನು ಉಳ್ಳವರು ಕಾರ್ಖಾನೆಗಳಾಗಿ ಪರಿವರ್ತಿಸಿಕೊಂಡಿದ್ದಾರೆ. ಇದರಿಂದ ಮುಂದಿನ ಪೀಳಿಗೆಗೆ, ಪ್ರಾಣಿ ಪಕ್ಷಿಗಳಿಗೆ ನೀರು ಆಹಾರಕ್ಕಾಗಿ ಪರದಾಡುವಂತಹ ಪರಿಸ್ಥಿತಿ ತಲೆದೋರಲಿದೆ. ಜನ ವಸತಿ ಇರುವ ಪ್ರದೇಶಗಳಲ್ಲಿ ಕ್ರಷರ್‌ಗಳು ನಡೆಸುತ್ತಿರುವವರು, ಜನರ ಮೇಲೆ ಬೀಳುವ ಆರೋಗ್ಯದ ದುಷ್ಪರಿಣಾಮಗಳನ್ನು ತಡೆಗಟ್ಟಲು ಮರಗಿಡಗಳನ್ನು ಬೆಳೆಸಿ ಪರಿಸರ ಕಾಪಾಡಬೇಕು. ಉಪಲೋಕಾಯುಕ್ತ ಭೇಟಿ ಸಂದರ್ಭದಲ್ಲಿ ಕೋಲಾರ ಉಪವಿಭಾಗಾಧಿಕಾರಿ ಮೈತ್ರಿ, ತಹಸೀಲ್ದಾರ್ ರೂಪಾ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಶ್ವನಾಥ, ಲೋಕಾಯುಕ್ತ ಎಸ್.ಪಿ.ಧನಂಜಯ್ಯ, ಎಡಿಎಲ್‌ಆರ್ ಕೃಷ್ಣ, ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿ ಸರಿನಾ ಸಿಗಲಿಕರ್, ಪರಿಸರ ಇಲಾಖೆ ರಾಜು, ಮಾಲೂರು ಇಒ ಕೃಷ್ಣಪ್ಪ, ಆರ್‌ಐ ನಾರಾಯಣಸ್ವಾಮಿ, ಬೆಸ್ಕಾಂ ಅಧಿಕಾರಿ ಅನ್ಸರ್‌ಪಾಷ, ಇನ್ನೂ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ಸಂದರ್ಭದಲ್ಲಿ ಹಾಜರಿದ್ದರು.