District In-charge and Home Minister Priyank Kharge warned that strict action would be taken against officials who display negligence or a dismissive attitude by failing to properly respond to public grievances during the current crisis—marked by severe drought, water scarcity, and a shortage of fodder
-ಅಧಿಕಾರಿಗಳ ಸಭೆಯಲ್ಲಿ ಸಚಿವ ಪ್ರಿಯಾಂಕ್ ಎಚ್ಚರಿಕೆ------
ಕನ್ನಡಪ್ರಭ ವಾರ್ತೆ ಕಲಬುರಗಿ.ಹವಾಮಾನ ವೈಪರಿತ್ಯದಿಂದಾಗಿ ಭೀಕರ ಬರಗಾಲ, ನೀರಿನ ತಾಪತ್ರಯ, ಮೇವಿನ ಕೊರತೆಯಂತಹ ಹಲವು ಸಂಕಷ್ಟಗಳು ಎದುರಾಗಿದ್ದು, ಈ ಸಂದರ್ಭ ಅಧಿಕಾರಿಗಳು ಜನರ ಅಹವಾಲುಗಳಿಗೆ ಸರಿಯಾಗಿ ಸ್ಪಂದಿಸದೆ ನಿರ್ಲಕ್ಷ್ಯ, ಉಡಾಫೆತನ ತೋರಿರುವ ದೂರು ಕೇಳಿಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದರು.ರೈತರ ಹೊಲಗದ್ದೆಗಳಿಗೆ ಖುದ್ದು ಭೇಟಿ ನೀಡಿ ಜಿಲ್ಲಯ ಬರಗಾಲ ಪರಿಸ್ಥಿತಿ ವೀಕ್ಷಿಸಿದ ಬಳಿಕ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಸಚಿವರು ಮಾತನಾಡಿ, ಅಂತರ್ಜಲ ಮಟ್ಟ ಕುಸಿದಿದೆ, ಜಾನುವಾರು ಮೇವಿನ ಕೊರತೆ ಕಾಡಲಿದ್ದು, ರೈತರು ಬಿತ್ತಿದ ಬೆಳೆ ಮುರುಟುತ್ತಿದೆ. ಬರುವ ದಿನಗಳು ಇನ್ನೂ ಭೀಕರವಾಗಿರಲಿದೆ. ಪರಿಹಾರಕ್ಕಾಗಿ ಈಗಾಗಲೇ ರೈತರು ಬೀದಿಗೆ ಇಳಿಯುತ್ತಿದ್ದಾರೆ ಎಂದರು.ಸರ್ಕಾರದ ಮಾರ್ಗಸೂಚಿಗಳ ಅನ್ವಯ ಜನಪರ ನಿಲುವಿನೊಂದಿಗೆ ಕೆಲಸ ಮಾಡದೆ ತಮ್ಮ ಮೊಬೈಲ್‌ಗಳನ್ನು ವ್ಯಾಪ್ತಿಪ್ರದೇಶದಿಂದ ಹೊರಗಿಟ್ಟು ಸಂಚರಿಸುವ ಅಧಿಕಾರಿಗಳ ಕುರಿತು ಮಾಹಿತಿ ಇದ್ದು, ಈ ಪೈಕಿ ಪಿಡಿಒಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳೇ ಅಧಿಕವಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
*ಕ್ರಿಮಿನಲ್ ಕೇಸ್: ನಗರದಲ್ಲಿ ನಿರಂತರ ನೀರು ಯೋಜನೆ ಅನುಷ್ಠಾನ ಏಜನ್ಸಿ ಎಲ್ ಆಂಡ್ ಟಿ ಕಂಪನಿಯ ಲೋಪಗಳನ್ನು ಪಟ್ಟಿ ಮಾಡಿ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸಚಿವರು ಪಾಲಿಕೆ ಆಯುಕ್ತ ಅವಿನಾಶ ಶಿಂಧ ಅವರಿಗೆ ಸೂಚಿಸಿದರು. ಕಂಪನಿ ನಗರದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮಾಡದೆ ಕುಂಟುನೆಪ ಹೇಳುತ್ತಿದೆ. ಇದರಿಂದ ನೀರು ಪೂರೈಕೆಯಲ್ಲಿ ಭಾರಿ ಸಮಸ್ಯೆ ಎದುರಾಗಿರುವುದು ಜನರ ದೂರುಗಳಿಂದ ಗೊತ್ತಾಗಿದೆ. ಎಲ್ ಆಂಡ್ ಟಿ ಕಂಪನಿ ಅನುಷ್ಠಾನ ದೋಷಗಳು ಸಾಕಷ್ಟಿದ್ದು, ಸರಿಪಡಿಸಿಕೊಳ್ಳಬೇಕು ಎಂದು ಸಚಿವರು ಎಚ್ಚರಿಕೆ ನೀಡಿದರು.